ಬೆಂಗಳೂರು: ಶಬರಿಮಲೆಯಲ್ಲಿ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಆಗಮಿಸಿರುವ ಹಿನ್ನಲೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಡಿಸೆಂಬರ್ 10 ರಂದು 18 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ತಾಳ್ಮೆ ಕಳೆದುಕೊಂಡು ಬ್ಯಾರಿಕೇಡ್‌ಗಳನ್ನು ಭೇದಿಸಿದ್ದರು. ಇದರಿಂದಾಗಿ ಮೆಟ್ಟಿಲುಗಳ ಬಳಿ ಅನಿಯಂತ್ರಿತ ನೂಕುನುಗ್ಗಲು ಉಂಟಾಯಿತು. ಡಿಸೆಂಬರ್ 12 ರಂದು ಅಧಿಕಾರಿಗಳಿಗೆ ಕೊನೆಗೂ ಜನದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಾಯಿತು.
ಈ ಮಧ್ಯೆ, ಬಸ್ಸಿನ ಒಳಗಿನಿಂದ ಮಗುವೊಂದು ‘ಅಪ್ಪಾ’ ಎಂದು ಕೂಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನೇತೃತ್ವದ ಸರ್ಕಾರ ಇರುವ ‘ಕೇರಳದ ಹಿಂದೂಗಳ ದುಸ್ಥಿತಿಯನ್ನು ತೋರಿಸುತ್ತದೆ’ ಎಂದು ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಾಮನ್ ದಾಸ್ ವೀಡಿಯೊವನ್ನು ಟ್ವೀಟ್ ಮಾಡಿದ್ದು, ಮಗುವನ್ನು ‘ಸನಾತನ ಧರ್ಮವನ್ನು ಪಾಲಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ’ ಎಂದು ಹೇಳಿದ್ದಾರೆ. ಕೆಲ ಸಮಯದ ನಂತರ ದಾಸ್ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಹಿಂದುತ್ವ ಕಾರ್ಯಕರ್ತ ಮತ್ತು ಹಿಂದೂ ಸೇವಾ ಕೇಂದ್ರದ ಸಂಸ್ಥಾಪಕ ಪ್ರತೀಶ್ ವಿಶ್ವನಾಥ್ ಈ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದು, ಟ್ವೀಟನ್ನು X ನಲ್ಲಿ 2 ಲಕ್ಷದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಈ ವಿಡಿಯೋವನ್ನು ಅನೇಕ ಅಧಿಕೃತ x ಖಾತೆಗಳಲ್ಲೂ ಹಂಚಲಾಗಿದ್ದು, ಪೋಸ್ಟರ್‌ಗಳನ್ನೂ ಮಾಡಿ ಹರಿಬಿಡಲಾಗುತ್ತಿದೆ.
ವಿಡಿಯೋ ಹಿಂದಿರುವ ನಿಜಾಂಶವನ್ನು ವರದಿ ಮಾಡಿರುವ ಆಲ್ಟ್ ನ್ಯೂಸ್ ಹೀಗೆ ಹೇಳಿದೆ. ಈ ವಿಡಿಯೋವಿನ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ, ಏಷ್ಯಾನೆಟ್ ನ್ಯೂಸ್‌ನ “Sabarimala rush: Heart-wrenching video of crying child seeking help to find his father emerges” ಎಂಬ ಶೀರ್ಷಿಕೆಯ ವರದಿ ಕಂಡುಬಂದಿದೆ. ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ವೀಡಿಯೊನಲ್ಲಿ ಘಟನೆಯ ಒಂದು ಭಾಗವನ್ನು ಮಾತ್ರ ತೋರಿಸಲಾಗಿದೆ. ಸಂಪೂರ್ಣ ವೀಡಿಯೊದಲ್ಲಿ ಮಗು ತನ್ನ ತಂದೆಯನ್ನು ಗುರುತಿಸಿ, ಅವರತ್ತ ಕೈ ಬೀಸುತ್ತಾನೆ. ಏಷ್ಯಾನೆಟ್ ನ್ಯೂಸ್ ಈ ವಿಡಿಯೋವನ್ನು ಹಂಚಿಕೊಂಡಿದೆ.
34-ಸೆಕೆಂಡ್‌ಗಳ ಕ್ಲಿಪ್‌ನ ಆರಂಭದಲ್ಲಿ ಮಗು ತನ್ನ ತಂದೆಯನ್ನು ಅಳುತ್ತಾ ಹುಡುಕುತ್ತಾನೆ. ಖಾಕಿ ಸಮವಸ್ತ್ರ ಮತ್ತು ಭುಜದ ತೋಳಿನ ಮೇಲೆ ಪೊಲೀಸ್ ಮುದ್ರೆ ಇರುವ ಪೋಲಿಸ್ 0:10 ಕ್ಕೆ ಅವನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ.
0:27-ಸೆಕೆಂಡ್‌ನಲ್ಲಿ, ಹುಡುಗ ತನ್ನ ತಂದೆಯನ್ನು ಗುರುತಿಸಿ, ಅವರ ಕಡೆಗೆ ತನ್ನ ತೋಳನ್ನು ಚಾಚುತ್ತಾನೆ. ಅವರು ಮಗುವಿಗೆ ಕಾಯುವಂತೆ ಸನ್ನೆ ಮಾಡುತ್ತಾರೆ. ಅಷ್ಟು ಹೊತ್ತಿಗೆ ಮಗು ಸ್ವಲ್ಪ ಶಾಂತವಾಗುತ್ತಾನೆ.
ಪೊಲೀಸ್ ಅಧಿಕಾರಿಗಳು ಭಕ್ತರ ಜೊತೆಗೆ ಕೆಟ್ಟದಾಗಿ ನಡೆದುಕೊಂಡಿಲ್ಲ. ಹಿಂದೂ ಎಂಬ ಕಾರಣಕ್ಕೆ ಈ ರೀತಿ ನಡೆಸಿಕೊಂಡಿದ್ದಾರೆ ಎಂಬುದು ಅಪ್ಪಟ ಅಪಪ್ರಚಾರ. ಜನದಟ್ಟನೆಯಲ್ಲಿ ಒಂದು ಗಳಿಗೆ ಮಗುವಿನಿಂದ ತಂದೆ ಬೇರ್ಪಟ್ಟಿದ್ದಾರೆ. ಇದರಿಂದ ಸಹಜವಾಗಿಯೇ ಆತಂಕಗೊಂಡಿರುವ ಮಗು ತಂದೆಗಾಗಿ ಕೂಗುತ್ತಾ ಅಳುತ್ತಿದೆ, ಅಷ್ಟೇ.
ಏಷ್ಯಾನೆಟ್ ನ್ಯೂಸ್ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ವಾಹನದ ನಂಬರ್ ಪ್ಲೇಟ್ ಕೆಎಲ್-15 ಎ-814 ಎಂದಿದೆ. ಇದು ಸರ್ಕಾರಿ ಬಸ್ ಆಗಿದ್ದು, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಅಡಿಯಲ್ಲಿ ಬರುವ ಬಸ್‌ಗಳನ್ನು ತಿರುವನಂತಪುರಂನಲ್ಲಿ ‘ಕೆಎಲ್-15’ ಸಂಖ್ಯೆಯನ್ನು ನೋಂದಾಯಿಸಲಾಗುತ್ತದೆ. ಕೆಎಸ್‌ಆರ್‌ಟಿಸಿಯ ಲಾಂಛನವು ಬಸ್‌ನಲ್ಲಿ ಕಾಣುತ್ತದೆ. ಲೋಗೋಗೆ ಹೊಂದಿಕೆಯಾಗುತ್ತದೆ. ಇದು ಪೊಲೀಸ್ ಬಸ್ ಅಲ್ಲವೇ ಅಲ್ಲ. ಪೊಲೀಸರು ಭಕ್ತರನ್ನು ಬಂಧಿಸಿದ್ದಾರೆ ಎಂಬುದು ದೊಡ್ಡ ಸುಳ್ಳು!
ಆಲ್ಟ್‌ನ್ಯೂಸ್ ಕೇರಳ ಪೊಲೀಸ್ ಪಿಆರ್‌ಒ ಪ್ರಮೋದ್ ಕುಮಾರ್ ಅವರೊಂದಿಗೆ ಮಾತನಾಡಿದ್ದು, ಅವರು ವೈರಲ್ ವಿಡಿಯೋ ಬಳಸಿ ಮಾಡಿರುವ ಅರೋಪವನ್ನು ತಳ್ಳಿಹಾಕಿದ್ದಾರೆ. ಶಬರಿಮಲೆ ಬೇಸ್‌ಕ್ಯಾಂಪ್ ಆಗಿರುವ ನಿಲಕ್ಕಲ್‌ನಿಂದ ಆಚೆಗೆ ಯಾತ್ರಾರ್ಥಿಗಳ ವಾಹನಗಳಿಗೆ ಅನುಮತಿ ಇಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಎಲ್ಲಾ ಯಾತ್ರಾರ್ಥಿಗಳನ್ನೂ ಸರ್ಕಾರಿ ಸ್ವಾಮ್ಯದ ಬಸ್‌ಗಳ ಮೂಲಕ ಪಂಬಾಗೆ ಕರೆದುಕೊಂಡು ಹೋಗಲಾಗುತ್ತದೆ. ವಿಡಿಯೋದಲ್ಲಿರುವ ಮಗು ಬಸ್ ಹತ್ತಿತ್ತು, ಆದರೆ ಆತನ ತಂದೆ ಇನ್ನೂ ಬಸ್ ಹತ್ತಬೇಕಿತ್ತು. ಆದರೆ ಬಸ್ ಹೊರಡುವ ಮೊದಲು ಅವರು ಬಸ್ಸನ್ನು ಏರಿದರು. ಇದರ ಅರ್ಥ ತಂದೆ-ಮಗ ಬೇರ್ಪಟ್ಟಿಲ್ಲ. ಎರಡು ಮೂರು ನಿಮಿಷಗಳ ನಂತರ ಮಗು ಮತ್ತೆ ತಂದೆಯೊಂದಿಗೆ ಸೇರಿಕೊಂಡಿತು. ಘಟನೆಯನ್ನು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಅರ್ಥೈಸುತ್ತಿದ್ದಾರೆ.
ಹೀಗಾಗಿ, ಅಯ್ಯಪ್ಪನ ಭಕ್ತನಾದ, ತಂದೆಯಿಂದ ಬೇರ್ಪಟ್ಟ ಈ ಮಗುವಿನ ಆತಂಕ ಹಾಗೂ ನೋವನ್ನು ಬಳಸಿಕೊಂಡು ʼಹಿಂದೂಗಳಿಗೆ ರಕ್ಷಣೆ ಇಲ್ಲ” ಎಂದು ಹರಡುತ್ತಿರುವುದು ನರೇಟಿವ್ ಸುಳ್ಳು…ಸುಳ್ಳು..ಸುಳ್ಳು!
(ಈ ವರದಿಯನ್ನು ಆಲ್ಟ್‌ನ್ಯೂಸಿನ ಫ್ಯಾಕ್ಟ್‌ಚೆಕ್ ಆಧರಿಸಿ ಮಾಡಲಾಗಿದೆ)