ದಲಿತರಿಂದ 42 ಟ್ಯಾಂಕ್‌ ನಲ್ಲಿಗಳ ನೀರು ಮುಟ್ಟಿಸಿ ಜಾಗೃತಿ ಮೂಡಿಸಿದ ಅಧಿಕಾರಿಗಳು

ಚಾಮರಾಜನಗರ: ದಲಿತ ಮಹಿಳೆಯೊಬ್ಬಳು ನಲ್ಲಿಯಲ್ಲಿ ನೀರು ಕುಡಿದಳೆಂದು ಸೊ ಕಾಲ್ಡ್‌ ಮೇಲ್ಜಾತಿಯ ಕೆಲ ವ್ಯಕ್ತಿಗಳು ಟ್ಯಾಂಕರ್‌ನ ನೀರು ಕಾಲಿ ಮಾಡಿಸಿ, ಗೋಮೂತ್ರದಿಂದ ಶುದ್ಧಿಗೊಳಿಸಿದ ಪ್ರಕರಣದ ಈ ಹಿನ್ನೆಲೆಯಲ್ಲಿ ಅಧಿಕಾರಿಯೊಬ್ಬರು ಹೆಗ್ಗೋಠಾರಕ್ಕೆ ಭೇಟಿ ನೀಡಿ ಗ್ರಾಮದ 42 ತೊಂಬೆಗಳಲ್ಲೂ ದಲಿತರಿಂದ ನೀರು ಕುಡಿಸಿ ಸಹೋದರತೆಯ ಜಾಗೃತಿ ಸಂದೇಶ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಚಾಮರಾಜನಗರದ ತಹಶಿಲ್ದಾರ್‌ ಬಸವರಾಜ್‌ ನೇತೃತ್ವದಲ್ಲಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್‌, ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಪಿಡಿಒ ಮಾದಪ್ಪ, ಸಬ್‌ ಇನ್‌ಸ್ಪೆಕ್ಟರ್‌ ಜಯರಾಂ ಮತ್ತು ಇನ್ನಿತರ ದಲಿತ ಚಿಂತಕರು ಸೇರಿ ಸಭೆ ನಡೆಸಿ ಅಸ್ಫೃಶ್ಯತೆ ಆಚರಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಗ್ರಾಮದ ಟ್ಯಾಂಕರ್‌ ಕೇವಲ ಒಂದೇ ಜಾತಿಗೆ ಸೀಮಿತವಲ್ಲ ಎಂದು ತಿಳಿಹೇಳುವ ಕೆಲಸವನ್ನು ಮಾಡಿದ್ದಾರೆ.

ಹಿನ್ನೆಲೆ:

ಚಾಮರಾಜನಗರದ ಹೆಗ್ಗೊಠಾರ ಗ್ರಾಮದಲ್ಲಿ ಸಂಬಂಧಿಕರ ಮದುವೆಗೆಂದು ಹೋಗಿದ್ದ ದಲಿತ ಮಹಿಳೆಯೊಬ್ಬಳು ಬಾಯಾರಿಕೆಯಾಗಿ ಅಲ್ಲಿಯೇ ಇದ್ದ ಟ್ಯಾಂಕರ್‌ನ ನಲ್ಲಿಯಲ್ಲಿ ನೀರು ಕುಡಿದಿದ್ದಾಳೆ. ಅದನ್ನು ಗಮನಿಸಿದ ವೀರಶೈವ ಮುಖಂಡನಾದ ಮಹದೇವಪ್ಪ(ಪಟ್ಟವಾಡಿ) ಎಂಬ ವ್ಯಕ್ತಿಯು, ʼನೀನು ಯಾವ ಜನಾಂಗದ ಮಹಿಳೆʼ ಎಂದು ಕೇಳಿದಾಗ ʼನಾನು ಪರಿಶಿಷ್ಟ ಜನಾಂಗದ ಮಹಿಳೆʼ ಎಂದು ಉತ್ತರಿಸಿದ್ದು, ʼ ಇದು ವೀರಶೈವರಿಗೆ ಸೇರಿದ ತೊಂಬೆ. ನೀವು ದಲಿತರು. ಇಲ್ಲಿಗೆ ಬಂದು ನೀರು ಕುಡಿದು ನಮ್ಮ ತೊಂಬೆಗಳನ್ನು ಮಲೀನ ಮಾಡಿದ್ದೀರಾʼ ಎಂದು ಗಲಾಟೆ ಮಾಡಿ ಜಾರಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಚಾಮಾರಾಜನಗರದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ.

