Home ಜನ-ಗಣ-ಮನ ಕಲೆ – ಸಾಹಿತ್ಯ ಭೋರ್ಗರೆಯುವ ಪಯಸ್ವಿನಿಯೊಳಗಿನ ಆತ್ಮಗಳು

ಭೋರ್ಗರೆಯುವ ಪಯಸ್ವಿನಿಯೊಳಗಿನ ಆತ್ಮಗಳು

0

ಪಯಸ್ವಿನಿಯನ್ನು ನೋಡುವಾಗ ನಾನು ಹಿಂದೆ ನೋಡಿದ್ದಕ್ಕಿಂತ ಹೆಚ್ಚು ರಭಸದಿಂದ ಹರಿಯುತ್ತಿದ್ದಳು. ಆತ್ಮಗಳು ಮುಕ್ತಿಹೊಂದಿಯೋ ಇಲ್ಲ ಪೂಮಲೆಯ ಕಾಡುಗಳಲ್ಲಿರುವ ಮರಗಳನ್ನು ಸೇರಿ ಮೇಲೆ ಉಳಿದ ನಿರ್ಜೀವ ಶರೀರಗಳ ರಕ್ತವೇ ಪಯಸ್ವಿನಿಯ ತುಂಬೆಲ್ಲಾ ಹರಿಯುತ್ತಿದೆ ಎಂಬಂತೆ ಕೆಂಪು ಕೆಂಪಾದ ನೀರು ಕೇರಳದ ಕಡೆಗೆ ಹರಿದು ಹೋಗುತ್ತಿತ್ತು. ಕೇರಳದಲ್ಲಿ ಕೆಲವು ಮಾಂತ್ರಿಕರಿದ್ದಾರೆ. ಕವಡೆ ಹಾಕಿ ಮೋಕ್ಷ ಸಿಗದ ಆತ್ಮಗಳ ಲೆಕ್ಕ ಹಾಕಿ ಮೋಕ್ಷಕ್ಕಾಗಿ ಗೋಗರೆಯುವ ಪ್ರೇತಾತ್ಮಗಳಿಗೆ ಮುಕ್ತಿ ನೀಡುತ್ತಾರೆ. ಬಹುಶಃ ಪಯಸ್ವಿನಿಯಲ್ಲಿ ಆಗೊಂದು ಈಗೊಂದು ಹರಿದು ಹೋಗುವ ಆತ್ಮಗಳಿಗೆ ಅವರು ಮುಕ್ತಿ ನೀಡಬಹುದು ಎನ್ನುತ್ತಾ ಬದುಗಳಲ್ಲಿ ಹರಿಯುತ್ತಿದ್ದ ತಿಳಿನೀರಿಗೆ ಪಾದಗಳನ್ನು ಅದ್ದಿ ಸಣ್ಣ ಸಣ್ಣ ಮೀನಿಗಳ ಜೊತೆಗೆ ಆಟವಾಡಿದೆ.

ಮೀನುಗಳು ಮಾತನಾಡುತ್ತವೆ. ಅವುಗಳನ್ನು ನಮಗೆ ಸ್ಪರ್ಶಿಸುವ ಹಕ್ಕಿಲ್ಲ. ಆದರೆ ಅವುಗಳಷ್ಟೇ ನಮ್ಮನ್ನು ಮುಟ್ಟಬಹುದು. ಬಲೆ ಹಾಕಿ ಮೀನು ಹಿಡಿಯುವವನಿಗೆ ಜೀವಂತ ಮೀನುಗಳು ಬೇಕಿಲ್ಲ. ಮನುಷ್ಯರಲ್ಲೂ ಅಷ್ಟೇ, ಜೀವಂತವನಾಗಿರುವ ಮನುಷ್ಯ ಸುತ್ತಲಿನವರಿಗೆ ಬೇಕಿಲ್ಲ. ಸತ್ತ ಮೇಲೆ ಅವನ ಅಂತಿಮ ಕ್ರಿಯೆಗಳನ್ನು ಮುಗಿಸಿ ಹಂದಿ ಕೋಳಿ ಮಾಂಸದ ಊಟ ಮಾಡಿ ಹೆಂಡ ಕುಡಿದು ಕೈ ತೊಳೆಯುತ್ತಾರೆ. ಆದರೆ ಸಾವಿನ ಊಟದ ಮಸಾಲೆಯ ಪರಿಮಳ ನಮ್ಮ ಸಾವು ನಮ್ಮ ಬಳಿ ಬರುವ ವರೆಗೆ ಹಾಗೇ ಘಮ್ಮನೆ ಇರುತ್ತದೆ. ಆಗಾಗ ಕೈ ಮೂಸಿ ನೋಡಲು ಮರೆತಿರುತ್ತೇವೆ ಅಷ್ಟೇ!

ಹಿಂದೆಲ್ಲಾ ಪಯಸ್ವಿನಿಯನ್ನು ದಾಟಿ ನಮ್ಮ ಅಜ್ಜಿಯ ಮನೆಗೆ ಬರಲು ಒಂದು ಮರದ ದೋಣಿ ಇತ್ತು.  ಒಂದು ಕಡೆಯಿಂದ ದೋಣಿ ಹತ್ತಿದರೆ ಹಾಯಾಗಿ ಸಾಗುವ ದೋಣಿಯಲ್ಲಿ ಕುಳಿತು ಹರಿಯುತ್ತದ್ದ ಕೆಂಪಾದ ನೀರನ್ನು ಕೈಲ್ಲಿ ಮುಟ್ಟಿ ಅಂಜಿಕೆ ಪಡುತ್ತಿದ್ದೆ. ಎಲ್ಲಾದರೂ ಸತ್ತು ಹೋಗಿರುವವರ ಆತ್ಮ ನನ್ನ ಕೈಗೆ ಸಿಕ್ಕಿದರೆ ಎಂದು. ಸುತ್ತ ಕಣ್ಣು ಹಾಯಿಸಿ ನೋಡುತ್ತಿದ್ದೆ. ಕಾಣಿಸಿಕೊಳ್ಳಲು ಅವುಗಳಿಗೆ ರೂಪವೆಲ್ಲಿದೆ! ರೂಪವಿಲ್ಲದ್ದನ್ನು ನಾವು ನಂಬುವಾಗ ಭಯವೂ ಜಾಸ್ತಿ. ದೆವ್ವವಾದರೂ ಅಷ್ಟೇ, ದೇವರಾದರೂ ಅಷ್ಟೇ! ಎಷ್ಟೋ ಸಾವುಗಳು ಈ ದೋಣಿಯಲ್ಲಿ ಬರುವಾಗ ತಲೆಯಲ್ಲಿ ಭಯಾನಕ ಕಥೆಗಳನ್ನು ಸೃಷ್ಟಿಸುತ್ತವೆ. ದೋಣಿ ಇನ್ನೊಂದು ದಡವನ್ನು ಸೇರುವಾಗ ಪಾದಗಳನ್ನು ಒದ್ದೆ ಮಾಡಿಕೊಂಡು ಇಳಿಬೇಕು.

