Home ರಾಜ್ಯ ಮೈಸೂರು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಏನು ಕೊಟ್ಟಿದೆ? ರಾಜ್ಯಕ್ಕೆ ಏನೂ ಕೊಡದೆ ಅನ್ಯಾಯವಾಗಿಲ್ಲ ಎಂದರೆ ಹೇಗೆ: ಸಿಎಂ...

ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಏನು ಕೊಟ್ಟಿದೆ? ರಾಜ್ಯಕ್ಕೆ ಏನೂ ಕೊಡದೆ ಅನ್ಯಾಯವಾಗಿಲ್ಲ ಎಂದರೆ ಹೇಗೆ: ಸಿಎಂ ಸಿದ್ದರಾಮಯ್ಯ ಪ್ರಶ್ನೆ

0

ಮೈಸೂರು, ಜುಲೈ 29: ರಾಜ್ಯಕ್ಕೆ ಏನೂ ಕೊಡದೆ ಅನ್ಯಾಯವಾಗಿಲ್ಲ ಎಂದರೆ ಹೇಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಇಂದು ಮಾತನಾಡಿದರು.

ಘೋಷಣೆ ಮಾಡಿದ್ದ ಅನುದಾನ ಕೊಟ್ಟಿಲ್ಲ
ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿ ಕರೆದು ರಾಜ್ಯಕ್ಕೆ ಅನ್ಯಾಯವಾಗಿಲ್ಲ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬಜೆಟ್ ಮೀಟಿಂಗ್ ಕರೆದಾಗ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿಗಳನ್ನೂ ನೀಡುವುದಾಗಿ ಘೋಷಣೆ ಮಾಡಿದ್ದು, ಅದನ್ನು ಕೊಡಿ ಎಂದು ಕೋರಿದ್ದೆವು. ಈ ಬಾರಿಯ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪವಿಲ್ಲ. 15 ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ 5495 ಕೋಟಿಗಳ ವಿಶೇಷ ಅನುದಾನವನ್ನೂ ಕೊಟ್ಟಿಲ್ಲ. ಪೇರಿಫೇರಲ್ ರಿಂಗ್ ರೋಡ್ ಗೆ 3000ಕೋಟಿ ಕೊಡುವುದಾಗಿ ಹೇಳಿದ್ದರು.ಅದೂ ಇಲ್ಲ. 3000 ಕೋಟಿ ಕೆರೆಗಳ ಅಭಿವೃದ್ಧಿಗೆ ಕೊಡುವುದಾಗಿ ಹೇಳಿದ್ದರು. ಅದೂ ಕೂಡ ಬಜೆಟ್ ನಲ್ಲಿ ಇಲ್ಲ. ಇದು ಅನ್ಯಾಯವಲ್ಲವೇ..?ಆಂಧ್ರ, ಬಿಹಾರ ರಾಜ್ಯಗಳಿಗೆ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ನಿರ್ಮಲಾ ಸೀತಾರಾಮನ್ ಹಿಂದೆಯೂ ಸುಳ್ಳು ಹೇಳಿದ್ದರು ಈಗಲೂ ಸುಳ್ಳು ಹೇಳಿದ್ದಾರೆ
ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ ಅನುದಾನವನ್ನು ನಾವು ಕೊಡಿಸುತ್ತೇವೆ ಎಂದು ಪ್ರಸ್ತಾಪ ಮಾಡಬಹುದಿತ್ತು. ಕೇಂದ್ರ ಸಚಿವರ ಕ್ಷೇತ್ರ ರಾಮನಗರಕ್ಕೂ ಏನಾದರೂ ಹೊಸದು ಯೋಜನೆ ಬಂದಿದೆಯೇ? ಕೈಗಾರಿಕಾ ಕಾರಿಡಾರ್ ಬಂದಿದೆಯೇ? ಮೇಕೆದಾಟು, ಕೈಗಾರಿಕೆ ಹಾಗೂ ಕೇಳಿದ ಅನುದಾನ ಕೊಟ್ಟಿಲ್ಲ. ರಾಯಚೂರಿಗೆ ಏಮ್ಸ್ ಸ್ಥಾಪಿಸುವಂತೆ ಕೋರಿದ್ದೆವು. ಆದರೆ ಯಾವುದೇ ಪ್ರಸ್ತಾಪವಾಗಿಲ್ಲ. ಮೈಸೂರು ಅಥವಾ ಹಾಸನಕ್ಕೆ ಐ ಐ ಟಿ ಮಂಜೂರು ಮಾಡಲು ಮನವಿ ಮಾಡಿದ್ದೆವು ಅದೂ ಕೂಡ ಆಗಿಲ್ಲ ಹಾಗಾದರೆ ಅನ್ಯಾಯವಾಗಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ನಿರ್ಮಲಾ ಸೀತಾರಾಮನ್ ಹಿಂದೆಯೂ ಸುಳ್ಳು ಹೇಳಿದ್ದರು ಈಗಲೂ ಸುಳ್ಳು ಹೇಳಿದ್ದಾರೆ ಎಂದರು.

