ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಎಸ್‌ಬಿಐ ಬ್ಯಾಂಕ್ ದರೋಡೆ ನಡೆದಿರುವುದು ಬೆಳಕಿಗೆ ಬಂದಿದೆ. ಪಿಸ್ತೂಲ್ ಸೇರಿದಂತೆ ಮಾರಕಾಸ್ತ್ರಗಳೊಂದಿಗೆ ಬಂದಿದ್ದ 5ಕ್ಕೂ ಹೆಚ್ಚು ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
ದರೋಡೆಕೋರರು 8 ಕೋಟಿ ನಗದು, ಸುಮಾರು 50 ಕೆ.ಜಿಗೂ ಹೆಚ್ಚು ಚಿನ್ನವನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಂಕ್ನ ಮ್ಯಾನೇಜರ್, ಕ್ಯಾಶಿಯರ್, ಸಿಬ್ಬಂದಿಯ ಕೈಕಾಲುಗಳನ್ನು ಕಟ್ಟಿಹಾಕಿ, ಅವರನ್ನು ರೂಂನಲ್ಲಿ ಕೂಡಿ ಹಾಕಿ ದರೋಡೆ ನಡೆಸಿದ್ದಾರೆ.
ಇಲ್ಲಿ ದರೋಡೆ ನಡೆಸಿದ ದರೋಡೆಕೋರರು ಮಹಾರಾಷ್ಟ್ರ ಕಡೆ ಪಯಣ ಬೆಳೆಸಿದ್ದಾರೆ. ಚಡಚಣ ಪಟ್ಟಣದಿಂದ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ಮಂಗಳವೇಡ ತಾಲೂಕಿನ ಹುಲಿಜಂತಿ ಗ್ರಾಮದ ಮಾರ್ಗವಾಗಿ ಮಹಾರಾಷ್ಟ್ರ ತಲುಪಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಮೂಲದ ದರೋಡೆಕೋರರ ಗ್ಯಾಂಗ್ ಒಂದು ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಬ್ಯಾಂಕ್‌ನಲ್ಲಿದ್ದ ಸಿಸಿ ಕ್ಯಾಮರಾಗಳ ದೃಶ್ಯ ಪರಿಶೀಲಿಸಿದ್ದಾರೆ. 8 ಕೋಟಿ ನಗದು, ಸುಮಾರು 50 ಕೆ.ಜಿಗೂ ಹೆಚ್ಚು ಚಿನ್ನ ದರೋಡೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯಿಂದಾಗಿ ಎಸ್‌ಬಿಐ ಬ್ಯಾಂಕ್ ನಲ್ಲಿ ಚಿನ್ನಾಭರಣವನ್ನು ಇಟ್ಟ ಗ್ರಾಹಕರಲ್ಲಿ ಆತಂಕ ಮನೆಮಾಡಿದೆ.
ಬ್ಯಾಂಕ್ ನಲ್ಲಿದ್ದ ಸಿಸಿ ಕ್ಯಾಮೆರಾ ಹಾರ್ಡ್ ಡಿಸ್ಕ್ ವಶಕ್ಕೆ ಪಡೆದ ಪೊಲೀಸರು ಸುತ್ತಮುತ್ತಲ ಸಿಸಿ ಕ್ಯಾಮೆರಾಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಈ ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳನ್ನು ಕರೆಸಲು ಸೂಚಿಸಲಾಗಿದೆ.