ವಂದೇ ಮಾತರಂ ವಿವಾದ: ಬಿಜೋ ಎಮ್ಯಾನುಯೆಲ್ ತೀರ್ಪಿನ ರಕ್ಷಣೆ ಇಂದಿಗೂ ಚಾಲ್ತಿಯಲ್ಲಿದೆ; ಹಾಡದಿದ್ದರೆ ಕ್ರಿಮಿನಲ್ ಕ್ರಮ ಸಲ್ಲದು ಎಂದ ಸುಪ್ರೀಂ ಕೋರ್ಟ್

ದೆಹಲಿ: ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂಬ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಅದಕ್ಕೆ ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ನೀಡಿರುವ ತಿದ್ದುಪಡಿಯನ್ನು ಪ್ರಶ್ನಿಸಿ ಗಾಯಕ ಟಿ.ಎಂ. ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ಆತ್ಮಸಾಕ್ಷಿಯ ಆಧಾರದಲ್ಲಿ ಗೀತೆಯನ್ನು ಹಾಡದಿರುವ ಹಕ್ಕನ್ನು ಎತ್ತಿಹಿಡಿದಿದ್ದ ಐತಿಹಾಸಿಕ ‘ಬಿಜೋ ಎಮ್ಯಾನುಯೆಲ್’ ಪ್ರಕರಣದ ತೀರ್ಪು ಇಂದಿಗೂ ದೇಶದ ಕಾನೂನಾಗಿ ಮುಂದುವರಿಯುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರಿದ್ದ ಪೀಠವು, ಬಿಜೋ ಎಮ್ಯಾನುಯೆಲ್ ಪ್ರಕರಣದಲ್ಲಿ ಈ ನ್ಯಾಯಾಲಯವು ಘೋಷಿಸಿರುವ ಕಾನೂನು ಈ ಕಾಯ್ದೆಯ ಅನ್ವಯಕ್ಕೂ ಅನ್ವಯಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆ ತೀರ್ಪನ್ನು ಇದುವರೆಗೆ ಯಾರೂ ಪ್ರಶ್ನಿಸಿಲ್ಲ ಎಂದು ಉಲ್ಲೇಖಿಸಿತು.

ಮುಂದುವರಿದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಬಾಗ್ಚಿ, ತನ್ನ ಆತ್ಮಸಾಕ್ಷಿಯ ಕಾರಣಕ್ಕಾಗಿ ರಾಷ್ಟ್ರಗೀತೆಯಾದ ವಂದೇ ಮಾತರಂನ ಒಂದು ಅಥವಾ ಎಲ್ಲಾ ಚರಣಗಳನ್ನು ಹಾಡಲು ನಿರಾಕರಿಸುವ ಯಾವುದೇ ವ್ಯಕ್ತಿಯನ್ನು ಕ್ರಿಮಿನಲ್ ಕಾನೂನು ಕ್ರಮಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ. ಎಸ್. ಮುರಳೀಧರ್, ಈ ತಿದ್ದುಪಡಿ ಕಾಯ್ದೆಯು ಶಿಕ್ಷಾರ್ಹ ಕಾಯ್ದೆಯಾಗಿರುವುದರಿಂದ (ಪೀನಲ್ ಸ್ಟ್ಯಾಚ್ಯೂಟ್) ಮತ್ತು ಕ್ರಿಮಿನಲ್ ಪರಿಣಾಮಗಳನ್ನು ಹೊಂದಿರುವುದರಿಂದ ಅದರ ವ್ಯಾಪ್ತಿ ಸಂಪೂರ್ಣವಾಗಿ ಸ್ಪಷ್ಟವಾಗಿರಬೇಕು ಎಂದು ಪ್ರತಿಪಾದಿಸಿದರು.

ಅರ್ಜಿಯ ಪ್ರತಿಯನ್ನು ಪರಿಶೀಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಎರಡು ವಾರಗಳ ಒಳಗಾಗಿ ತನ್ನ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿದೆ.

Related Articles

ಇತ್ತೀಚಿನ ಸುದ್ದಿಗಳು