Home ಅಂಕಣ ಚಕ್ರವರ್ತಿ ಸೂಲಿಬೆಲೆ ‘ಹಿಂದುತ್ವ ಮದುವೆ’ ಪ್ರಸ್ತಾಪ : ಹುಚ್ಚು ಬಿಡದೇ ಮದುವೆಯಾಗಲ್ಲ, ಮದುವೆಯಾಗದೇ ಹುಚ್ಚು ಬಿಡಲ್ಲ

ಚಕ್ರವರ್ತಿ ಸೂಲಿಬೆಲೆ ‘ಹಿಂದುತ್ವ ಮದುವೆ’ ಪ್ರಸ್ತಾಪ : ಹುಚ್ಚು ಬಿಡದೇ ಮದುವೆಯಾಗಲ್ಲ, ಮದುವೆಯಾಗದೇ ಹುಚ್ಚು ಬಿಡಲ್ಲ

0

“…ಹಿಂದುತ್ವ ಕಾರ್ಯಕರ್ತರನ್ನು ಯಾಕೆ ಹಿಂದೂ ಯುವತಿಯರು ಪ್ರೀತಿಸುತ್ತಿಲ್ಲ ಎಂಬುದಕ್ಕೆ ಚಕ್ರವರ್ತಿ ಸೂಲಿಬೆಲೆ ಜೀವಂತ ದುರಂತ ಉದಾಹರಣೆಯಾಗಿದ್ದಾರೆ. ಇದೊಂದು ರೀತಿ ‘ಹುಚ್ಚು ಬಿಡದೇ ಮದುವೆ ಆಗಲ್ಲ, ಮದುವೆ ಆಗದೇ ಹುಚ್ಚು ಬಿಡಲ್ಲ’ ಎಂಬ ಆಟದಂತಿದೆ…” ಪತ್ರಕರ್ತ ನವೀನ್ ಸೂರಿಂಜೆ ಬರಹದಲ್ಲಿ

“ಮದುವೆ ಆಗಲು ಹುಡುಗಿ ಸಿಗದ ಹಿಂದುತ್ವವಾದಿ ಯುವಕರು ಅನ್ಯಧರ್ಮಿಯ ಹುಡುಗಿಯರನ್ನು ಮದುವೆಯಾಗಿ” ಎಂದು ಮಂಗಳೂರಿನಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಇದು ಕರಾವಳಿಯ ಹಿಂದುತ್ವ ಕಾರ್ಯಕರ್ತರು ಗಂಭೀರವಾಗಿ ಚಿಂತಿಸಬೇಕಾದ ವಿಷಯ.

ಹಿಂದುತ್ವದ ಕಾರ್ಯಕರ್ತರಿಗೆ ಮದುವೆಯಾಗಲು ಹಿಂದೂ ಯುವತಿಯರು ಯಾಕೆ ಒಪ್ಪುತ್ತಿಲ್ಲ ಎಂಬುದು ಒಂದು ಗಂಭೀರ ಪ್ರಶ್ನೆಯಾದರೆ, ಮಾತೃಪ್ರಧಾನ ಸಂಸ್ಕೃತಿಯ ಹಿಂದೂ ಕುಟುಂಬಕ್ಕೆ ಪಿತೃಪ್ರಧಾನ ಸಂಸ್ಕೃತಿಯ ‘ಅನ್ಯಧರ್ಮಿಯ ಯುವತಿ’ ಸೇರ್ಪಡೆ ದೈವರಾಧನೆ ನಿಯಮಗಳಿಗೆ ಪೂರಕವಾಗಿರುತ್ತದೆಯೇ ? ಎಂಬ ಇನ್ನೊಂದು ಪ್ರಶ್ನೆ ಇದೆ.

ಹಿಂದುತ್ವ ಕಾರ್ಯಕರ್ತರನ್ನು ಯಾಕೆ ಹಿಂದೂ ಯುವತಿಯರು ಪ್ರೀತಿಸುತ್ತಿಲ್ಲ ಎಂಬುದಕ್ಕೆ ಚಕ್ರವರ್ತಿ ಸೂಲಿಬೆಲೆ ಜೀವಂತ ದುರಂತ ಉದಾಹರಣೆಯಾಗಿದ್ದಾರೆ. ಇದೊಂದು ರೀತಿ ‘ಹುಚ್ಚು ಬಿಡದೇ ಮದುವೆ ಆಗಲ್ಲ, ಮದುವೆ ಆಗದೇ ಹುಚ್ಚು ಬಿಡಲ್ಲ’ ಎಂಬ ಆಟದಂತಿದೆ. ಮಗ ಮದುವೆ ಆದರೆ ಧರ್ಮದ ಜಗಳ ಬಿಟ್ಟು ಸರಿ ದಾರಿಗೆ ಬರ್ತಾನೆ ಅಂತ ತಂದೆ ತಾಯಿ ಕಾಯ್ತಿರ್ತಾರೆ. ಧರ್ಮದ ಕಚ್ಚಾಟ ಬಿಡುವವರೆಗೆ ಮನೆ ಮಗಳನ್ನು ಮದುವೆ ಮಾಡಿ ಕೊಡಲ್ಲ ಅಂತ ಹೆಣ್ಣು ಹೆತ್ತವರು ಹೇಳುತ್ತಾರೆ. ಕರಾವಳಿಯ ಹಿಂದುತ್ವವಾದಿ ಯುವಕರ ಸಮಸ್ಯೆಯೇ ಇದು ! ಇದಕ್ಕೆ ಪರಿಹಾರ ಏನು ಅಂದರೆ ಮದುವೆಗೂ ಮೊದಲು ಹುಚ್ಚು ಬಿಡಿಸಿಕೊಳ್ಳುವುದು. ಅಷ್ಟೆ.

