ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗರೆ ಗೇಟ್ ಬಳಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೀಸಲು ಪಡೆಯ ಪ್ರೊಬೇಷನರಿ ಸಬ್‌ಇನ್ಸ್‌ಪೆಕ್ಟರ್‌ಗಳು (RSI) ಸಾವಿಗೀಡಾಗಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತ ಪೊಲೀಸ್ ಅಧಿಕಾರಿಗಳನ್ನು ಕೊಪ್ಪಳ ಮೂಲದ ಮಂಜುನಾಥ ದಾರಿಮಣಿ (32), ರಾಯಚೂರು ಜಿಲ್ಲೆಯ ಸಿಂಧನೂರಿನ ಅಮರೇಶ್ (25) ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಚಿನ್ (31) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಇವರ ಕಾರು ನಿಂತಿದ್ದ ಲಾರಿಗೆ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಈಶ್ವರ್ ಮತ್ತು ಮಹಾಂತೇಶ್ ಬೊಮ್ಮನವರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ತರಬೇತಿ ಮುಗಿಸಿದ್ದರು. ಇವರಲ್ಲಿ ಒಬ್ಬರು ಮೈಸೂರಿನಲ್ಲಿ ನಿಯೋಜನೆಗೊಂಡಿದ್ದರೆ, ಉಳಿದವರು ಬೆಂಗಳೂರಿನ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಜುನಾಥ ದಾರಿಮಣಿ ಅವರು ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದುದೇ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ವರದಿಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಗೃಹ ಸಚಿವ ಜಿ. ಪರಮೇಶ್ವರ್, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕ ರಘುಮೂರ್ತಿ ಮತ್ತು ಚಿತ್ರದುರ್ಗ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವ ಅಧಿಕಾರಿಗಳ ಅಕಾಲಿಕ ಮರಣಕ್ಕೆ ಗಣ್ಯರು ಸಂತಾಪ ಸೂಚಿಸಿದ್ದು, ಅಪಘಾತದ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
