Home ಬ್ರೇಕಿಂಗ್ ಸುದ್ದಿ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟ: ಏಪ್ರಿಲ್‌ನಲ್ಲಿ ಮತದಾನ, ಮೇ 4ಕ್ಕೆ ಫಲಿತಾಂಶ

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟ: ಏಪ್ರಿಲ್‌ನಲ್ಲಿ ಮತದಾನ, ಮೇ 4ಕ್ಕೆ ಫಲಿತಾಂಶ

0

ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮುಖ್ಯ ಚುನಾವಣಾಧಿಕಾರಿ ಗ್ಯಾನೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ಐದು ರಾಜ್ಯಗಳಲ್ಲಿಯೂ ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಮಾಹಿತಿಯಂತೆ ವಿವಿಧ ರಾಜ್ಯಗಳ ವಿಧಾನಸಭೆಗಳ ಅವಧಿ ಕ್ರಮವಾಗಿ ಮುಕ್ತಾಯಗೊಳ್ಳಲಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 7, 2026ರಂದು, ತಮಿಳುನಾಡು ಮೇ 10ರಂದು, ಅಸ್ಸಾಂ ಮೇ 20ರಂದು ಮುಕ್ತಾಯಗೊಳ್ಳಲಿದೆ. ಇನ್ನು ಪುದುಚೇರಿ ಜೂನ್ 15ರಂದು ಹಾಗೂ ಕೇರಳ ಜೂನ್ 23ರಂದು ಅವಧಿ ಪೂರ್ಣಗೊಳ್ಳಲಿದೆ.

ಚುನಾವಣೆಯನ್ನು ಸುಗಮವಾಗಿ ನಡೆಸಲು ಭಾರೀ ಪ್ರಮಾಣದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 15 ಲಕ್ಷ ಚುನಾವಣಾ ಸಿಬ್ಬಂದಿ ಹಾಗೂ 8.5 ಲಕ್ಷ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ 49 ಸಾವಿರ ಮೈಕ್ರೋ ಅಬ್ಸರ್ವರ್‌ಗಳು ಮತ್ತು 1,444 ಸಾಮಾನ್ಯ ಅಬ್ಸರ್ವರ್‌ಗಳು ಚುನಾವಣಾ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಮತ ಎಣಿಕೆಯ ವೇಳೆ ಸುಮಾರು 40 ಸಾವಿರ ಮತ ಎಣಿಕೆ ಅಧಿಕಾರಿಗಳು ಹಾಗೂ 15 ಸಾವಿರ ಮೈಕ್ರೋ ಅಬ್ಸರ್ವರ್‌ಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

ಬೇಸಿಗೆಯ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ಮತಗಟ್ಟೆಗಳಲ್ಲಿ ಮತದಾರರಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರಿಗೆ ವೀಲ್ಚೇರ್ ಸೌಲಭ್ಯ ಹಾಗೂ ಹಿರಿಯ ನಾಗರಿಕರಿಗೆ ಆದ್ಯತೆಯ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.

ಮತದಾನದ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಮತದಾನದ ಕ್ಷಣ ಕ್ಷಣದ ಮಾಹಿತಿಯನ್ನು ನೇರವಾಗಿ ದಾಖಲಿಸುವ ವ್ಯವಸ್ಥೆ ಇರಲಿದೆ. ಎಲ್ಲಾ ಚುನಾವಣಾಧಿಕಾರಿಗಳಿಗೆ ಕಡ್ಡಾಯ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಮತ ಎಣಿಕೆಯ ದಿನ ಮೊದಲು ಅಂಚೆ ಮತದಾನ (ಪೋಸ್ಟಲ್ ಬ್ಯಾಲೆಟ್) ಎಣಿಕೆ ಮಾಡಿ ಬಳಿಕ ಇವಿಎಂ ಮತಗಳನ್ನು ಎಣಿಕೆ ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ರಾಜ್ಯವಾರು ಚುನಾವಣಾ ವೇಳಾಪಟ್ಟಿಯ ಪ್ರಕಾರ, ಅಸ್ಸಾಂ, ಕೇರಳ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ 294 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇನ್ನು ತಮಿಳುನಾಡು ರಾಜ್ಯದ 234 ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಮತದಾನ ನಡೆಯಲಿದೆ.

ಎಲ್ಲಾ ರಾಜ್ಯಗಳ ಮತ ಎಣಿಕೆ ಮೇ 4, 2026ರಂದು ನಡೆಯಲಿದ್ದು, ಚುನಾವಣಾ ಪ್ರಕ್ರಿಯೆ ಮೇ 6ರೊಳಗೆ ಪೂರ್ಣಗೊಳ್ಳಲಿದೆ. ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಪಂಚ ರಾಜ್ಯಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ವಿವಿಧ ಪಕ್ಷಗಳು ಚುನಾವಣಾ ಸಮರಕ್ಕೆ ಸಜ್ಜಾಗಿವೆ.

You cannot copy content of this page

Exit mobile version