ಆದರೆ ಈಗ ಒಂದು ಸೇತುವೆಯಾಗಿದೆ. ಇಲ್ಲಿಯವರೇ, ನನ್ನ ಸಂಬಂಧಿಕರೇ ಒಬ್ಬರು ರಾಜ್ಯದ ಮುಖ್ಯಮಂತ್ರಿಯಾದರು. ಆವಾಗ ಈ ತೂಗುವ ಸೇತುವೆಯನ್ನು ಮಾಡಿದ್ದರು. “ಇವರು ಮುಖ್ಯಮಂತ್ರಿಯಾದದ್ದಕ್ಕೆ ಧಕ್ಕಿದ್ದು ಈ ಸೇತುವೆ ಮಾತ್ರ!” ಎಂದು ಆಗಾಗ ಜನ ತಮಾಷೆ ಮಾಡುತ್ತಾರೆ!

ಸೇತುವೆಯಾದ ಮೇಲೆ ಜನರು ನೀರಿನಲ್ಲಿ ಪಾದಗಳನ್ನು ಇಳಿಸಿ ಮೀನುಗಳ ಜೊತೆಗೆ ಆಟವಾಡುವುದನ್ನು ಮರೆತಿದ್ದಾರೆ. ಅವರೆಂತಾ ದೌರ್ಭಾಗ್ಯರು ಎಂದರೆ ಈ ಮೀನುಗಳು ಹೇಳುವ ನೀರಿನಲ್ಲಿ ಬರುವ ಆತ್ಮಗಳ ಕತೆಗಳನ್ನು ಕೇಳುವ ಅದೃಷ್ಟವನ್ನು ಕಳೆದುಕೊಂಡಿದ್ದಾರೆ! ಮೀನುಗಳೂ ಅಷ್ಟೇ….ಮುಕ್ತಿ ಸಿಗದ ಆತ್ಮಗಳ ಕಥೆಗಳನ್ನು ಮನುಷ್ಯರಿಗೆ ಹೇಳಬೇಕು ಎಂಬ ಹುಚ್ಚು ತವಕದಿಂದ ಅಲ್ಲಲ್ಲಿ ಕಟ್ಟಿರುವ ಬಲೆಗಳಿಗೆ ನುಗ್ಗಿ ಸಿಕ್ಕಿಹಾಕಿಕೊಂಡು ಮುಕ್ತಿಗಾಗಿ ಹಲುಬುತ್ತವೆ.

ಅಮ್ಮ ಪ್ರತೀ ಬಾರಿ ಹೇಳುತ್ತಿರುತ್ತಾರೆ, ಅವರು ಹುಟ್ಟೂರಿನಿಂದ ಈ ಊರಿಗೆ ಗಂಟು ಮೂಟೆ ಕಟ್ಟಿ ಬರುವಾಗ ಹೀಗೇ…ಥೇಟ್‌ ರಕ್ತವೋ ಎಂಬಂತೆ ಕೆಸರುಮಯವಾಗಿ ಪಯಸ್ವಿನಿ ಭೋರ್ಗರೆದು ಹರಿಯುತ್ತಿದ್ದಳಂತೆ! ಒಂದುವರೆ ವಾರ ನದಿಯ ದಡದಲ್ಲಿ ಬಿಡಾರ ಹೂಡಿ ನೀರು ಕಡಿಮೆಯಾದ ಮೇಲೆ ಇನ್ನೊಂದು ದಡಕ್ಕೆ ಬಂದು ದಟ್ಟ ಕಾಡಿನಲ್ಲಿ ಗುಡಿಸಲು ಕಟ್ಟಿದರಂತೆ!‌

“ನಿಂಗೆ ಯಾವಾಗಲಾದರೂ ಈ ನೀರಿನಲ್ಲಿ ಆತ್ಮಗಳು ಸಂಚರಿಸುವುದನ್ನು ನೋಡಿದ ನೆನಪಿದ್ಯೋ?” ಎಂದು ಕೇಳಿದೆ.

“ಆತ್ಮಗಳೇನು ಕಣ್ಣಿಗೆ ಕಾಣುತ್ತವೆಯೇ? ಹಿಂದೊಮ್ಮೆ ದಡದಲ್ಲಿ ಬಂದು ನಿಂತಿದ್ದ ಹೆಣವೊಂದನ್ನು ಕೋಲಿನಿಂದ ಕುಟ್ಟಿ ನೀರಿನಲ್ಲಿ ಹರಿದುಹೋಗುವಂತೆ ಮಾಡಿದ್ದೆ!” ಎಂದಾಗ ಅವಳಲ್ಲಿ ಭಯವೇನೂ ಇರಲಿಲ್ಲ.

“ನಿನಗೆ ಆ ಹೆಣ ಅಸಹ್ಯ ಅಂತ ಅನ್ನಿಸಲೇ ಇಲ್ಲವೇ?”

“ಜೀವ ಬಿಟ್ಟು ಹೆಣಗಳಾದವರು ಅಸಹ್ಯವಾಗಿರುವುದಿಲ್ಲ!” ಎಂದಳು.

“ಮೈತುಂಬಾ ದುಬಾರಿ ಸೆಂಟು ಬಳಿದು, ಕರಿ ಕೋಟು ಹಾಕಿ, ಬಾಯಿಯಲ್ಲಿರುವ ಸಿಗರೇಟನ್ನು ತುಟಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸೆಕೆಂಡಿಗೊಮ್ಮೆ ಬದಲಿಸುತ್ತಾ ಕೈಯಲ್ಲಿ ಅದ್ಯಾವುದೋ ರೋಮದ ನಾಯಿಯನ್ನು ಸಂಕೋಲೆಯಲ್ಲಿ ಹಿಡಿದುಕೊಂಡು ಹೋಗುವುದನ್ನು ನಾನು ಒಮ್ಮೆ ನೋಡಿದ್ದೆ! ಅದು ಅಸಹ್ಯವಾಗಿಯೇ ಕಾಣುತ್ತಿತ್ತು! ಎಷ್ಟೊಂದು ಹೆಣ್ಣು ಮಕ್ಕಳು ಆ ಹಳೆಯ ಮನೆಯಲ್ಲಿ ಗೋಗರೆದು ಬೇಡಿಕೊಂಡರೂ ಈ ಮನುಷ್ಯ ಎಡೆ ಬಿಡದೆ ಕಾಡು ಕೋಣದಂತೆ ಧಾಳಿ ಮಾಡಿ ಹೊರಗೆ ಎಸೆಯುವುದನ್ನು ಕೇಳಿದ ಮೇಲೆ ಆ ಮನುಷ್ಯನನ್ನು ನೋಡಿದಾಗೆಲ್ಲಾ ಮೈಮೇಲೆ ಹಾವೊಂದು ಸಂಚರಿಸಿದಂತೆ ತಣ್ಣಗಾಗುತ್ತಿತ್ತು!”

