ಫಾರ್ಮ್ಹೌಸ್ ಒಂದರಲ್ಲಿ ತಮ್ಮನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಆಜಾದ್ ಸಮಾಜ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಚಂದ್ರಶೇಖರ್ ಆಜಾದ್ ಗಂಭೀರ ಆರೋಪ ಮಾಡಿದ್ದಾರೆ. ತಾವು ಈ ಮಾತನ್ನು ಅತ್ಯಂತ ಜವಾಬ್ದಾರಿಯಿಂದ ಹೇಳುತ್ತಿದ್ದು, ತಮಗೆ ಸಿಕ್ಕಿರುವ ಮಾಹಿತಿ ಹಾಗೂ ಮೂಲಗಳು ಸುಳ್ಳಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಇಡೀ ಪ್ರಕರಣದ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ಕೊಲೆ ಸಂಚಿನಿಂದ ಹಿಡಿದು ಬಾರಾಬಂಕಿ ಹಿಂಸಾಚಾರದಲ್ಲಿ ಭಾಗಿಯಾದವರ ಪಾತ್ರವನ್ನು ಬಯಲಿಗೆಳೆಯಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ತಮ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿರುವ ಅವರು, “ಸಾವು ಒಂದು ದಿನ ಬಂದೇ ಬರುತ್ತದೆ, ಸಾವಿಗೆ ಹೆದರಿ ಬದುಕಲು ಸಾಧ್ಯವಿಲ್ಲ. ಒಂದು ವೇಳೆ ನನ್ನ ಸಾವು ನಿಮ್ಮ ಕೈಯಲ್ಲೇ ಬರೆದಿದ್ದರೆ ಅದೂ ಆಗಲಿ. ಆದರೆ, ನಿಮ್ಮ ದುರುದ್ದೇಶಗಳಲ್ಲಿ ನೀವು ಯಶಸ್ವಿಯಾಗದೆ, ನನ್ನ ಜನ ನನಗೆ ಶಕ್ತಿ, ಧೈರ್ಯ ಮತ್ತು ಸಾಥ್ ನೀಡಿದರೆ, ನಿಮ್ಮಂತಹ ಗೂಂಡಾಗಳು ಉತ್ತರ ಪ್ರದೇಶದಿಂದಲೇ ಪಲಾಯನ ಮಾಡಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ” ಎಂದು ಗುಡುಗಿದ್ದಾರೆ.
ಇದು ಕೇವಲ ತಮ್ಮ ವೈಯಕ್ತಿಕ ಭದ್ರತೆಯ ಪ್ರಶ್ನೆಯಲ್ಲ ಎಂದಿರುವ ಆಜಾದ್, ಸರ್ಕಾರಿ ಭದ್ರತೆ ಹೊಂದಿರುವ ಒಬ್ಬ ಚುನಾಯಿತ ಜನಪ್ರತಿನಿಧಿ ಹಾಗೂ ಸಂಸದನ ಮೇಲೆಯೇ ಹಾಡಹಗಲೇ ಕಲ್ಲು ತೂರಾಟ ನಡೆಸಿ, ಪೆಟ್ರೋಲ್-ಡೀಸೆಲ್ ತುಂಬಿದ ಬಾಟಲಿಗಳನ್ನು ಎಸೆದು ಕಾರಿಗೆ ಬೆಂಕಿ ಹಚ್ಚಲು ಯತ್ನಿಸುವ ಮಟ್ಟಿಗೆ ದುಷ್ಕರ್ಮಿಗಳು ನಿರ್ಭೀತರಾಗಿದ್ದಾರೆ ಎಂದರೆ, ಇನ್ನು ಈ ರಾಜ್ಯದಲ್ಲಿ ದಲಿತರು, ಹಿಂದುಳಿದವರು ಹಾಗೂ ಮುಸ್ಲಿಮರ ಸುರಕ್ಷತೆ ಮತ್ತು ನ್ಯಾಯದ ಸ್ಥಿತಿ ಹೇಗಿರಬಹುದು ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ ತಮ್ಮ ಬೆಂಬಲಿಗರು ಮತ್ತು ಒಡನಾಡಿಗಳಿಗೆ ಕರೆ ನೀಡಿದ ಅವರು, ಯಾರೂ ಹೆದರುವ ಅಗತ್ಯವಿಲ್ಲ, ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಧೈರ್ಯ ತುಂಬಿದ್ದಾರೆ.