ಮುಸ್ಲೀಮರನ್ನು ಟಾರ್ಗೆಟ್ ಮಾಡಿ ಮಾತನಾಡಿರುವ ಚಕ್ರವರ್ತಿ ಸೂಲಿಬೆಲೆ ‘ಹಿಂದುತ್ವ ಯುವಕರು ಅನ್ಯಧರ್ಮಿಯ ಯುವತಿಯನ್ನು ಮದುವೆಯಾಗಿ’ ಎಂದಿದ್ದಾರೆ. ಕರಾವಳಿಯಲ್ಲಿ ಬ್ರಾಹ್ಮಣರನ್ನು (ನೂಲ್ ಪಾಲ್) ಹೊರತುಪಡಿಸಿದ ಎಲ್ಲಾ ಜಾತಿಗಳು ಮಾತೃಪ್ರಧಾನ ಸಂಪ್ರದಾಯವನ್ನು ಹೊಂದಿವೆ. ದೈವಗಳಿಗೆ ಅಮೆ-ಸೂತಕ ನೋಡುವಾಗ ತಾಯಿಯ ಕಡೆಯ ಘಟನಾವಳಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನೇಮ-ಕೋಲ-ತಂಬಿಲ ನಡೆಸುವಾಗ ಅಮೆ-ಕರ- ಸೂತಕಗಳು ತಾಯಿಯ ಆಧರಿತವಾಗಿರುತ್ತದೆ. ಮುಸ್ಲಿಂ ಯುವತಿಯರಿಗೆ ಅಮೆ-ಕರ- ಸೂತಕಗಳ ಪಾಲನೆ ಇದೆಯೇ ? ಅವರು ಮಾಡಿದರೂ ಅವರು ತಂದೆ ತಾಯಿ ಶೂದ್ರರ ಅಮೆ-ಕರ-ಸೂತಕವನ್ನು ಪಾಲಿಸುತ್ತಾರೆಯೇ ? ಇದು ಕರಾವಳಿಯ ದೈವಾರಾಧನೆಯ ಸಂಪ್ರಾದಾಯದ ಮೇಲಿನ ಅಪಚಾರವಲ್ಲವೇ ? ಚಕ್ರವರ್ತಿ ಸೂಲಿಬೆಲೆಯವರು ಪ್ರಗತಿಪರ ನಿಲುವು, ಜಾತ್ಯಾತೀತ ನಿಲುವಿನಲ್ಲಿ ‘ಯಾವ ಧರ್ಮೀಯರು ಯಾವ ಧರ್ಮಿಯರನ್ನು ಬೇಕಾದರೂ ಮದುವೆ ಆಗಬಹುದು’ ಎಂಬ ಸದುದ್ದೇಶದಿಂದ ಹೇಳಿದ್ದರೆ ಸ್ವಾಗತಾರ್ಹ. ಆದರೆ, ಹಿಂದೂ ಮೂಲಭೂತವಾದಿಯಾಗಿ ಹೇಳಿದ್ದರೆ, ಭೂತರಾಧನೆಯ ಮೂಲಭೂತ ಸಂಪ್ರದಾಯಗಳಿಗೆ ಹೊಡೆತ ಬೀಳುವುದಿಲ್ಲವೇ ?

ಅನ್ಯಧರ್ಮೀಯ ಯುವತಿಯನ್ನು ಮದುವೆಯಾಗಿ ಎಂದು ಚಕ್ರವರ್ತಿ ಸೂಲಿಬೆಲೆ ಕರೆಕೊಡಲು “ಹಿಂದುತ್ವದ ಕಾಲಾಳುಗಳ ಸಂಖ್ಯೆಯಲ್ಲಿ ಆಗುತ್ತಿರುವ ಇಳಿಮುಖ”ವೇ ಮುಖ್ಯ ಕಾರಣವಾಗಿದೆ. ಹಿಂದುತ್ವವಾದಿಗಳನ್ನು ಪ್ರೀತಿಸಲು, ಮದುವೆಯಾಗಲು ಯಾವ ಹುಡುಗಿಯೂ ಮನಸ್ಸು ಮಾಡುತ್ತಿಲ್ಲ ಎನ್ನುವುದು ಒಂದೆಡೆಯಾದರೆ, ದಿನ ಬೆಳಗಾದರೆ ಕೊಲೆ, ಸಾವು-ನೋವು, ಹೊಡೆದಾಟ, ಜೈಲು ಸೇರುವುದರ ಮೂಲಕ, ಸಾಮಾಜಿಕವಾಗಿಯೂ ಹಿಂದುತ್ವ ಕಾರ್ಯಕರ್ತರು ಮನ್ನಣೆಯನ್ನು ಕಳೆದುಕೊಂಡಿದ್ದಾರೆ. ಹಾಗಾಗಿಯೇ ಇಂತಹ ಹತಾಷ ಮಾತುಗಳ ಮೂಲಕ ಹಿಂದುತ್ವ ಕಾರ್ಯಕರ್ತರನ್ನು ಹುರಿದುಂಬಿಸುವ ವ್ಯರ್ಥ ಪ್ರಯತ್ನವನ್ನು ಚಕ್ರವರ್ತಿ ಸೂಲಿಬೆಲೆ ಮಾಡುತ್ತಿದ್ದಾರೆ.

You cannot copy content of this page

Exit mobile version