ನಾನು ಮಾತನಾಡದೆ ತೂಗು ಸೇತುವೆಯಿಂದ ಇಳಿದು ಉಚ್ಚೆ ಹೊಯ್ಯಲು ಬೇಲಿಗೆ ಮುಖ ಮಾಡಿ ನಿಂತೆ.

“ಬಹುಶಃ ಆ ಮನುಷ್ಯನ ಮಾವ ನನ್ನ ಅಜ್ಜನಿಗೆ ಮೋಸ ಮಾಡಿರದೇ ಇದ್ದಿದ್ದರೆ ನಾವಿಂದು ಇಷ್ಟು ಕಷ್ಟ ಪಡುವ ಅಗತ್ಯ ಇರುತ್ತಿರಲಿಲ್ಲ. ನಾವು ಈ ನದಿ ದಾಟಿ ಈ ಕಾಡಿನಲ್ಲಿ ಮನೆ ಮಾಡಿ ದೊಡ್ಡ ದೊಡ್ಡ ಮರಗಳನ್ನು ರಾತ್ರೋ ರಾತ್ರೆ ಕಡಿದು ಅಡಿಕೆ ಸಸಿಗಳನ್ನು ನೆಡುತ್ತಿರಲಿಲ್ಲ!”

“ಒಂದು ದಿನ ನನ್ನ ಅಜ್ಜನನ್ನು ಪಟೇಲರು ಮಂಗ್ಳೂರಿಗೆ ಕೆರದುಕೊಂಡು ಹೋದರು. ಮೊದಲ ಬಾರಿ ಮಂಗ್ಳೂರಿಗೆ….ಅದೂ ಪಟೇಲರ ಜೊತೆಗೆ ಹೋಗುವ ಖುಷಿ ಅಜ್ಜನದ್ದು. ಪಟೇಲರು ಮಂಗ್ಳೂರಲ್ಲಿ ಚಹಾ ಮತ್ತು ಬನ್ಸ್‌ ತಿನ್ನಿಸಿದರು. ರಥಬೀದಿಯ ಕೊಂಕಣಿಗಳ ಅಂಗಡಿಯೊಂದರಿಂದ ಒಂದು ಟೊಪ್ಪಿ ಖರೀದಿಸಿ ಅಜ್ಜನ ತಲೆಗೆ ಹಾಕಿ……ಭಾರಿ ಸೋಕು ತೋಜುಂಡು….ಎಂದರು. ಆಮೇಲೆ ಪಕ್ಕದ ಸರ್ಕಾರಿ ಕಚೇರಿಗೆ ಕರೆದುಕೊಂಡು ಹೋಗಿ ತಾವೇ ಅವರ ಹಬ್ಬೆರಳನ್ನು ಶಾಯಿಗೆ ಅದ್ದಿ ಯಾವುದೋ ಪೇಪರ್‌ಮೇಲೆ ಒತ್ತಿಸಿದರು. ಒಂದು ಬಸ್‌ನಲ್ಲಿ ಕೂರಿಸಿ ಕಿಸೆಗೆ ಚಿಲ್ಲರೆ ಹಾಕಿ ಸುಳ್ಯಕ್ಕೆ ಕಳಿಸಿದರು.”

“ಪಟೇಲರಿಗೆ ಅಷ್ಟು ಸುಲಭದಲ್ಲಿ ನಮ್ಮ ಅಜ್ಜ ಮತ್ತು ಅಪ್ಪನನ್ನು ಆ ಜಾಗದಿಂದ ಓಡಿಸಲು ಸಾಧ್ಯವಿರಲಿಲ್ಲ. ಒಂದೇ ಜಾತಿಯವರೂ… ನೋಡಿದರೆ ಹತ್ತಿರದ ನೆಂಟರು ಬೇರೆ! ಆದರೆ ಅಲ್ಲಿದ್ದ ದಲಿತ ಮನ್ಸರ ಮನೆಗೆ ಒಂದು ರಾತ್ರಿ ಬೆಂಕಿ ಇಟ್ಟರು. ತನ್ನ ಭೂತಕ್ಕೆ ಮನ್ಸರು ಆ ಜಾಗದಲ್ಲಿ ಇರುವುದು ಸಮಾಧಾನ ಇಲ್ಲ, ಹೀಗಾಗಿ ಈ ಬೆಂಕಿ ಅವಘಡವಾಗಿದೆ ಎಂಬ ಪುಕಾರು ಎಬ್ಬಿಸಿ ಹಿಂಡು ಹಿಂಡಾಗಿ ಅವರನ್ನು ಬೇರೆ ಸ್ಥಳಕ್ಕೆ ಸಾಗಿಸಿದರು. ಕೆಲವು ಮರಾಠಿ ನಾಯ್ಕರನ್ನು ಹೆದರಿಸಿ ಬೆದರಿಸಿ ಜಾಗ ಬಿಟ್ಟು ಓಡುವಂತೆ ಮಾಡಿದರು. ಎಂದೆದೂ ಭೂಮಿಯೇ ಇರದ, ಇದ್ದರೂ ಕೃಷಿ ಮಾಡಲು ಅನುಮತಿಯೇ ಇಲ್ಲದ ಮನ್ಸರು ಬೇರೆ ಜಾಗಕ್ಕೆ ಹೋದ ಮೇಲೆ ಅವರ ಬದುಕಿನಲ್ಲಿ ಹೆಚ್ಚು ಬದಲಾವಣೆಗಳೇನು ಆಗಲಿಲ್ಲ. ಪಟೇಲರ ಮನೆಯ ಚಾಕರಿ ಮಾಡಬೇಕಿತ್ತು ಅಷ್ಟೇ! ಆದರೆ ನಮ್ಮ ಅಜ್ಜನ, ಅಪ್ಪನ.. ನಾನು ಹುಟ್ಟಿದ ಮೇಲೆ ನನ್ನ ಬದುಕು ಎಲ್ಲವೂ ಕಷ್ಟದಿಂದಲೇ ತುಂಬಿತ್ತು!”

“ಒಂದು ಕಾಲದಲ್ಲಿ ಭೂಮಿಯಿದ್ದ ನಮ್ಮ ಅಜ್ಜ ಯಾರದೋ ಭೂಮಿಯಲ್ಲಿ ಮನೆ ಕಟ್ಟಿ ಕೂರಬೇಕಾಗಿ ಬಂತು. ನಾನು ಹುಟ್ಟಿದ್ದೂ ಅಲ್ಲೇ.. ಅಣ್ಣ ಹುಟ್ಟಿದ್ದೂ ಅಲ್ಲೇ! ಅಮೇಲೆ ನೋಡು ನಾನೂ, ನನ್ನ ಅಪ್ಪ-ಅಮ್ಮ ಎಲ್ಲರೂ ಆ ಜಾಗ ಬಿಟ್ಟು ಇಲ್ಲಿಗೆ ಬಂದದ್ದು. ಅದೂ ಇಂತದ್ದೇ ಒಂದು ಮಳೆಗಾಲದಲ್ಲಿ. ಬೇಸಿಗೆಯ ತನಕ ಕಾಯುವ ಅವಕಾಶವೇ ಇರಲಿಲ್ಲ. ಆಗ ಪಯಸ್ವಿನಿಯ ಭೋರ್ಗರೆತ ನೋಡಿ ಆದ ಭಯ ಇಂದೂ ಹಾಗೆಯೇ ಇದೆ!” ಎಂದು ನಿಟ್ಟುಸಿರು ಬಿಡುತ್ತಾ ನನ್ನ ಜೊತೆಗೆ ಗುಡ್ಡ ಹತ್ತಿದಳು.

