Home ಇನ್ನಷ್ಟು ಕೋರ್ಟು - ಕಾನೂನು ಯುಪಿಐ ಮೂಲಕ ಹಣ ಪಾವತಿಗೆ ‘ಬೆಸ್ಕಾಂ’ ನಕಾರ ; ಹೈಕೋರ್ಟ್ ಚಾಟಿ

ಯುಪಿಐ ಮೂಲಕ ಹಣ ಪಾವತಿಗೆ ‘ಬೆಸ್ಕಾಂ’ ನಕಾರ ; ಹೈಕೋರ್ಟ್ ಚಾಟಿ

0

ಯುಪಿಐ ಮೂಲಕ ಠೇವಣಿ ಹಣ ಪಡೆಯಲು ನಿರಾಕರಿಸಿದ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದ (ಬೆಸ್ಕಾಂ) ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. “ತರಕಾರಿ ಸೇರಿ ಎಲ್ಲಾ ಅಂಗಡಿಯವರೂ ಯುಪಿಐ ಮೂಲಕ ಹಣ ಪಡೆಯುತ್ತಾರೆ. ನೀವು ತೆಗೆದುಕೊಳ್ಳುವುದಿಲ್ಲ ಎಂದರೆ ಹೇಗೆ?” ಎಂದು ಮೌಖಿಕವಾಗಿ ಚಾಟಿ ಬೀಸಿದೆ.

ವಾಣಿಜ್ಯ ಕಟ್ಟಡಕ್ಕೆ ಹೆಚ್ಚುವರಿ ವಿದ್ಯುತ್‌ ಬೇಡಿಕೆಗೆ ಸಂಬಂಧಿಸಿ ಭದ್ರತಾ ಠೇವಣಿ ಹಣವನ್ನು ಕೌಂಟರ್‌ನಲ್ಲಿ ಯುಪಿಐ ಸ್ಕ್ಯಾನರ್‌ ಮೂಲಕ ಪಾವತಿಸಲು ಅನುಮತಿಸಬೇಕು ಮತ್ತು ಕರ್ನಾಟಕ ವಿದ್ಯುತ್‌ಚ್ಛಕ್ತಿ ಕಾಯಿದೆ ಸೆಕ್ಷನ್‌ 47(5) ಜಾರಿ ಕೋರಿ ಬೆಂಗಳೂರಿನ ಹೊಸಕೋಟೆಯ ಸೀತಾಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ಗೌಡ ಅವರ ಏಕಸದಸ್ಯ ಪೀಠ ಬೆಸ್ಕಾಂ ಕ್ರಮದ ಬಗ್ಗೆ ಆಕ್ಷೇಪ ಹೊರಹಾಕಿದೆ.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಶ್ರೀಧರ್‌ ಪ್ರಭು ಅವರು “ಹೆಚ್ಚುವರಿ ವಿದ್ಯುತ್‌ಗೆ ಠೇವಣಿ ಹಣ ಪಾವತಿಸಲು ಫಾಸ್ಟ್‌ ಟ್ರ್ಯಾಕ್‌ ತಂತ್ರಾಂಶದ ಮೂಲಕವೂ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ತಿರಸ್ಕರಿಸಿದ ಬೆಸ್ಕಾಂ ಅಧಿಕಾರಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ. ಯುಪಿಐ ಸ್ಕ್ಯಾನರ್‌ ಹಾಕಲು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹಿಂಬರಹ ನೀಡಿದ್ದಾರೆ. ಇದರಿಂದ ವಯಸ್ಸಾದವರು, ಹಿರಿಯ ನಾಗರಿಕರಿಗೆ ಸಮಸ್ಯೆಯಾಗಿದೆ” ಎಂದು ದೂರಿದ್ದಾರೆ.

ಸರ್ಕಾರದ ಪರ ವಕೀಲರು “ಠೇವಣಿ ಹಣವನ್ನು ಫಾಸ್ಟ್‌ಟ್ರ್ಯಾಕ್‌ ತಂತ್ರಾಂಶದ ಮೂಲಕ ಪಾವತಿಸಲು ಸೂಚಿಸಲಾಗಿದೆ. ಬೆಸ್ಕಾಂ ಜನಸ್ನೇಹಿ ಸೇವೆಗಳ ಫಾಸ್‌ಟ್ರ್ಯಾಕ್‌ ತಂತ್ರಾಂಶದಲ್ಲಿ ನೋಂದಣಿ ಮಾಡಿದರೆ 24 ಗಂಟೆಗಳೂ ಹಣ ಪಾವತಿಸಬಹುದು. ಇದರಲ್ಲಿ ಸ್ಕ್ಯಾನರ್/ಯುಪಿಐ/ಡಿಜಿಟಲ್‌ ವ್ಯವಸ್ಥೆ ಮೂಲಕ ಹಣ ಪಾವತಿಸಬಹುದು. 10 ಸಾವಿರ ರೂಪಾಯಿ ಮೇಲಾದರೆ ಡಿಡಿ ಸಲ್ಲಿಸಬೇಕು. ಆದರೆ, ಅರ್ಜಿದಾರರು ಬ್ಯಾಂಕ್‌ಗೆ ಹೋಗಲು ಸಿದ್ಧರಿಲ್ಲ. ಸ್ಕ್ಯಾನರ್‌ ಕೇಳುತ್ತಿದ್ದಾರೆ. ಬೆಸ್ಕಾಂ ಕೌಂಟರ್‌ಗಳಲ್ಲಿ ಯುಪಿಐ ಸ್ಕ್ಯಾನರ್‌ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳುತ್ತೇವೆ. ಆ ಪ್ರಕ್ರಿಯೆ ಚಾಲ್ತಿಯಲ್ಲಿದೆ” ಎಂದರು.

ಅಂತಿಮವಾಗಿ ನ್ಯಾಯಾಲಯವು “ಇಡೀ ಜಗತ್ತು ಯುಪಿಐ ಮೂಲಕ ಹಣ ಸ್ವೀಕರಿಸುತ್ತಿರುವಾಗ ಬೆಸ್ಕಾಂ ಯುಪಿಐ ವಿಧಾನದ ಮೂಲಕ ಹಣ ಸ್ವೀಕರಿಸಲು ಇಂಥಾ ಕಾಲದಲ್ಲೂ ನಿರಾಕರಿಸುತ್ತಿರುವುದು ವಿಚಿತ್ರ” ಎಂದು ಆದೇಶದಲ್ಲಿ ದಾಖಲಿಸಿದೆ.

“ಬೆಸ್ಕಾಂನ ಎಲ್ಲಾ ಪಾವತಿಗಳಿಗೆ ಸಂಬಂಧಿಸಿದಂತೆ ಯುಪಿಐ ಅಥವಾ ಆನ್‌ಲೈನ್‌ ವಿಧಾನದ ಮೂಲಕ ಹಣ ಪಾವತಿಸಲು ಏಕೆ ವ್ಯವಸ್ಥೆ ಮಾಡಿಲ್ಲ ಎಂಬುದರ ಕುರಿತು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಆಗಸ್ಟ್‌ 9ರ ಒಳಗೆ ಅಫಿಡವಿಟ್‌ ಸಲ್ಲಿಸಬೇಕು” ಎಂದು ವಿಚಾರಣೆ ಮುಂದೂಡಿದೆ.

You cannot copy content of this page

Exit mobile version