ಕೇಂದ್ರದ ನೀತಿ , ಕಾರ್ಯಕ್ರಮಗಳಿಂದ ಶೇ 31% ದೇಶಕ್ಕೆ ಬರುತ್ತಿರುವ ಎಫ್.ಡಿ.ಐ ಕಡಿಮೆಯಾಗಿದೆ

15 ನೇ ಹಣಕಾಸು ಯೋಜನೆಯಲ್ಲಿ ಅತಿ ಹೆಚ್ಚು ಅನ್ಯಾಯವಾಗಿರುವ ರಾಜ್ಯ ಕರ್ನಾಟಕ. ರಾಜ್ಯದಿಂದ ರಾಜ್ಯ ಸಭಾ ಸದಸ್ಯರಾಗಿರುವ ಅವರು ಕೈಗಾರಿಕೆಗಳೆಲ್ಲಾ ಬೇರೆ ರಾಜ್ಯಕ್ಕೆ ಹೋಗುತ್ತಿವೆ ಎಂದೂ ಹೇಳಿದ್ದಾರೆ. ಆದರೆ ನಮ್ಮ ಕೇಂದ್ರ ಸರ್ಕಾರದ ಹಣಕಾಸು ಸಚಿವರ
ನೀತಿ , ಕಾರ್ಯಕ್ರಮಗಳಿಂದ ಶೇ 31% ನಮ್ಮ ದೇಶಕ್ಕೆ ಬರುತ್ತಿರುವ ಎಫ್.ಡಿ.ಐ ಕಡಿಮೆಯಾಗಿದೆ. ಕೇಂದ್ರಕ್ಕೆ ತೆರಿಗೆ ನೀಡುವಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ 2 ನೇ ಸ್ಥಾನದಲ್ಲಿದೆ ಇನ್ನೇನು ಕೊಡುಗೆ ಕೊಡಬೇಕು? ಎಂದು ಪ್ರಶ್ನಿಸಿದರು.

ಅವರೇ 2023-24 ನೇ ಬಜೆಟ್ ನಲ್ಲಿ ಹೇಳಿದಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5300 ಕೋಟಿಗಳನ್ನು ಕೊಟ್ಟಿಲ್ಲ . ಅವರ ಘೋಷಣೆ ನೋಡಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಬಜೆಟ್ ನಲ್ಲಿ ಪುನರುಚ್ಚರಿಸಿದ್ದರು ಎಂದರು.

ಕೇಂದ್ರ ಸರ್ಕಾರ 15 ಲಕ್ಷ ಕೋಟಿ ಸಾಲ ಮಾಡಿದೆ.
ಕೇಂದ್ರದ ಧೋರಣೆಗೆ ನೀತಿ ಆಯೋಗದ ಸಭೆಯನ್ನು ನಾವು ಬಹಿಷ್ಕರಿಸಿದೆವು. ತಮಿಳುನಾಡು, ತೆಲಂಗಾಣ ಹಾಗೂ ಬಿಜೆಪಿ ವಿರುದ್ಧವಾಗಿರುವ ಅನೇಕ ರಾಜ್ಯಗಳು ಹೋಗಿಲ್ಲ. ಮಮತಾ ಬ್ಯಾನರ್ಜಿ ಅವರು ಸಭೆಗೆ ಹಾಜರಾಗಿ ಮಾತನಾಡಲು ಸಮಯ ನೀಡಿಲ್ಲ ಎಂದು ಸಭೆಯಿಂದ ಹೊರನಡೆದರು ಎಂದರು. ಇವರು ನಮಗೆ ಪಾಠ ಹೇಳಿಕೊಡುತ್ತಾರೆ. ಇವರ ತಪ್ಪುಗಳಿಗೆ ಇಂದು ದೇಶದಲ್ಲಿ ಹೂಡಿಕೆಯಾಗುತ್ತಿಲ್ಲ. ನಾವು ಸಾಲ ಹೆಚ್ಚು ಮಾಡಿದ್ದೇವೆ ಎನ್ನುತ್ತಾರೆ. ನಾವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ಜಿಡಿಪಿಯ ಶೇ 25% ರೊಳಗೇ ಇದ್ದೇವೆ. ಅವರು ಸುಮಾರು 15 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದರು.

ಕರ್ನಾಟಕ ಭ್ರಷ್ಟ ರಾಜ್ಯವಲ್ಲ

ಕರ್ನಾಟಕದ ಸಂಸದರು ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕು. ಕರ್ನಾಟಕ ಭ್ರಷ್ಟ ರಾಜ್ಯ ಎಂದು ಅವರು ಮಸಿ ಬಳಿಯುತ್ತಿದ್ದಾರೆ. ಕರ್ನಾಟಕ ಭ್ರಷ್ಟ ರಾಜ್ಯವಲ್ಲ. ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಕಡಿಮೆಯಾಗುತ್ತಿದೆ ಎಂದರು.

You cannot copy content of this page

Exit mobile version