ಅವಳಿಗೆ ತವರಿಗೆ ಹೋಗುವ ಸಂಭ್ರಮ ಏನೂ ಇರಲಿಲ್ಲ. ಒಮ್ಮೆಯಾದರೂ ಹೋಗಬೇಕು…ವರ್ಷಕ್ಕೆ ಒಮ್ಮೆ! ನಾನು ಹೋಗಲು ಹಿಂಜರಿಯುವಾಗ ಸತ್ತು ಸ್ವರ್ಗ ಸೇರಿರುವ ಅಜ್ಜ ಅಜ್ಜಿಗಾದರೂ ಖುಷಿಯಾಗಲಿ ಎಂದು ನನ್ನನ್ನು ಒತ್ತಾಯಿಸಿ ಕರೆದುಕೊಂಡು ಹೋಗುತ್ತಿದ್ದಳು. ನನಗೆ ಆ ದಟ್ಟ ಕಾಡಿನ ಮಧ್ಯೆ ಇರುವ ಗವಿಯಂತಹ ಮನೆ ಭಯಾನಕವಾಗಿ ಕಾಣುತ್ತಿತ್ತು. ಸಂಜೆಯಾದರೆ ಸಾಕು…..ವೀಂ….ವಯ ವಯ ವಯಾಂ…ಎಂದು ಎಡೆಬಿಡದೆ ಚೀರುವ ಜೀರುಂಡೆಗಳು ಯಾವುದೋ ಆತ್ಮ ಸಂಚಾರಕ್ಕೆ ಹೊರಟ ಸೂಚನೆ ನೀಡುತ್ತಿದ್ದವು. ಮುಗಿಲು ಮುಟ್ಟುವ ಮರಗಳಲ್ಲಿ ಪ್ರೇತಗಳು ಹೆಬ್ಬಾವುಗಳಂತೆ ಸುರುಳಿ ಸುತ್ತಿ ನನ್ನ ಕಡೆಗೇ ಕೆಕ್ಕರಿಸಿ ನೋಡಿದಂತೆ ಭಾಸವಾಗುತ್ತಿತ್ತು.

ಸಂಜೆ ಗಂಟೆ ಆರಾದ ಮೇಲೆ ಪಯಸ್ವಿನಿಯ ನೀರಿನಲ್ಲಿ ಅಡಲು ಹೋಗುವ ಹೋಗುವ ಹಾಗೆ ಇಲ್ಲ. ತೋಟದ ಕಡಗೆ ಹೋದರೆ ಒಂದು ಶರತ್ತು ಯಾವಾಗಲೂ ಮಾವನ ಬಾಯಿಯಿಂದ ಬರುತ್ತಿತ್ತು!

“ನಿಂಗೆ ಹೋಯ್… ಎಂದು ಸದ್ದು ಕೇಳಿದರೆ ತಿರುಗಿ ನೋಡಬೇಡ!”

ನಾನು ಯಾವತ್ತೂ ಅದೇಕೆ ಹಾಗೆ… ಯಾರು ಹೋಯ್‌ ಎಂದು ನನ್ನನ್ನು ಕರೆಯುತ್ತಾರೆ ಎಂದು ಮರು ಪ್ರಶ್ನೆ ಹಾಕುವ ಧೈರ್ಯ ಮಾಡಿರಲೇ ಇಲ್ಲ. ಪ್ರಶ್ನೆ ಕೇಳುವಷ್ಟು ಮಾವನ ಜೊತೆಗೆ ಅನ್ಯೋನ್ಯತೆಯೂ ಇರಲಿಲ್ಲ!

“ಅಲ್ಲಾ… ಮಾವ ಸಂಜೆಯಾದಾಗ ಹೋಯ್‌ ಎಂದು ಯಾರಾದರೂ ಕರೆದರೆ ತಿರುಗಿ ನೋಡಬೇಡ ಎನ್ನುತ್ತಿದ್ದರಲ್ಲಾ? ಯಾಕೆ…” ಎಂದು ಕಾಡಿನ ದಾರಿಯಲ್ಲಿ  ಬೆತ್ತದ ಕೊಂಬೆಗಳನ್ನು ಸರಿಸುತ್ತಾ ಕೇಳಿದೆ.

“ಹೋ…ಅದಾ… ರಾತ್ರಿಯಾದರೆ ನೀರಿನಲ್ಲಿ ಹಗಲೆಲ್ಲಾ ಅಡಗಿಕೊಂಡಿರುವ ಪೀಡೆಗಳು ನೀರಿನಿಂದ ಮೇಲೆ ಎದ್ದು ಸವಾರಿ ಹೋಗಲು ಶುರು ಮಾಡುತ್ತವೆ. ನೀನು ಅವು ಕರೆದರೆ ತಿರುಗಿ ನೋಡಿದೆ ಎಂದು ಇಟ್ಕೋ… ನಿನ್ನ ಬೆನ್ನು ಹತ್ತಿ ನಿನ್ನ ಮೈಯಲ್ಲಿ ಸೇರಿಕೊಳ್ಳುತ್ತವೆ! ಸಂಜೆಯಾದಾಗ ನಾನು ಕೆಲವು ಬಾರಿ ಯಾರೋ ಆ ಕಯದಲ್ಲಿ ಸ್ನಾನ ಮಾಡಿದಂತೆ ಸದ್ದು ಮಾಡುವುದನ್ನು ಕೇಳಿದ್ದೇನೆ. ಜಲಕನ್ಯೆಗಳು ಅವು. ನಂಗೇನೂ ಮಾಡುವುದಿಲ್ಲ ಬಿಡು… ನಿನ್ನ ಹಾಗೆ ವಯಸ್ಸಾದ ಹುಡುಗರನ್ನು ಹಿಡ್ಕೊಂಡರೆ ಕೇರಳದ ಯಾವ ತಂತ್ರಿ, ಮಾಂತ್ರಿಕನಿಗೂ ಬಿಡಿಸಲು ಸಾಧ್ಯವಿಲ್ಲ!” ಎಂದು ಮುಸಿ ಮುಸಿ ನಕ್ಕರು.