ಸಭೆಯ ನಂತರ ಪೊಲೀಸರ ಬಿಗಿ ಬಂದೋಬಸ್ತ್‌ನೊಂದಿಗೆ ಅಲ್ಲಿಗೆ ತೆರಳಿದ ಅಧಿಕಾರಿಗಳು ಸ್ವತಃ ಅವರೇ ದಲಿತ ಸಮುದಾಯದಿಂದ ಗ್ರಾಮದಲ್ಲಿರುವ ಪ್ರತಿಯೊಂದು ತೊಂಬೆಗಳನ್ನು ಮುಟ್ಟಿಸಿ, ನಲ್ಲಿಗಳಲ್ಲಿ ನೀರು ಕುಡಿಸಿದ್ದು ಯಾವುದೇ ಸಂಘರ್ಷಕ್ಕೆ ಆಸ್ಪದ ಇಲ್ಲದಂತೆ ‘ಮೇಲ್ಜಾತಿ’ ವ್ಯಕ್ತಿಗಳು ಮಾಡುತ್ತಿರುವ ತಪ್ಪಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ್ದಾರೆ.

ಈ ಕುರಿತು ಪೀಪಲ್‌ ಮೀಡಿಯಾದೊಂದಿಗೆ ಮಾತನಾಡಿದ ಹೆಸರು ಹೇಳಲಿಚ್ಚಿಸಿದ ಚಿಂತಕರೊಬ್ಬರು, ʼಈ ಅಸ್ಪೃಶ್ಯತೆ ಕೊನೆಯಾಗಬೇಕು. ಈಗಿರುವ ಕಾನೂನಿನ ಆಡಳಿತಲ್ಲೂ ಅಸ್ಪೃಶ್ಯತೆ ಆಚರಣೆ ಮಾಡುವುದನ್ನು ಯಾರೂ ಒಪ್ಪುವುದಿಲ್ಲ. ಇದಕ್ಕಾಗಿ ದಲಿತ ಸಂಘಟನೆಗಳು ಯಾವುದೇ ಪ್ರತಿಭಟನೆ ಮಾಡದೆ, ತಹಶಿಲ್ದಾರರು ತಾವೇ ಸ್ವತಃ ನಿಂತು ಜಾಗೃತಿ ಮೂಡಿಸುವಂತೆ ಮಾಡಿರುವುದು ಸ್ವಾಗತರ್ಹವಾಗಿದೆ. ಅಸ್ಪೃಶ್ಯತೆ ಬಗ್ಗೆ ಯಾರೂ ಹೋರಾಡಬೇಕಿಲ್ಲ. ಈಗಾಗಲೇ ಇರುವ ಕಾನೂನನ್ನು, ಇರುವ ಅಧಿಕಾರವನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳದೆ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ ಸಾಕು. ಇದಕ್ಕಾಗಿ ಯಾರನ್ನೂ ಬೆದರಿಸುವ ಅಗತ್ಯವಿಲ್ಲ, ದೊಡ್ಡ ಮಟ್ಟದ ಹೋರಾಟ ಮಾಡುವ ಅಗತ್ಯವೂ ಇಲ್ಲ. ಕಳ್ಳತನ ಮಾಡುವವರು, ಲೈಂಗಿಕ ಅಪರಾದ ಮಾಡುವವರು, ಅಸ್ಫೃಶ್ಯತೆ ಆಚರಣೆ ಮಾಡುವವರು ಎಲ್ಲವೂ ಒಂದೇ ರೀತಿಯ ಅಪರಾಧ. ಎಲ್ಲರಿಗೂ ಒಂದೇ ರೀತಿಯ ಶಿಕ್ಷೆಯಾಗಬೇಕುʼ ಎಂದರು.

ಇದೇ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ‘ನಾನೊಬ್ಬ ದಲಿತ’ ಫೇಸ್ಬುಕ್‌ ಪುಟದಲ್ಲಿ, ʼಗ್ರಾಮದ ಎಲ್ಲಾ ತೊಂಬೆಗಳಲ್ಲಿ ನೀರು ಕುಡಿದ ದಲಿತ ಯುವಕರು ಈಗ ಎಷ್ಟು ಲಾರಿ ಗೋಮೂತ್ರ ತರಿಸಿ ಟ್ಯಾಂಕ್‌ ಶುದ್ಧ ಮಾಡ್ಕೋತಿರೋ ಮಾಡ್ಕೊಳಿʼ ಎಂದು ಬರೆದಿರುವ ಪೋಸ್ಟರ್‌ ಹಂಚಿಕೊಳ್ಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು