ಲೋಕಸಭಾ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ ಕ್ಷೇತ್ರ ಈಗ ಮೂರೂ ಪಕ್ಷಗಳಿಗೂ ತಲೆನೋವಾಗಿ ಪರಿಣಮಿಸಿದೆ. ಇದರ ಪ್ರಮುಖ ಕೇಂದ್ರಬಿಂದುವಾಗಿರುವ ಮಾಜಿ ಶಾಸಕ ಸಿಪಿ ಯೋಗೇಶ್ವರ್ ನಿಲುವಿನ ಮೇಲೆ ಕೇಂದ್ರಿತವಾಗಿರುವ ಕ್ಷೇತ್ರದ ರಾಜಕೀಯ ಈಗ NDA ದೋಸ್ತಿಗೂ ಮುಳುವಾಗುವ ಸಾಧ್ಯತೆ ಇದೆ ಎಂಬ ರಾಜಕೀಯ ಮಾತುಕತೆ ಶುರುವಾಗಿದೆ.
ಇಲ್ಲಿಯವರೆಗೂ NDA ನಿಲುವೇ ಅಂತಿಮ ಎಂದು ಹೇಳುತ್ತಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ, ಒಳಗೊಳಗೇ ತಮ್ಮ ಪುತ್ರನನ್ನು ಅಖಾಡಕ್ಕೆ ಬಿಡುವ ಬಗ್ಗೆಯೇ ಬಿಜೆಪಿ ಹೈಕಮಾಂಡ್ ಗೆ ಒತ್ತಡ ಹಾಕುತ್ತಿದ್ದರು. ಇತ್ತೀಚಿನ ವರೆಗೂ ಮೌನವಾಗಿದ್ದ ಬಿಜೆಪಿ ರಾಜ್ಯ ನಾಯಕರು ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸಿಪಿ ಯೋಗೇಶ್ವರ್ ಪರ ಬ್ಯಾಟ್ ಬೀಸುತ್ತಿರುವುದು ನೋಡಿದರೆ NDA ಒಳಗೆ ಯಾವುದೂ ಸರಿ ಇಲ್ಲ ಎಂಬಂತಾಗಿದೆ.
ಮೈತ್ರಿ ಟಿಕೆಟ್ ಆಕಾಂಕ್ಷಿಯಾಗಿರುವ ಸಿ.ಪಿ. ಯೋಗೇಶ್ವರ್ ಟಿಕೆಟ್ ವಂಚಿತವಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಇಲ್ಲವಾದರೆ, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷದಿಂದಲೂ ಕಣಕ್ಕಿಳಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.
ಇಲ್ಲಿಯವರೆಗೂ ಕ್ಷೇತ್ರ ಬಿಟ್ಟುಕೊಡುವ ಮಾತಿಲ್ಲ ಎಂದೇ ಪಟ್ಟು ಹಿಡಿದಿದ್ದ ಜೆಡಿಎಸ್ ಈಗ ಕೊಂಚ ಪಟ್ಟು ಸಡಿಲಿಸಿ, ಯೋಗೇಶ್ವರ್ ಚುನಾವಣೆಗೆ ನಿಲ್ಲಲಿ ಎಂಬ ನಿರ್ಧಾರಕ್ಕೆ ಬಂದಿದೆ. ಆದರೆ ಯೋಗೇಶ್ವರ್ ಮುಂದಿಟ್ಟ ಷರತ್ತು ಮಾತ್ರ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಂತೆ ಯೋಗೇಶ್ವರ್ ಚುನಾವಣೆ ನಿಲ್ಲುವುದಾದರೆ ನಿಲ್ಲಲಿ. ಆದರೆ ಜೆಡಿಎಸ್ ಚಿಹ್ನೆಯಿಂದ ನಿಲ್ಲಲಿ ಎಂಬ ಷರತ್ತು ವಿಧಿಸಿದೆ.
ಇದೆಲ್ಲದರ ಬೆಳವಣಿಗೆಯಂತೆ ಈಗ ಸಿಪಿ ಯೋಗೇಶ್ವರ್ ಈಗ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ನೀಡಲಿದ್ದಾರೆ.ಅದರೊಂದಿಗೆ ಚನ್ನಪಟ್ಟಣ ಉಪಚುನಾವಣೆ ಅಖಾಡ ಇನ್ನಷ್ಟು ಜೋರಾಗಿದೆ. ಅದರೊಂದಿಗೆ ಚನ್ನಪಟ್ಟಣದಲ್ಲಿ ಸಿಪಿವೈ ಸ್ವತಂತ್ರ ಸ್ಪರ್ಧೆ ಮಾಡೋದು ಖಚಿತವಾದಂತಾಗಿದೆ. ಕ್ಷೇತ್ರದಿಂದ ಟಿಕೆಟ್ ಸಿಗದ ಕಾರಣಕ್ಕಾಗಿ ಸಿಪಿವೈ ರೊಚ್ಚಿಗೆದ್ದಿದ್ದು ತಮ್ಮ ಎಂಎಲ್‌ಸಿ ಸ್ಥಾನಕ್ಕೆ ಗುಡ್‌ಬೈ ಹೇಳಿದ್ದಾರೆ. ರಾಜೀನಾಮೆ ನೀಡಲು ಸಭಾಪತಿ ಹೊರಟ್ಟಿ ಅವರ ಭೇಟಿಗೆ ತೆರಳಿದ್ದಾರೆ.
ಪಕ್ಷೇತರವಾಗಿ ಸ್ಪರ್ಧೆ ಮಾಡಲು ಇಚ್ಚಿಸಿರುವ ಸಿಪಿ ಯೋಗೇಶ್ವರ್, ಗುರುವಾರ ನಾಮಪತ್ರ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಆ ಮೂಲಕ ದೋಸ್ತಿ ನಾಯಕರಿಗೆ ಸಿಪಿವೈ ಸಡ್ಡು ಹೊಡೆದಿದ್ದಾರೆ.