ಹೊಸದಿಲ್ಲಿ: ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ‘ಪಿಎಂ ವಿದ್ಯಾಲಕ್ಷ್ಮಿ’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ವಿವರಗಳನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ತಿಳಿಸಿದರು. ಪ್ರಧಾನಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆಯಡಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದವರು ಆ ಸಂಸ್ಥೆಗಳಲ್ಲಿ ಓದಲು ‘ವಿದ್ಯಾ ಲಕ್ಷ್ಮಿ ಯೋಜನೆ’ ಮೂಲಕ ಸಾಲ ಪಡೆಯಬಹುದು. ಈ ಸಾಲಗಳಿಗೆ ಜಾಮೀನು ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ದೇಶಾದ್ಯಂತ 860 ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಖಾತರಿಯೊಂದಿಗೆ ರೂ.7.50 ಲಕ್ಷದವರೆಗೆ ಸಾಲ ಪಡೆಯಬಹುದು. 75ರಷ್ಟು ಸಾಲವನ್ನು ಬ್ಯಾಂಕ್‌ಗಳಿಗೆ ಕೇಂದ್ರವು ಖಾತರಿ ನೀಡುತ್ತದೆ. ಈ ಯೋಜನೆಯಡಿ ಪ್ರತಿ ವರ್ಷ ಗರಿಷ್ಠ 22 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ ಎಂದರು. ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷದವರೆಗೆ ಇರುವವರಿಗೆ ಈ ಯೋಜನೆಯನ್ನು ಅನ್ವಯಿಸಲಾಗುತ್ತದೆ. ಪಿಎಂ ವಿದ್ಯಾ ಲಕ್ಷ್ಮಿ ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ನೇರವಾಗಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದರು.
ಎಫ್‌ಸಿಐಗೆ ಬಂಡವಾಳ ಹೂಡಿಕೆಗಾಗಿ 10,700 ಕೋಟಿ ಈಕ್ವಿಟಿ
2024-25ರ ಹಣಕಾಸು ವರ್ಷದಲ್ಲಿ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಬಂಡವಾಳ ಹೂಡಿಕೆಗಾಗಿ ರೂ 10,700 ಕೋಟಿ ಇಕ್ವಿಟಿಯನ್ನು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಅನುಮೋದನೆ ನೀಡಿದೆ. ಎಫ್‌ಸಿಐ ತಕ್ಷಣದ ಹಣಕಾಸಿನ ಅಗತ್ಯಗಳಿಗಾಗಿ ಅಲ್ಪಾವಧಿಯ ಸಾಲಗಳನ್ನು ಅವಲಂಬಿಸಿದೆ ಮತ್ತು ಈಗ ಲಭ್ಯವಿರುವ ಈಕ್ವಿಟಿಯು ಕಂಪನಿಯ ಬಡ್ಡಿ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಇದರಿಂದ ಕೇಂದ್ರ ಸರ್ಕಾರದ ಅನುದಾನವೂ ಕಡಿಮೆಯಾಗಲಿದೆ ಎಂದರು.