ಹೊರಟ್ಟಿ ರಾಜೀನಾಮೆ ಅಂಗೀಕಾರ; ಬದಲಿ ವ್ಯವಸ್ಥೆ ಆಗುವವರೆಗೆ ಅವರೇ ಸಭಾಪತಿ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಬದಲಿ ವ್ಯವಸ್ಥೆ ಆಗುವವರೆಗೆ ಬಸವರಾಜ ಹೊರಟ್ಟಿ ಅವರನ್ನೇ ಸಭಾಪತಿ ಸ್ಥಾನದಲ್ಲಿ ಮುಂದುವರಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸಕ್ತ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹೊರಟ್ಟಿ ಅವರು ರಾಜೀನಾಮೆ ನೀಡಿದ್ದಾರೆ. ದೇಶದ ವಿಧಾನ ಪರಿಷತ್ ಇತಿಹಾಸದಲ್ಲೇ ಅತ್ಯಂತ ಹಿರಿಯ ನಾಯಕರಾಗಿರುವ ಹೊರಟ್ಟಿ ಅವರು ತಮ್ಮ ಹೃದಯ ವೈಶಾಲ್ಯತೆ ಮತ್ತು ಹುದ್ದೆಯ ಗೌರವವನ್ನು ಕಾಪಾಡಿಕೊಂಡಿದ್ದಾರೆ. ಅವರ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದರು.

ಆಗಸ್ಟ್ 13ರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್ 14ರಂದು ನೂತನ ಉಪಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಳಿಕ ಉಪಸಭಾಪತಿಯ ಮೂಲಕ ವಿಧಾನ ಪರಿಷತ್ ಸಭಾಪತಿ ಆಯ್ಕೆ ನಡೆಯಲಿದೆ ಎಂದು ಶಿವಕುಮಾರ್ ತಿಳಿಸಿದರು.

ಇದಕ್ಕೂ ಮುನ್ನ ಬಸವರಾಜ ಹೊರಟ್ಟಿ ಅವರೊಂದಿಗೆ ವಿಧಾನಸೌಧದಲ್ಲಿ ಚರ್ಚೆ ನಡೆಸಿದ್ದ ಮುಖ್ಯಮಂತ್ರಿ, ಪರಿಷತ್ತಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ ಬಳಿಕ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಸ್ಥಾನದಿಂದ ನಿರ್ಗಮಿಸಬೇಕು ಎಂಬ ಆಸೆಯನ್ನು ಹೊರಟ್ಟಿ ಅವರು ವ್ಯಕ್ತಪಡಿಸಿದ್ದಾರೆ. ಅವರ ಭಾವನೆಗಳನ್ನು ಸರ್ಕಾರ ಒಪ್ಪಿಕೊಂಡು ಗೌರವಿಸಿದೆ ಎಂದರು.

ಅವಿಶ್ವಾಸ ನಿರ್ಣಯ ಅಪ್ರಸ್ತುತ
ಬಸವರಾಜ ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಸರ್ಕಾರ ಮತ್ತು ಹೊರಟ್ಟಿ ಅವರ ನಡುವೆ ಒಪ್ಪಂದಕ್ಕೆ ಬಂದ ಬಳಿಕ ಅವಿಶ್ವಾಸ ನಿರ್ಣಯದ ಪ್ರಶ್ನೆಯೇ ಇಲ್ಲ ಎಂದರು.

“ಹೊರಟ್ಟಿ ಅವರೇ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕರಿಸಿದರೂ ಬದಲಿ ವ್ಯವಸ್ಥೆ ಆಗುವವರೆಗೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮುಂದುವರಿಸಬೇಕಿದೆ,” ಎಂದು ಹೇಳಿದರು.

