Home ಬೆಂಗಳೂರು ರೈಲ್ವೇ ಟಿಕೆಟ್‌ ದರ ಹೆಚ್ಚಳ | ರೈತರ ನೆರವಿಗೆಂದು ಹಾಲಿನ ದರ ಹೆಚ್ಚಿಸಿದಾಗ ಬೊಬ್ಬಿಟ್ಟಿದ್ದ ಬಿಜೆಪಿಯವರು...

ರೈಲ್ವೇ ಟಿಕೆಟ್‌ ದರ ಹೆಚ್ಚಳ | ರೈತರ ನೆರವಿಗೆಂದು ಹಾಲಿನ ದರ ಹೆಚ್ಚಿಸಿದಾಗ ಬೊಬ್ಬಿಟ್ಟಿದ್ದ ಬಿಜೆಪಿಯವರು ಈಗ ಸದ್ದಿಲ್ಲದೆ ಬಿಲ ಸೇರಿಕೊಂಡಿದ್ದಾರೆ: ಸಿಎಮ್

0

ಸಾಮಾನ್ಯ ಜನರ ಸಾರಿಗೆಯಾಗಿಯೇ ಜನಪ್ರಿಯವಾಗಿರುವ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ಮಧ್ಯಮ ಮತ್ತು ಬಡವರ್ಗದ ಬದುಕಿನ ಮೇಲೆ ಬರೆ ಎಳೆದಿದೆ. ಈ ಬೆಲೆ ಏರಿಕೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇನೆ ಎಂದು ಸಿಎಮ್‌ ಸಿದ್ದರಾಮಯ್ಯ ಹೇಳಿದ್ದಾರೆ.

ಏರುತ್ತಲೇ ಇರುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರಗಳ ಭಾರದಿಂದ ಜನರು ಈಗಾಗಲೇ ತತ್ತರಿಸಿಹೋಗಿದ್ದಾರೆ. ಹಾಲು, ಮೊಸರು, ಚಹಾ ಪುಡಿಯಿಂದ ಹಿಡಿದು ಪಾಪ್ ಕಾರ್ನ್ ವರೆಗೆ ಎಲ್ಲದರ ಮೇಲೆ ಜಿಎಸ್‌ಟಿ ಹೇರಿಕೆಯಿಂದಾಗಿ ಪ್ರತಿಯೊಂದು ಕುಟುಂಬದ ಬಜೆಟ್ ಏರುಪೇರಾಗಿದೆ. ಇದೇ ವೇಳೆ ರೈಲು ಪ್ರಯಾಣದ ದರ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಜನರ ಜೇಬು ಖಾಲಿ ಮಾಡಲು ಹೊರಟಿದೆ.

ನಮ್ಮ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಹಾಲಿನ ದರ ಏರಿಕೆ ಮಾಡಿದಾಗ ಜನವಿರೋಧಿ ಎಂದು ಬೊಬ್ಬಿಟ್ಟಿದ್ದ ಬಿಜೆಪಿ ನಾಯಕರು ತಮ್ಮದೇ ಸರ್ಕಾರ ರೈಲು ಪ್ರಯಾಣ ಹೆಚ್ಚಿಸಿದಾಗ ಸದ್ದಿಲ್ಲದೆ ಬಿಲ ಸೇರಿಕೊಂಡಿದ್ದಾರೆ. ಬೆಂಗಳೂರು ಮೆಟ್ರೊ ರೈಲಿನ ಪ್ರಯಾಣ ದರ ಏರಿಕೆಯಾದಾಗ ಬೀದಿಗಿಳಿದಿದ್ದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಹೊಂದಿರುವ ದರ ನಿರ್ಣಯ ಸಮಿತಿಯೇ ಆ ಏರಿಕೆಯ ನಿರ್ಧಾರ ಕೈಗೊಂಡಿರುವುದನ್ನು ಬಚ್ಚಿಟ್ಟು ನಮ್ಮ ಸರ್ಕಾರದ ವಿರುದ್ದ ಜನರನ್ನು ಎತ್ತಿಕಟ್ಟುವ ವಿಫಲ ಪ್ರಯತ್ನ ನಡೆಸಿದ್ದರು ಎಂದು ಅವರು ಆರೋಪಿಸಿದ್ದಾರೆ.

ರೈಲ್ವೆ ಇಲಾಖೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿದ್ದು, ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಪ್ರಯಾಣಿಕರು ಸಂಚರಿಸುವ ಈ ಸಾರಿಗೆ ವ್ಯವಸ್ಥೆ ಈಗಲೂ ಲಾಭದಾಯಕವಾಗಿದೆ. ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ಬಜೆಟ್ ಮಂಡನೆಯ ಪದ್ಧತಿಯನ್ನು ನರೇಂದ್ರ ಮೋದಿ ಸರ್ಕಾರ ಕೈಬಿಟ್ಟಿರುವ ಕಾರಣ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೊದಲು ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಶ್ವೇತಪತ್ರವನ್ನು ದೇಶದ ಜನತೆಯ ಮುಂದಿಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇನೆ ಎಂದು ಆಗ್ರಹಿಸಿದ್ದಾರೆ.

You cannot copy content of this page

Exit mobile version