Tuesday, June 18, 2024

ಸತ್ಯ | ನ್ಯಾಯ |ಧರ್ಮ

ಚಂದ್ರಬಾಬು ನಾಯ್ಡು: ಅಂದು ಜೈಲುಹಕ್ಕಿ ಇಂದು ಕಿಂಗ್‌ ಮೇಕರ್

ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಅಚ್ಚರಿಯ ಡಬಲ್ ಸಾಧನೆಯೊಂದಿಗೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟಿಡಿಪಿ ಪುನರಾಗಮನ ಮಾಡಿದ್ದರೆ, ಲೋಕಸಭೆಯಲ್ಲೂ ಭರ್ಜರಿ ಪ್ರದರ್ಶನ ನೀಡಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, 175 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿಡಿಪಿ 127 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಂಧ್ರಪ್ರದೇಶದ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡುವುದಾದರೆ, ಟಿಡಿಪಿ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮೂಲಗಳ ಪ್ರಕಾರ ಚಂದ್ರಬಾಬು ನಾಯ್ಡು ಜೂನ್ 9ರಂದು ಆಂಧ್ರಪ್ರದೇಶದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕಿರಿಯ ಸಹೋದ್ಯೋಗಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಸೋತು ನಿರಾಸೆ ಮೂಡಿಸಿದ್ದ ನಾಯ್ಡು ಮತ್ತೊಮ್ಮೆ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಬಿಜೆಪಿ ಸ್ವಂತ ಬಲದಿಂದ ಬಹುಮತ ಪಡೆಯುತ್ತಿಲ್ಲ. ಸದ್ಯ ಬಿಜೆಪಿ 243 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗಿರುವಾಗ ಮತ್ತೆ ಸಮ್ಮಿಶ್ರ ರಾಜಕಾರಣದ ಯುಗ ಬರುವುದು ನಿಶ್ಚಿತ ಎನಿಸುತ್ತಿದೆ. ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬಿಜೆಪಿ ಸಂಪರ್ಕಿಸಿದೆ.

ಜೈಲಿಗೆ ಹೋದರೂ ಧೈರ್ಯ ಕಳೆದುಕೊಳ್ಳಲಿಲ್ಲ

2019ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಅವರ ಪಕ್ಷವು ಹೀನಾಯ ಸೋಲನ್ನು ಅನುಭವಿಸಿತು. ಇದಾದ ನಂತರ ಅವರ ರಾಜಕೀಯ ಪಯಣದ ಗ್ರಾಫ್ ನಿರಂತರವಾಗಿ ಕುಸಿಯುತ್ತಲೇ ಇತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೌಶಲಾಭಿವೃದ್ಧಿ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ರಾಜ್ಯ ಸಿಐಡಿ ಬಂಧಿಸಿತ್ತು. ಸರಿಯಾಗಿ ಆರು ವರ್ಷಗಳ ನಂತರ, ಮಾರ್ಚ್ 2024ರಲ್ಲಿ, ನಾಯ್ಡು ಎನ್‌ಡಿಎಗೆ ಮರಳಿದರು. ಆಂಧ್ರಪ್ರದೇಶದಲ್ಲಿ ಬಿಜೆಪಿ ಜನಸೇನಾ ಸಹಯೋಗದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷವನ್ನು ಮತ್ತೆ ಗೆಲುವಿನತ್ತ ಮುನ್ನಡೆಸಿದ್ದಾರೆ. ಟಿಡಿಪಿಯ ಈ ವರ್ಚಸ್ವಿ ಪ್ರದರ್ಶನವನ್ನು ಯಾರೂ ನಿರೀಕ್ಷಿಸಿರಲಿಲ್ಲ.

13 ವರ್ಷಗಳ ಕಾಲ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ವಿವಿಧ ಕಾಲಘಟ್ಟದಲ್ಲಿ ನಾಯ್ಡು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಐಟಿ ಕ್ಷೇತ್ರದಲ್ಲಿ ತಮ್ಮ ರಾಜ್ಯವನ್ನು ಪ್ರಮುಖ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ನಾಯ್ಡು ಅವರು ರಾಜ್ಯ ಮಾತ್ರವಲ್ಲದೆ ಕೇಂದ್ರ ರಾಜಕೀಯದಲ್ಲೂ ನುರಿತ ತಂತ್ರಜ್ಞರಾಗಿದ್ದಾರೆ. ಅವರು 1996 ಮತ್ತು 1998 ರ ಲೋಕಸಭಾ ಚುನಾವಣೆಗಳಲ್ಲಿ ಯುನೈಟೆಡ್ ಫ್ರಂಟ್ ಅನ್ನು ಮುನ್ನಡೆಸಿದರು. 1998 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವನ್ನು ಬೆಂಬಲಿಸುವ ಮೊದಲು, ಅವರು ಯುನೈಟೆಡ್ ಫ್ರಂಟ್‌ನ ಸಂಚಾಲಕರಾಗಿದ್ದರು. ನಾಯ್ಡು ಅವರು ಎನ್‌ಡಿಎ ಸಂಚಾಲಕರೂ ಆಗಿದ್ದಾರೆ.

ಈ ವಿಚಾರದಲ್ಲಿ ನಾಯ್ಡು ಬಿಜೆಪಿಗಿಂತ ಭಿನ್ನ!

ಆಂಧ್ರಪ್ರದೇಶದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಮುಸ್ಲಿಂ ಮೀಸಲಾತಿಯಂತಹ ವಿಚಾರಗಳಲ್ಲಿ ನಾಯ್ಡು ವಿಭಿನ್ನ ನಿಲುವು ತಳೆದಿದ್ದರು. ಅವರು ಮುಸ್ಲಿಂ ಮೀಸಲಾತಿಯನ್ನು ಬಹಿರಂಗವಾಗಿ ಪ್ರತಿಪಾದಿಸಿದ್ದರು. ‘ಮುಸ್ಲಿಮರಿಗೆ ಶೇಕಡ ನಾಲ್ಕು ಮೀಸಲಾತಿಯನ್ನು ನಾವು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದೇವೆ ಮತ್ತು ಇದು ಮುಂದುವರಿಯುತ್ತದೆ’ ಎಂದು ಅವರು ಬಹಿರಂಗವಾಗಿ ಹೇಳಿದ್ದರು. ಆದರೆ ಟಿಡಿಪಿ ತನ್ನ ಪ್ರಣಾಳಿಕೆಯಲ್ಲಿ ಈ ವಿಷಯದಿಂದ ದೂರವಿತ್ತು. ಎನ್‌ಡಿಎಗೆ ಮರಳಿದ ನಂತರ, ನಾಯ್ಡು ಪ್ರತಿ ಅವಕಾಶದಲ್ಲೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವುದನ್ನು ನೋಡಬಹುದಿತ್ತಾದರೂ, ಅವರೊಂದಿಗಿನ ಸಂಬಂಧವು ಹಿಂದೆ ಅಷ್ಟು ಉತ್ತಮವಾಗಿಯೇನೂ ಇದ್ದಿರಲಿಲ್ಲ.

Related Articles

ಇತ್ತೀಚಿನ ಸುದ್ದಿಗಳು