ಸಭಾಪತಿ ಸ್ಥಾನಕ್ಕೆ ನೀಡಬೇಕಾದ ಗೌರವವನ್ನು ಹೊರಟ್ಟಿ ಅವರು ಕಾಪಾಡಿಕೊಂಡು ಬಂದಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸರ್ಕಾರದ ಗೌರವವನ್ನು ಕಾಪಾಡಿಕೊಂಡು ಬಂದಿರುವ ಅವರ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಬಿಜೆಪಿಗೆ ತಿರುಗೇಟು
ಸಭಾಪತಿ ಸ್ಥಾನದಲ್ಲಿ ಇಷ್ಟು ವರ್ಷಗಳಿಂದ ಬದಲಾವಣೆ ಮಾಡಿರಲಿಲ್ಲ ಎಂದು ಬಿಜೆಪಿ ಆರೋಪಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ಬೆಳವಣಿಗೆಗಳನ್ನು ನೆನಪಿಸಿದರು.

“ಅವರು ಬೇರೆ ರಾಜ್ಯಗಳಲ್ಲಿ ಏನೆಲ್ಲ ಮಾಡಿದ್ದಾರೆ ಎಂಬುದರ ಪಟ್ಟಿ ನೀಡಲೇ? ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಇದು ನಮ್ಮ ಮತ್ತು ಹೊರಟ್ಟಿ ಅವರ ನಡುವಿನ ವಿಚಾರ. ಶೆಟ್ಟರ್ ಅವರು ಇದ್ದಾಗ ಹೊರಟ್ಟಿ ಅವರನ್ನು ಸಭಾಪತಿ ಮಾಡಿದ ಸಂದರ್ಭದಲ್ಲಿ ನಡೆದ ಘಟನೆ ಏನು ಎಂಬುದನ್ನು ಮರೆತುಬಿಟ್ಟಿದ್ದಾರೆಯೇ? ಮಾಧ್ಯಮಗಳಲ್ಲಿ ಆ ದೃಶ್ಯಾವಳಿಗಳು ಇರಬೇಕು. ಅವುಗಳನ್ನು ಮರುಪ್ರಸಾರ ಮಾಡಲಿ,” ಎಂದು ಹೇಳಿದರು.

ಸಚಿವ ಸ್ಥಾನಕ್ಕೆ ಬೇಡಿಕೆ ಸಹಜ
ಕೃಷ್ಣಪ್ಪ ಅವರು ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸುತ್ತಿರುವ ಕುರಿತು ಕೇಳಿದಾಗ, “ತಪ್ಪೇನಿಲ್ಲ, ಎಲ್ಲರೂ ಕೇಳುತ್ತಾರೆ,” ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.

ಎಂ.ಸಿ. ಸುಧಾಕರ್ ಸೇರಿದಂತೆ ಕೆಲವರಿಗೆ ಕರೆ ಮಾಡಿ ಸಚಿವರನ್ನು ಕರೆಸಿಕೊಂಡು ಸಮಾಧಾನಪಡಿಸಿದ್ದೀರಾ ಎಂಬ ಪ್ರಶ್ನೆಗೆ, ಯಾರಲ್ಲೂ ಅಸಮಾಧಾನವಿಲ್ಲ. ಕೆಲವು ಹಿರಿಯ ನಾಯಕರಿದ್ದು, ಅವರಿಗೆ ಜವಾಬ್ದಾರಿ ನೀಡಬೇಕಾಗುತ್ತದೆ. ಎಲ್ಲವನ್ನೂ ಬಗೆಹರಿಸುವುದಾಗಿ ತಿಳಿಸಿದರು.

ಮಹಿಳಾ ಸಚಿವರ ಆಯ್ಕೆ ಯಾವಾಗ ನಡೆಯಲಿದೆ ಎಂಬ ಪ್ರಶ್ನೆಗೆ, “ನಿಮಗೆ ಮಾಹಿತಿ ನೀಡಿಯೇ ಅವರಿಗೆ ಪ್ರಮಾಣವಚನ ನೀಡಲಾಗುವುದು,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು