Home ರಾಜಕೀಯ ಚುನಾವಣೆ ಸಮಯದಲ್ಲಿ ಭರವಸೆ ನೀಡಿ ನಂತರ ಕೈ ಎತ್ತುವುದು ಮೋದಿಗೆ ಅಭ್ಯಾಸವಾಗಿ ಹೋಗಿದೆ: ರಾಹುಲ್ ಗಾಂಧಿ

ಚುನಾವಣೆ ಸಮಯದಲ್ಲಿ ಭರವಸೆ ನೀಡಿ ನಂತರ ಕೈ ಎತ್ತುವುದು ಮೋದಿಗೆ ಅಭ್ಯಾಸವಾಗಿ ಹೋಗಿದೆ: ರಾಹುಲ್ ಗಾಂಧಿ

0

ಪಾಟ್ನಾ: ಬಿಹಾರದಲ್ಲಿ ಮಹಾಘಟಬಂಧನ್ (Mahagathbandhan) ಅಧಿಕಾರಕ್ಕೆ ಬಂದರೆ, ರಾಜ್ಯದ ರೈತರು, ಕಾರ್ಮಿಕರು, ದಲಿತರು ಮತ್ತು ದುರ್ಬಲ ವರ್ಗದ ಜನತೆಗೆ ಅನುಕೂಲಕರವಾದ ಆಡಳಿತವನ್ನು ಒದಗಿಸುವುದಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.

ಕಾಂಗ್ರೆಸ್ ಮತ್ತು ಮಹಾಗಠಬಂಧನ್ ಅಭ್ಯರ್ಥಿಗಳ ಪರವಾಗಿ ಬಿಹಾರದ ಬೇಗುಸರಾಯ್ ಮತ್ತು ಇತರ ಪ್ರದೇಶಗಳಲ್ಲಿ ನಡೆದ ಪ್ರಚಾರ ರ‍್ಯಾಲಿಗಳಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು, ಚುನಾವಣಾ ಸಮಯದಲ್ಲಿ ಭರವಸೆಗಳನ್ನು ನೀಡಿ, ನಂತರ ರಾಜ್ಯದ ಕಡೆ ಕಣ್ಣೆತ್ತಿಯೂ ನೋಡದೆ ಮುಖ ತಿರುಗಿಸುವುದು ಪ್ರಧಾನಿ ಮೋದಿಯವರ ಅಭ್ಯಾಸವಾಗಿದೆ ಎಂದು ಟೀಕಿಸಿದರು.

ಓಟು ಮತ್ತು ಅಧಿಕಾರಕ್ಕಾಗಿ ಮೋದಿ ಏನನ್ನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದರೂ, ಯುವ ಜನಾಂಗವು ಈ ಬಗ್ಗೆ ಪ್ರಶ್ನೆಗಳನ್ನು ಎತ್ತದಂತೆ ಅವರ ಗಮನವನ್ನು ಬೇರೆಡೆಗೆ ಸೆಳೆಯಲು “ರೀಲ್ಸ್‌ ನೋಡುವಂತೆ” ಕೇಳಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಆಕ್ಷೇಪಿಸಿದರು. ತಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಜನರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದರು.

ಭಾರತ-ಪಾಕ್ ನಡುವಿನ ಸೈನಿಕ ಸಂಘರ್ಷವನ್ನು ತಾನು ನಿಲ್ಲಿಸಿದ್ದೇನೆ ಎಂದು ಟ್ರಂಪ್ ಪದೇ ಪದೇ ಹೇಳುತ್ತಿದ್ದರೂ, ಅದನ್ನು ಪ್ರಶ್ನಿಸುವ ಧೈರ್ಯ ಮೋದಿಗೆ ಇಲ್ಲ ಎಂದು ರಾಹುಲ್ ಟೀಕಿಸಿದರು. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಸುಧಾರಣೆಗಳಂತಹ ಮೋದಿ ಸರ್ಕಾರದ ನಿರ್ಧಾರಗಳು ದೇಶದ ಕೆಲವೇ ಕೆಲವು ಉದ್ಯಮಿಗಳಿಗೆ ಮಾತ್ರ ಪ್ರಯೋಜನ ನೀಡಿವೆ ಹೊರತು ಸಾಮಾನ್ಯ ಜನರಿಗೆ ಏನೂ ಪ್ರಯೋಜನವಾಗಿಲ್ಲ. ಆದರೆ, ತಾವು ಮಾತ್ರ ಸಣ್ಣ ವ್ಯಾಪಾರಿಗಳು ಅಭಿವೃದ್ಧಿ ಹೊಂದಬೇಕು ಎಂಬ ಆಲೋಚನೆಯೊಂದಿಗೆ ಮುನ್ನಡೆಯುತ್ತೇವೆ ಎಂದು ಅವರು ತಿಳಿಸಿದರು.

ಮೀನುಗಾರರೊಂದಿಗೆ ಕೆರೆಯಲ್ಲಿ ಮೀನುಗಾರಿಕೆ

ಸಾಮಾನ್ಯ ಜನರ ಕಷ್ಟಗಳನ್ನು ತಿಳಿದುಕೊಳ್ಳಲು ರಾಹುಲ್ ಅವರು ವಿನೂತನ ಶೈಲಿಯಲ್ಲಿ ಜನರನ್ನು ಆಕರ್ಷಿಸುವ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿದ್ದಾರೆ. ಬೇಗುಸರಾಯ್ ಜಿಲ್ಲೆಯಲ್ಲಿ ಭಾನುವಾರ ಅವರು ಮೀನುಗಾರರೊಂದಿಗೆ ಕೆರೆಯಲ್ಲಿ ಮೀನುಗಾರಿಕೆ ನಡೆಸಿದರು. ಇದಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಕಾಂಗ್ರೆಸ್ ಪಕ್ಷವು ‘ಎಕ್ಸ್’ (X) ವೇದಿಕೆಯಲ್ಲಿ ಪೋಸ್ಟ್ ಮಾಡಿದೆ.

ಮಾಜಿ ಸಚಿವ, ವಿಕಾಸಶೀಲ್ ಇನ್ಸಾನ್ ಪಾರ್ಟಿ ಸಂಸ್ಥಾಪಕ ಮತ್ತು ವಿರೋಧ ಪಕ್ಷದ ಮೈತ್ರಿಕೂಟದ ಉಪಮುಖ್ಯಮಂತ್ರಿ ಅಭ್ಯರ್ಥಿ ಮುಕೇಶ್ ಸಹಾನಿ ಅವರೊಂದಿಗೆ ರಾಹುಲ್ ಗಾಂಧಿ ದೋಣಿಯ ಸಹಾಯದಿಂದ ಕೆರೆಯೊಂದಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಮುಕೇಶ್ ಸಹಾನಿ ನೀರಿಗಿಳಿದು ಮೀನು ಹಿಡಿಯಲು ಬಲೆ ಹಾಕಿದರು. ಸ್ವಲ್ಪ ಸಮಯದ ನಂತರ ರಾಹುಲ್ ಗಾಂಧಿ ಕೂಡ ನೀರಿಗಿಳಿದು ಮೀನುಗಾರರೊಂದಿಗೆ ಸೇರಿ ಮೀನು ಹಿಡಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

You cannot copy content of this page

Exit mobile version