ಪೀಡೆಗಳ ಕತೆ ಕೇಳಿ ಒಮ್ಮೆ ಬೆಚ್ಚಿ ಬಿದ್ದೆ. ಯಾಕಾಗಿ ನಮ್ಮನ್ನು ಕರೆಯುತ್ತವೆ? ಬಹುಶಃ ಕತೆ ಹೇಳಲು ಇರಬೇಕು. ದೇಹವಿಲ್ಲದ ಅವು ನನ್ನ ದೇಹವನ್ನು ಸೇರಿ ತಾವು ಹೇಗೆ ಸತ್ತೆವು ಎಂಬ ಕತೆ ಹೇಳುತ್ತವೆಯೋ? ನನ್ನ ದೇಹವನ್ನು ಸೇರಿ ಕತೆ ಹೇಳಿದರೆ ಆ ಕತೆ ನನಗೆ ಹೇಗೆ ಗೊತ್ತಾಗಬೇಕು. ಕತೆ ಕೇಳಿಸಿಕೊಂಡವರು ಪೀಡೆ ನನ್ನ ದೇಹವನ್ನು ಬಿಟ್ಟ ಮೇಲೆ ಹೇಳಬೇಕಷ್ಟೇ!

ಯಾವ ಕತೆಗಳು? ಪಟೇಲನಂತಹ ಜಮೀನ್ದಾರ ಭೂ-ಮಸೂದೆ ಕಾಯ್ದೆ ಬಂದಾಗ ಕೊಂದ ಮನ್ಸ, ಮೇರ, ಕೊರಗರ ಕತೆಯೋ? ಪಟೇಲರ ಅಳಿಯ ರೇಪ್‌ಮಾಡಿ ಬಿಸಾಕಿದ ಹೆಂಗಸರ ಕತೆಯೋ? ಯಾವ ಕತೆಗಳು? ಮರ ಹುಟ್ಟಿ ಮರ ಸತ್ತಂತೆ ಬದುಕಿದವರಲ್ಲಿ ಕತೆಗಳೇ ಇರುವುದಿಲ್ಲ. ಅವರು ಸತ್ತ ಮೇಲೆ ಜನರ ಸ್ಮೃತಿಯಲ್ಲಿಯೂ ಇರುವುದಿಲ್ಲ. ಅವರು ಒಂದು ವೇಳೆ ಪ್ರೇತಗಳಾದರೆ ಆರಾಮವಾಗಿ ಜಲಕ್ರೀಡೆಯಾಡುತ್ತಾ ದಿನ ಕಳೆದಾವೆಯೇ ಹೊರತು ನನ್ನಂತ ತಿಕ್ಕಲು ಹುಡುಗನಿಗೆ ಕತೆ ಹೇಳಲು ಬೆನ್ನು ಹತ್ತಲಿಕ್ಕಿಲ್ಲ! ಕತೆಗಳಿಲ್ಲದ ಬದುಕು ಬದುಕೇ ಇಲ್ಲ… ಸುಖಾಂತ್ಯವೋ… ದುಃಖಾಂತ್ಯವೋ… ಏನೋ ಒಂದು!

ಕಾಡಿನ ದಾರಿಯನ್ನು ಸ್ವಲ್ಪ ದೂರ ಯಾರೋ ಕಡಿದು ಸಪಾಟು ಮಾಡಿದಂತೆ ತೋರುತ್ತಿತ್ತು. ಎದುರಿನಿಂದ ಒಂದು ಹೆಂಗಸು ಮತ್ತು ಗಂಡಸು ತರಾತುರಿಯಲ್ಲಿ ನಡೆದು ಬರುತ್ತಿದ್ದರು. ಅಸ್ವಸ್ಥನಂತೆ ಕಂಡುಬರುತ್ತಿದ್ದ ಗಂಡಸಿಗೆ ಹೆಂಗಸಿನಷ್ಟು ವೇಗವಾಗಿ ನಡೆಯಲು ಸಾಧ್ಯವಿರಲಿಲ್ಲ. ನಮ್ಮನ್ನು ನೋಡಿದಂತೆ ಹೆಂಗಸು ಸಂಭ್ರಮದಿಂದ ಅಮ್ಮನ ಕೈ ಹಿಡಿದು ಮಾತನಾಡಲು ಶುರು ಮಾಡಿದರು. ಕುಶಲೋಪರಿ ಮಾತುಗಳ ನಂತರ “ಜೋಯಿಸರಲ್ಲಿಗೆ ಹೋಗುತ್ತಿದ್ದೇವೆ!” ಎಂದು ಇಬ್ಬರೂ ಮುಂದುವರಿದರು!

“ಮುವತ್ತಮೂರು ವರ್ಷಗಳಾದವು. ಈ ಹೆಂಗಸಿಗೆ ನೆಮ್ಮದಿಯ ರಾತ್ರಿಗಳೇ ಸಿಗಲಿಲ್ಲ. ಇವರಿಬ್ಬರ ಮದುವೆ ಮದುವೆಯಾಗಿ ಮೂರೇ ಮೂರು ದಿನಗಳು ಆಗಿವೆ. ಗಂಡಿನ ಮನೆಯಿಂದ ಹೆಣ್ಣಿನ ಮನೆಗೆ ತುಪ್ಪ ತೆಗೆದುಕೊಂಡು ಹೋಗುವ ಕಾರ್ಯ ಕೂಡ ಆಗಿಲ್ಲ. ಒಂದು ರಾತ್ರಿ ಇದ್ದಕ್ಕಿದ್ದಂತೆ ಯಾರಿಗೂ ಸುಳಿವು ನೀಡದೆ ಈ ಗಂಡಸಿನ ತಾಯಿ… ನನಗೆ ಅತ್ತೆಯಾಗಬೇಕು, ಮನೆ ಬಿಟ್ಟು ಹೋದರು. ಮಾರನೇ ದಿನ ಊರಿನ ಇಂಚು ಇಂಚಿನಲ್ಲಿ ಹುಡುಕಲಾಯಿತು. ಮದುವೆಗೆ ಬಂದು ಉಳಿದುಕೊಂಡಿದ್ದ ಕೆಲವು ನೆಂಟರೆಲ್ಲಾ ತೋಟ, ನದಿ, ಕಾಡು ಬಿಡದೆ ಎಲ್ಲಾ ಕಡೆ ಹುಡುಕಿದರು. ಅವತ್ತು ರಾತ್ರಿ ನಾನೂ ಇದ್ದೆ. ಇದ್ದಕ್ಕಿದ್ದ ಹಾಗೆ ಹಸಿ ಹಸಿ ಮದುಮಗ ʼಅಯ್ಯೋ… ಅಮ್ಮ ತೋಜುವೆರೋ… ಅಯ್ಯೋ!ʼ ಎಂದು ಅರೆಬಾಯಿ ಹಾಕಿ ಎರಡೂ ಕೈಗಳನ್ನೂ ತಲೆಗೆ ಹೊಡದುಕೊಂಡು ಅಂಗಳಕ್ಕೆ ಓಡಿ ತೋಟದ ತುಂಬಾ ಓಡಿದ. ನಾಲ್ಕೈದು ಜನ ಹಿಂದೆಯೇ ಓಡಿದರು. ಹಿಡಿದು ಕೈ ಕಾಲು ಕಟ್ಟಿ ಅಂಗಳದಲ್ಲಿ ಹೊತ್ತು  ಹಾಕಿದರು.”

“ಅವತ್ತು ತಲೆಗೆ ಆದ ಆಘಾತ ಇನ್ನೂ ಹಾಗೇ ಇದೆ. ಮೂರು ದಿನಗಳ ನಂತರ ಸಂಜೆ ಈ ದೋಣಿ ನಿಲ್ಲುವ ಜಾಗದಲ್ಲಿ ನೀರು ತುಂಬಿ ವಿಕಾರವಾಗಿ ಊದಿಕೊಂಡ ಕೊಳೆತ ಮಾಂಸದ ಮುದ್ದೆಯೊಂದು ಬಿದ್ದುಕೊಂಡಿತ್ತು. ಮೈ ತುಂಬಾ ಏಡಿಗಳು ಹರಿದಾಡುತ್ತಿದ್ದವು. ಎರಡು ಏಡಿಗಳಂತೂ ಹೊರಗೆ ಕಿತ್ತು ಬಂದಿದ್ದ ಕಣ್ಣ ಗುಡ್ಡೆಯನ್ನು ಕುಕ್ಕಿ ತಿನ್ನುತ್ತಿದ್ದವು. ಇನ್ನೊಂದು ಕಣ್ಣು ಅಲ್ಲಿ ಇರಲಿಲ್ಲವೇನೋ ಎಂಬಂತೆ ಆಳವಾಗಿ ಗುಂಡಿಯಂತಾಗಿ ನೀರಿನಲ್ಲಿ ಕೊಳೆದು ಹೋಗಿರುವ ಮಾಂಸ ಹೊರಗೆ ಕಾಣುತ್ತಿತ್ತು. ಹೊಟ್ಟೆ ಮತ್ತು ಎರಡೂ ತೊಡೆಗಳಲ್ಲಿ ಹಿಂಡು ಹಿಂಡಾಗಿ ಏಡಿಗಳು ಕುಕ್ಕಿ ಕುಕ್ಕಿ ತಿನ್ನುತ್ತಿದ್ದವು. ಅಷ್ಟು ಭಯಂಕರ ಗಾತ್ರದ ಏಡಿಗಳನ್ನು ನಾನು ಹಿಂದೆಂದೂ ನೋಡಿರಲೇ ಇಲ್ಲ! ಒಂದು ಕೈಯಲ್ಲಿ ಬೆರಳುಗಳೇ ಇರಲಿಲ್ಲ, ಮತ್ತೊಂದರಲ್ಲಿ ಮೂರಿದ್ದವು!”

“ಹೆಣದ ಮೈ ತುಂಬಾ ನೊಣಗಳು ಗುಂಯ್‌ಗುಡುತ್ತಾ ಹಾರುತ್ತಿದ್ದವು. ಗವ್ವನೆ ಹೆಣದ ಮೈಯಿಂದ ಎದ್ದ ಹೊಲಸು ವಾಸನೆ ಗಾಳಿಯ ತುಂಬೆಲ್ಲಾ ಸೇರಿ ಸಂಜೆಯ ಮಯ ಮಯ ಕತ್ತಲಿಗೆ ಭಯಾನಕತೆಯನ್ನು ತಂದಿತ್ತು. ಕೆಲವರು ಹೊಟ್ಟೆ ಕಿವುಚಿದಂತಾಗಿ ವಾಂತಿ ಮಾಡಲು ಓಡಿದರು. ನನ್ನ ಮೂಗಿನ ವಾಸನೆಯ ಪ್ರಜ್ಜೆ ಸತ್ತೇ ಹೋಗಿತ್ತೇನೋ, ಹೆಣದ ವಾಸನೆ ಮೂಗಿಗೆ ಬಡಿದರೂ ಅಸಹ್ಯವೇ ಆಗಲಿಲ್ಲ. ನಾನೇ ಅಲ್ಲಿ ಸತ್ತು ಕೊಳೆತು ಮಲಗಿದ್ದೇನೆ ಎಂಬಂತೆ ತೋರಿ ಬೆಚ್ಚಿ ಬಿದ್ದೆ!”

“ಕೆಲವು ಗಂಡಸರು ಈ ವಾಸನೆ ಬರುತ್ತಿದ್ದರೂ ಏನೂ ಆಗದವರಂತೆ ಹೆಣವನ್ನು ಕೋಲಿನಿಂದ ದೂಡುತ್ತಾ ತಾವು ತಂದಿದ್ದ ಚಾಪೆಯಲ್ಲಿ ಪ್ಲಾಸ್ಟಿಕ್‌ಸುತ್ತಿ ಮೂಟೆ ಮಾಡಿದರು. ಕೋಲುಗಳಿಂದ ಚಟ್ಟವೊಂದನ್ನು ಮಾಡಿ ಹೆಣವನ್ನು ಮಲಗಿಸಿ ಹೊತ್ತುಕೊಂಡು ಮನೆಯ ಕಡೆ ಸಾಗಿದರು. ವಾಸನೆ ಹಾಗೇ ಗಾಳಿಯಲ್ಲಿ ಊರ ತುಂಬೆಲ್ಲಾ ಹರಡಲಾರಂಭಿಸಿತು. ಮತಿ ಕಳೆದುಕೊಂಡು ಬಿದ್ದಿದ್ದ ಮದುಮಗನನ್ನು ಹೊತ್ತುಕೊಂಡು ಮುಸಿಮುಸಿ ಅಳುತ್ತಾ ಮನೆಯವರು, ನೆಂಟರಿಷ್ಟರು ಹೆಣವನ್ನು ಹಿಂಬಾಲಿಸಿದರು. ಬಾಯಿ ತೆರೆದು ಅಳುವುದಕ್ಕೂ ಅಸಾಧ್ಯವಾಗಿತ್ತು. ಉಸಿರು ತೆಗೆಯಲು ಬಾಯಿ ತೆರೆದರೆ ಹೆಣದ ವಾಸನೆ ಬಾಯಿಯನ್ನು ಹಸಿ ಹಸಿಯಾಗಿಯೇ ಹೊಕ್ಕು ಹೆಣವೇ ಬಾಯಿಯಿಂದ ಗಂಟಲ ಮೂಲಕ ಹೊಟ್ಟೆಯನ್ನು ಸೇರಿದಂತಾಗುತ್ತಿತ್ತು!”

