Sunday, June 16, 2024

ಸತ್ಯ | ನ್ಯಾಯ |ಧರ್ಮ

ವಂಚನೆ ಪ್ರಕರಣ: ಕುಖ್ಯಾತ ದ್ವೇಷ ಭಾಷಣಗಾರ್ತಿ ಚೈತ್ರಾ ಕುಂದಾಪುರ ಬಂಧನ

ಈಕೆ ತನ್ನ ಮುಸ್ಲಿಂ ಸ್ನೇಹಿತೆಯೊಬ್ಬರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದಳಂತೆ!

ಕುಂದಾಪುರ: ಸದಾ ದ್ವೇಷ ಉಕ್ಕಿಸುವ ಭಾಷಣ ಮಾಡುತ್ತಾ ಜನರ ನಡುವೆ ದ್ವಷ ಬಿತ್ತುತ್ತಿದ್ದ ಚೈತ್ರಾ ಕುಂದಾಪುರ ಎನ್ನುವ ಮಹಿಳೆಯನ್ನು ಸಿಸಿಬಿ ಪೊಲೀಸರು ನಿನ್ನೆ ತಡರಾತ್ರಿ ವಂಚನೆ ಪ್ರಕರಣವೊಂದರಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.

ಕುಂದಾಪುರ ಮೂಲದ ಉದ್ಯಮಿ ಹಾಗೂ ರಾಜಕಾರಣಿ ಗೋವಿಂದ ಬಾಬು ಪೂಜಾರಿ ಎನ್ನುವ ವ್ಯಕ್ತಿಗೆ ಬಿಜೆಪಿ ಪಕ್ಷದ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕೊಡಿಸುವುದಾಗಿ ಹೇಳಿ ವಂಚಿಸಿದ ಪ್ರಕರಣದಡಿ ಚೈತ್ರಾ ಮತ್ತು ಆಕೆಯ ಸಹಚರರನ್ನು ಬಂಧಿಸಲಾಗಿದೆ.

ಸುಮಾರು ಮೂರ್ನಾಲ್ಕು ತಿಂಗಳುಗಳಿಂದ ಗೋವಿಂದ ಬಾಬು ಪೂಜಾರಿಯವರು ತಾನು ಹಣ ಕಳೆದುಕೊಂಡಿದ್ದು, ಚೈತ್ರ ಕುಂದಾಪುರ ಮತ್ತು ಆಕೆ ಸಂಗಡಿಗರು ತನಗೆ ನಾಲ್ಕು ಕೋಟಿ ಯಾಮಾರಿಸಿದ್ದಾರೆ ಎನ್ನುವ ಕಾಗದವೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ಬಹಳ ಸದ್ದು ಮಾಡಿತ್ತಾದರೂ ಆ ಪತ್ರದ ಸಾಚಾತನದ ಕುರಿತು ಅನುಮಾನಗಳಿದ್ದ ಕಾರಣ ಆ ಕುರಿತು ಯಾರೂ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ಅದಾದ ನಂತರ ಚೈತ್ರ ಫೋನಿನಲ್ಲಿ ವಿಶ್ವಾನಾಥ್‌ ಜೀ ಎನ್ನುವವರ ಕುರಿತು ಮಾತನಾಡುವುದರ ರೆಕಾರ್ಡಿಂಗ್‌ ಒಂದು ವೈರಲ್‌ ಆಗಿ ಅದು ಕೂಡಾ ಫೇಸ್ಬುಕ್ಕಿನಲ್ಲಿ ವೈರಲ್‌ ಆಗಿತ್ತು.

ಆದರೆ ಈಗ ಅದನ್ನೆಲ್ಲ ಮೀರಿಸುವಂತೆ ವಂಚನೆಯ ಮೊತ್ತ ಏಳು ಕೋಟಿ ಎನ್ನುವ ಮಾತುಗಳು ಕೇಳಿಬರತೊಡಗಿವೆ.

ಇದೀಗ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಬಿಲ್ಲವ ನಾಯಕ, ಉದ್ಯಮಿಯ ಮುಗ್ಧತೆಯನ್ನು ಬಳಸಿಕೊಂಡು ವಂಚನೆ ಮಾಡಿದ್ದರಿಂದ ಚೈತ್ರಾ ಕುಂದಾಪುರ ಹಾಗೂ ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಚೈತ್ರಾ ಕುಂದಾಪುರ ಬಂಧನದಿಂದ ಪ್ರಕರಣದಲ್ಲಿ ಒಟ್ಟು ನಾಲ್ವರನ್ನು ಬಂಧಿಸಿದಂತಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ದ್ವೇಷ ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿರುವ ಹಿಂದು ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ ನಾಲ್ಕೈದು ಜನರ ತಂಡ, ದೊಡ್ಡ ನಾಟಕ ಮಾಡಿ ಕೇಂದ್ರದ ನಾಯಕರು, ಆರ್‌ಎಸ್‌ಎಸ್‌ ಪ್ರಮುಖರ ಹೆಸರಿನಲ್ಲಿ ಉದ್ಯಮಿಗೆ ಪಂಗನಾಮ ಹಾಕಿದೆ. ಆರ್‌ಎಸ್‌ಎಸ್ ಪ್ರಮುಖರು ಎಂದು ನಕಲಿ ನಾಯಕರನ್ನು ಚೈತ್ರಾ ಕುಂದಾಪುರ ಟೀಮ್ ಸೃಷ್ಟಿ ಮಾಡಿತ್ತು.

ಪ್ರಕರಣ ಸಂಬಂಧ ಮಂಗಳವಾರ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ, ಶ್ರೀಕಾಂತ್ ನಾಯಕ್ ಪೆಲತ್ತೂರುವನ್ನು ಸಿಸಿಬಿ ಪೊಲೀಸರು ಪೊಲೀಸರು ವಶಕ್ಕೆ ಪಡೆದಿದ್ದಾರೆ.‌ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿಯಿಂದ ಮೂರು ಹಂತದಲ್ಲಿ ಸುಮಾರು 7 ಕೋಟಿ ರೂಪಾಯಿಗಳನ್ನು ಆರೋಪಿಗಳು ಪಡೆದಿದ್ದರು. ಪ್ರಕರಣದಲ್ಲಿ ಈಗ ಚೈತ್ರಾ ಕುಂದಾಪುರ, ಗಗನ್ ಕಡೂರು, ಶ್ರೀಕಾಂತ ನಾಯಕ್, ಪ್ರಸಾದ್ ಸೇರಿ ನಾಲ್ವರು ಆರೋಪಿಗಳು ಸಿಸಿಬಿ ಪೊಲೀಸ್ ವಶದಲ್ಲಿದ್ದಾರೆ.

ಕಳೆದ ಕೆಲ ಸಮಯದಿಂದ ಚೈತ್ರಾ ಕುಂದಾಪುರ ತಲೆಮರೆಸಿಕೊಂಡಿದ್ದಳು. ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಚೈತ್ರಾ ಕುಂದಾಪುರ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು