ವಿವಾದಾತ್ಮಕ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ 2021 ಮತ್ತು 2023 ರಲ್ಲಿ ತಿದ್ದುಪಡಿ ತಂದು, ಈ ಕಾಯ್ದೆಯನ್ನು ಮಾಧ್ಯಮ ಸಂಸ್ಥೆಗಳ ವಿರುದ್ಧ ಬಳಸಲಾಗುತ್ತಿದೆ. ದಿ ಕ್ಯಾರವಾನ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನೆ ವಿರುದ್ಧ ಮಾಡಲಾಗಿರುವ ಚಿತ್ರಹಿಂಸೆ ಮತ್ತು ಕೊಲೆಯ ಆರೋಪಗಳ ಬಗೆಗಿನ ಲೇಖನವನ್ನು ತೆಗೆದುಹಾಕಲು ಆದೇಶಿಸಲಾಗಿದೆ.
ಐಟಿ ಕಾಯಿದೆಯ ಸೆಕ್ಷನ್ 69 ಎ ಅಡಿಯಲ್ಲಿ ತಮಗೆ ನೋಟಿಸ್ ಕಳುಹಿಸಿದ್ದು. ಈ ಆದೇಶವನ್ನು ಪ್ರಶ್ನಿಸುವುದಾಗಿ ದಿ ಕ್ಯಾರವಾನ್ ತನ್ನ ಎಕ್ಸ್‌ನಲ್ಲಿ ಪ್ರಕಟಿಸಿತು. “ಆದೇಶದ ವಿಷಯವು ಗೌಪ್ಯವಾಗಿದೆ” ಎಂದು ಮ್ಯಾಗಝೈನ್ ಹೇಳಿದೆ.
24 ಗಂಟೆಗಳ ಒಳಗೆ ತನ್ನ ವೆಬ್‌ಸೈಟ್‌ನಿಂದ ಈ ಲೇಖನವನ್ನು ತೆಗೆದುಹಾಕದಿದ್ದರೆ, ಇಡೀ ವೆಬ್‌ಸೈಟ್ ಅನ್ನು ನಾಶಮಾಡಲಾಗುವುದು ಎಂದು ದಿ ಕ್ಯಾರವಾನ್‌ಗೆ ಎಚ್ಚರಿಕೆ ನೀಡಲಾಗಿದೆ. ಲೇಖನವನ್ನು ಚಂದಾದಾರರಿಗೆ ಕಳುಹಿಸುವ ಮತ್ತು ಮುದ್ರಿತ ಪತ್ರಿಕೆಯಲ್ಲಿಯೂ ಸೇರಿಸಲಾಗಿದೆ.
ನಿಯತಕಾಲಿಕದ ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟವಾದ ಪತ್ರಕರ್ತೆ ಜತೀಂದರ್ ಕೌರ್ ತೂರ್ ಅವರು ಬರೆದಿರುವ ಲೇಖನ ‘Screams from the Army Post’’ ಒಂದು ವಿಸ್ತೃತ ವರದಿಯಾಗಿದೆ. ಇದರಲ್ಲಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರವಾದ ಡಿಸೆಂಬರ್ 22, 2023 ರಂದು ಅಪರಿಚಿತ ಸೈನಿಕರಿಂದ ನಡೆದ ಮೂವರು ನಾಗರಿಕರ ಹತ್ಯೆಯ ಸುತ್ತ ವರದಿ ಮಾಡಲಾಗಿದೆ. ಸೇನಾ ಕಸ್ಟಡಿಯಲ್ಲಿ ನಾಗರಿಕರನ್ನು ಕೊಲ್ಲಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದು, ಈ ಚಿತ್ರಹಿಂಸೆ ನೀಡುತ್ತಿರುವ ವೀಡಿಯೊಗಳು ಕೂಡ ವೈರಲ್ ಆಗಿತ್ತು. ಆ ಸಂದರ್ಭದಲ್ಲಿ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಸೇನೆ ಹೇಳಿತ್ತು.

ದಿ ಕ್ಯಾರವಾನ್‌ನ ಈ ವರದಿಯಲ್ಲಿ ಮೃತರ ಕುಟುಂಬಗಳನ್ನು ಮಾತನಾಡಿಸಲಾಗಿದ್ದು, ಸಾವಿನ ನಂತರ ಸೈನ್ಯವು ಇವುಗಳಲ್ಲಿ ಒಂದು ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿತ್ತು. 25 ಮಂದಿಗೆ ಸೈನ್ಯ “ಚಿತ್ರಹಿಂಸೆ” ನೀಡಿದ್ದು, ಇವರಲ್ಲಿ ಮೂವರು ಹತರಾಗಿದ್ದಾರೆ ಎಂದು ವರದಿ ಹೇಳಿದೆ. ಈ ಹಿಂಸೆಗೆ ಆದೇಶ ನೀಡಿದ ಬ್ರಿಗೇಡಿಯರ್ ಹೆಸರನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದಿ ಕಾರವಾನ್ ಪೊಲೀಸ್, ಸೇನೆ ಮತ್ತು ಜಿಲ್ಲಾಡಳಿತ ಸೇರಿದಂತೆ ಅನೇಕ ಅಧಿಕಾರಿಗಳನ್ನು ಈ ಘಟನೆಯ ಬಗ್ಗೆ ಹೇಳಿಕೆ ನೀಡಲು ಸಂಪರ್ಕಿಸಿದೆ. ಆದರೆ ಈ ಯಾವುದೇ ಅಧಿಕಾರಿಗಳು ಪತ್ರಿಕೆಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರಲಿಲ್ಲ.
ವಿವಾದಾತ್ಮಕ ಐಟಿ ನಿಯಮಗಳು ಯಾವುದೇ ವಿಚಾರಣೆ ನಡೆಸದೆ ಏಕಾಏಕಿ ಸುದ್ದಿ ವೆಬ್‌ಸೈಟ್‌ಗಳು ಸೇರಿದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ವರದಿಗಳನ್ನು, ಮಾಹಿತಿಗಳನ್ನು ತೆಗೆದುಹಾಕಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತುರ್ತು ಅಧಿಕಾರವನ್ನು ನೀಡುತ್ತದೆ. ಹಲವಾರು ಮಾಧ್ಯಮ ಸಂಸ್ಥೆಗಳು ಮತ್ತು ನಾಗರಿಕ ಸಂಸ್ಥೆಗಳು ನ್ಯಾಯಾಲಯದಲ್ಲಿ ಈ ನಿಯಮಗಳನ್ನು ಪ್ರಶ್ನಿಸಿ ವಿಚಾರಣೆಗಾಗಿ ಅರ್ಜಿಗಳನ್ನು ಸಲ್ಲಿಸಿವೆ.