“ಎಲ್ಲಾದರೂ ಆ ಕೊಳೆತ ಮಾಂಸದ ಮುದ್ದೆ ಎದ್ದು ನಡೆಯಲು ಶುರು ಮಾಡಿದರೆ… ಅಹ್… ನೆನೆದುಕೊಂಡಾಗ ನನ್ನ ಮೈ ಜುಮ್ಮೆಂದು ಶೀತಗಟ್ಟಿತು! ಅಂಗಳಕ್ಕೆ ಬಂದಾಗ ಮದುಮಗನಿಗೆ ಮತಿ ಬಂದು ಹೆಣದ ಮೇಲೆ ಬಿದ್ದು ಅಳುವುದಕ್ಕೆ ಮುಂದಾದಾಗ ಕೆಲವರು ಗಟ್ಟಿಯಾಗಿ ಹಿಡಿದು ತಡೆದರು. ಅಂಗಳದಲ್ಲಿ ಎರಡು ನಿಮಿಷಗಳ ಕಾಲ ಹೆಣವನ್ನು ಇಟ್ಟು ಆಗಾಗಲೇ ಸಿದ್ದ ಪಡಿಸಿದ್ದ ಕಾಟದ ಕಡೆಗೆ ಹೊತ್ತುಕೊಂಡು ಹೋದರು. ಹೆಣವನ್ನು ಕಾಟದ ಮೇಲೆ ಮಲಗಿಸಿ ಯಾವ ವಿಧಿಗಳನ್ನೂ ಮಾಡದೆ ಬೆಂಕಿಯಿಟ್ಟರು!”

“ಒದ್ದೆಯಾಗಿದ್ದ ಕಟ್ಟಿಗೆ ಉರಿಯಲು ತೆಂಗಿನ ಗರಿಯನ್ನು ಹರಡಲಾಯಿತು. ವಾಸನೆ ಬರುತ್ತಿರುವ ಈ ಹೆಣ ಒಮ್ಮೆ ಸುಟ್ಟು ಬೂದಿಯಾಗಲಿ ಎಂದು ಸೀಮೆಎಣ್ಣೆಯನ್ನೂ ಸುರಿದರು! ಹಿಂದಿನ ದಿನ ಮಳೆ ಬಂದು ಒದ್ದೆಯಾಗಿದ್ದ ಕಟ್ಟಿಗೆಗಳಿಗೆ ಅಷ್ಟು ಸುಲಭದಲ್ಲಿ ಬೆಂಕಿ ಹತ್ತುವುದಿಲ್ಲ. ಕಟ್ಟಿಗೆಯ ಮೇಲೆ ಬಿಳಿ ಕೋರ ಬಟ್ಟೆಯ ರಾಶಿಯನ್ನೂ, ಅಗರ ಬತ್ತಿಯ ರಾಶಿ ಕಟ್ಟುಗಳನ್ನೂ, ಗಂಧದ ಹಾರ ಎಂದು ಕರೆಯುವ ಯಾವುದೋ ಮರದಿಂದ ಮಾಡಿದ ಮಾಲೆಗಳನ್ನೂ ಹಾಕಿ ಮತ್ತೆ ಮತ್ತೆ ಬೆಂಕಿ ಕೊಟ್ಟರು!”

“ಮಾನವಾಕಾರದ ಗಾಢ ಬಣ್ಣದ ಹೊಗೆಯೊಂದು ಕಟ್ಟಿಗೆಗಳ ಸಂದಿನಿಂದ ಹೇಗೋ ಮೇಲೆ ಬಂದು ಆಕಾಶದ ಕಡೆಗೆ ಚಲಿಸಲಾರಂಭಿಸಿತು. ಕೊಳೆತು ಮಾಂಸದ ಮುದ್ದೆಯಾಗಿದ್ದ ಹೆಣವೇ ಕಾಟದಿಂದ ಎದ್ದು ಆಕಾಶದ ಕಡೆಗೆ ಚಲಿಸಿದಂತೆ! ನಾರಿ ಹೋಗಿರುವ ಹೆಣವನ್ನು ಸುಟ್ಟಾಗ ಬರುವ ಉರಿ ಉರಿ ವಾಸನೆ ಸೇರಿದವರ ಮೂಗಿನ ಹೊಳ್ಳೆಗಳ ಮೂಲಕ ದೇಹವನ್ನು ಹೊಕ್ಕು ಅಸಹನೀಯವಾದ ಸ್ಥಿತಿಯನ್ನು ತಂದಿತ್ತು. ಕೆಲವರು ವಾಂತಿ ಮಾಡಿದರು. ಕೆಲವರು ಮೂಗಿಗೆ ಬಟ್ಟೆ ಸುತ್ತಿಕೊಂಡು ಮನೆಗೆ ಓಡಿದರು. ಆದರೆ ಹೆಣ ಸುಡುತ್ತಿದ್ದಂತೆ ಅದರ ದೇಹದಲ್ಲಿದ್ದ ನೀರು ಕಾಟದಿಂದ ಹಾಗೇಯೇ ಇಳಿದು ನೆಲದಲ್ಲಿ ಮಡುಗಟ್ಟಿತ್ತು. ಮಧ್ಯೆ ಮಧ್ಯೆ ಟುಷ್… ಎಂಬ ಸದ್ದು! ಅದರ ಜೊತೆ ಜೊತೆಗೆ ಹುಟ್ಟುವ ಕಮಟು ವಾಸನೆ… ಇಡೀ ಊರಿಗೇ ವ್ಯಾಪಿಸಿತು!”

“ನನಗಂತೂ ಇದ್ಯಾವುದೂ ಅಸಹ್ಯ ಅನ್ನಿಸಲೇ ಇಲ್ಲ. ಏಕೆಂದರೆ ಅದೊಂದು ಕೇವಲ ಹೆಣ… ಕೇವಲ ಹೆಣವಷ್ಟೇ!”

ಅಮ್ಮನ ಬಾಯಿಂದ ಯಾವ ಅಳುಕು ಅಂಜಿಕೆಗಳೂ ಇಲ್ಲದೆ ಹೊರಬರುತ್ತಿದ್ದ ಮಾತುಗಳು ನನ್ನನ್ನು ಒಮ್ಮೆ ಕಣ್ಣು ಕತ್ತಲಾಗುವಂತೆ ಮಾಡಿತ್ತು. ಕಾಡಿನ ದಾರಿಯಲ್ಲಿ ನಡೆಯುತ್ತಾ…”ಅದೋ… ಅವರನ್ನು ಸುಟ್ಟದ್ದು ಅಲ್ಲಿ!” ಎಂದಾಗ ಕೊಳೆತ ಹೆಣದ ವಾಸನೆ ನನ್ನ ಮೂಗಿಗೆ ಬಡಿದಂತಾಗಿ ವಾಕರಿಕೆ ಬಂದಂತಾಯ್ತು! ಇನ್ನೂ ಆ ವಾಸನೆ ಈ ಗಾಳಿಯಲ್ಲಿಯೇ ಇದೆ ಅನ್ನಿಸಿತು!

“ಅವತ್ತು ಈ ಮನುಷ್ಯನಿಗೆ ಸುರುವಾದ ಮಾನಸಿಕ ರೋಗ ಇನ್ನೂ ಸರಿಯಾಗಿಲ್ಲ. ಒಮ್ಮೊಮ್ಮೆ ಸರಿಯಾಗಿರುತ್ತಾರೆ. ಇದ್ದಕ್ಕಿದ್ದಂತೆ ʼಓಯ್… ಓ… ಅಲ್ಲಿ ನೋಡು, ಅಮ್ಮ ಕೂತಿದ್ದಾರೆ!” ಎಂದು ನಮ್ಮನ್ನು ಕರೆದು ಏನೂ ಇಲ್ಲದ ಕಡೆಗೆ ಬೆರಳು ತೋರಿಸುತ್ತಿದ್ದರು. ಮನೆಯ ಅಟ್ಟದ ಮೇಲೆ ಕೈ ತೋರಿಸಿ ʼಇಕೋ… ಅಲ್ಲಿ ಅಮ್ಮ ಅಟ್ಟದ ಮೇಲೆ!ʼ ಎನ್ನುತ್ತಿದ್ದರು. ನನಗೇನು ದಿಗಿಲಾಗುತ್ತಿರಲಿಲ್ಲ. ಆದರೆ ಅವರ ಹೆಂತಿಯನ್ನು ನೋಡುವಾಗ ವ್ಯಥೆಯಾಗುತ್ತಿತ್ತು! ಯಾರೂ ಮನೆಯಲ್ಲಿ ಇಲ್ಲದ ಸಮಯದಲ್ಲಿ ಇದ್ದಕ್ಕಿದ್ದಂತೆ ಅಮ್ಮಾ… ಅಮ್ಮಾ… ಎಂದು ಕೆರೆಯುತ್ತಾ ಇವರು ಕೆರೆ, ಬರೆ ನೋಡದೆ ಓಡುವಾಗ ಅವರ ಹಿಂದೆಯೇ ಓಡುವ ಹೆಂತಿ ಯಾವ ಪಾಪಕ್ಕಾಗಿ ಈ ಕಷ್ಟ ಅನುಭವಿಸುತ್ತಿದ್ದಾರೋ! ಮೂವತ್ತಮೂರು ವರ್ಷ! ಯಾವ ಕರ್ಮಕ್ಕೆ ನಾಳೆ ಸರಿಯಾದೀತೋ ಎಂಬ ನಂಬಿಕೆಯಿಂದ ದಿನ ದೂಡುತ್ತಾ ಇಡೀ ಯೌವ್ವನವನ್ನು ಹೀಗೆ ಬದುಕಿದರೋ…!” ಎಂದಾಗ ಅಮ್ಮನ ಮಾತಿನಲ್ಲಿ ತುಂಬಾ ತೂಕದ ನೋವಿತ್ತು. ಬಹುಶಃ ಗಂಡಸರಿಗೆ ಈ ವ್ಯಥೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಷ್ಟು!

ದೋಣಿ ಹೋಗಿ ತೂಗುವ ಸೇತುವೆ ಬಂದಿದೆ. ಜನರು… ಅಗಲೇ ಹೇಳಿದಂತೆ ನದಿಯ ನೀರಿನಲ್ಲಿ ಪಾದಗಳನ್ನಿಟ್ಟು ಮೀನುಗಳ ಜೊತೆಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಪೀಡೆಗಳ ಓಯ್…ಗೆ ಓಗೊಟ್ಟು ತಿರುಗಿ ನೋಡಲು ಹಿಂದೆಯೂ ಯಾರೂ ಇರಲಿಲ್ಲ, ಈಗಲೂ ಯಾರೂ ಇಲ್ಲ. ಅಡಿಕೆಗೆ ಕೆಜಿಗೆ ಐನೂರು ದಾಟುವಾಗ, ರಬ್ಬರ್‌ಗೆ ಒಳ್ಳೆಯ ಬೆಲೆ ಬಂದಾಗ ಕೊಂಡ ಸೆಕೆಂಡ್‌ಹ್ಯಾಂಡ್‌ಕಾರುಗಳು ಮನೆಗಳ ಮುಂದೆ ನಿಂತಿದ್ದಾವೆ. ಅಂಗಳದ ತುಂಬೆಲ್ಲಾ ಕೋಳಿಗಳು ಹಿಕ್ಕೆ ಹಾಕುತ್ತವೆ ಇಲ್ಲಾ ನಾಗರಹಾವುಗಳು ಬರುತ್ತಾವೆ ಎಂದು ಕೋಳಿ ಸಾಕುವುದನ್ನೇ ನಿಲ್ಲಿಸಿದ್ದಾರೆ, ಕೊಳೆ ರೋಗ ಬಂದ ಅಡಿಕೆ ಮರಗಳ ಬುಡದಲ್ಲಿ ಕರಟಿ ಹೋದ ಹಿಂಗಾರಗಳು ಹಾಗೂ ಹಾಳಾದ ಅಡಿಕೆ ಕಾಯಿಗಳು ಬಿದ್ದಿವೆ, ಮಕ್ಕಳು ಟೆರೇಸ್‌ಮೇಲೆ ಹತ್ತಿ ಮೊಬೈಲ್‌ನಲ್ಲಿ ಏನೋ ಮಾಡುತ್ತಿರುತ್ತಾರೆ, ಬ್ರಿಸ್ಟಾಲ್‌ಸೇದುತ್ತಿದ್ದ ಮಾವ ಮಾತ್ರ ಇದ್ದಕ್ಕಿದ್ದಂತೆ ಗಣೇಶ್‌ಬೀಡಿ ಸೇದಲು ಸುರು ಮಾಡಿದ್ದರು. ಯಾವುದೂ ಒಂದಕ್ಕೊಂದು ಸಂಬಂಧ ಇಲ್ಲವೆಂಬಂತೆ ತೋರಿದರೂ ಇವೆಲ್ಲವೂ ಪರಸ್ಪರ ಮಾತಿಗಿಳಿಯುತ್ತವೆ ಎಂದೆನಿಸುತ್ತಿತ್ತು!  

ನಾನೂ ಅಷ್ಟೇ… ತಮ್ಮವರನ್ನು ಹಿಂಸಿಸಿ ಶೋಷಿಸಿದ ಜಮೀನ್ದಾರನ ಮಕ್ಕಳ ಅಂಡು ತೊಳೆಯುವ ಅವಕಾಶಕ್ಕಾಗಿ ಕಾಯುತ್ತಾ ಕುಳಿತ ಹೊಸ ಬಗೆಯ ಗುಲಾಮರ ನಡುವೆ ಪ್ರಕ್ಷುಬ್ಧತೆಯನ್ನು ಕಾಯ್ದುಕೊಂಡು ಹುಚ್ಚನಂತಿದ್ದೂ ಶಾಂತ ಕಣ್ಣುಗಳಿಂದ ಸರ್ವಾಧಿಕಾರಿಯೊಬ್ಬ ಸತ್ತು ಮತ್ತೊಬ್ಬ ಬರುವುದನ್ನು ಕಾಯುತ್ತಿದ್ದೆ!

You cannot copy content of this page

Exit mobile version