Home ನಿಧನ ಸುದ್ದಿ ಪೋಷಕರ ಕಣ್ತಪ್ಪಿಸಿ ಕಾರಲ್ಲಿ ಕೂತ ಮಕ್ಕಳು ; ಕೆಲವೇ ನಿಮಿಷಗಳಲ್ಲಿ ಉಸಿರುಕಟ್ಟಿ ಸಾವು

ಪೋಷಕರ ಕಣ್ತಪ್ಪಿಸಿ ಕಾರಲ್ಲಿ ಕೂತ ಮಕ್ಕಳು ; ಕೆಲವೇ ನಿಮಿಷಗಳಲ್ಲಿ ಉಸಿರುಕಟ್ಟಿ ಸಾವು

0

ಪೋಷಕರ ಗಮನಕ್ಕೆ ಬಾರದೆ ಆಟವಾಡುತ್ತಾ ಕಾರಿನೊಳಗೆ ತೆರಳಿದ ಮಕ್ಕಳು ಉಸಿರುಕಟ್ಟಿ ಸಾವನ್ನಪ್ಪಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. 4 ವರ್ಷದ ತನುಶ್ರೀ ಹಾಗೂ 5 ವರ್ಷದ ಅಭಿನೇತ್ರ ಮೃತಪಟ್ಟ ಮಕ್ಕಳು. ಪೋಷಕರು ಮನೆಯ ಒಳಗೆ ಇದ್ದ ಸಂದರ್ಭದಲ್ಲಿ ಮಕ್ಕಳು ಕಾರಿನೊಳಗೆ ಹೋಗಿ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ.

ಮಕ್ಕಳು ಆಟವಾಡುತ್ತಾ ಮನೆಯಿಂದ ಹೊರಗಡೆ ಬಂದಿದ್ದು, ಮನೆ ಹೊರಗೆ ನಿಲ್ಲಿಸಿದ್ದ ಕಾರಿನೊಳಗೆ ಸೇರಿಕೊಂಡಿದ್ದಾರೆ. ತೀವ್ರ ಬಿಸಿಲಿನ ಸಂದರ್ಭದಲ್ಲಿ ಕಾರಿನ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ ಮನೆ ಒಳಗಡೆ ಏನೋ ಮಾತುಕತೆ ಮಾಡುತ್ತಿದ್ದ ಪೋಷಕರಿಗೆ ಮಕ್ಕಳು ಕಾರಿನ ಒಳಗೆ ಸೇರಿಕೊಂಡಿದ್ದು ಅರಿವಿಗೆ ಬಾರದಾಗಿದೆ. ಇತ್ತ ಕಾರಿನ ಒಳಗೆ ಒಂದು ಗಂಟೆಗೂ ಹೆಚ್ಚು ಕಾಲ ಇದ್ದ ಮಕ್ಕಳು ನಂತರ ಪ್ರಜ್ಞೆ ತಪ್ಪಿ ಕಾರಿನೊಳಗೆ ಬಿದ್ದಿದ್ದಾರೆ.

ಸುಮಾರು ಒಂದು ಗಂಟೆಯ ನಂತರ ಪೋಷಕರಿಗೆ ಈ ವಿಚಾರ ತಿಳಿದ ಕೂಡಲೇ ಪ್ರಜ್ಞೆ ತಪ್ಪಿದ ಇಬ್ಬರೂ ಮಕ್ಕಳನ್ನು ಕರೆದುಕೊಂಡು ಅವರು ಸಮೀಪದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ವೈದ್ಯರು ಮಕ್ಕಳು ಸಾವನ್ನಪ್ಪಿದ್ದನ್ನು ದೃಢಪಡಿಸಿದ್ದಾರೆ. ಮಕ್ಕಳ ಸಾವಿನ ನಂತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೇವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ದಮರಗಿರಿ ಗ್ರಾಮದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಕೆಲ ಮೂಲಗಳ ಪ್ರಕಾರ ಕೀ ಬಳಸಿ ಕಾರಿನ ಒಳಗೆ ಹೋದ ಮಕ್ಕಳಿಗೆ ನಂತರ ಕಾರಿನ ಡೋರ್ ಅನ್‌ಲಾಕ್ ಮಾಡುವುದಕ್ಕೆ ಗೊತ್ತಾಗದೇ ಒಳಗೆ ಸಿಲುಕಿ ಈ ದುರಂತ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ನಡೆದ ಜಾಗದಲ್ಲಿ ಮದುವೆ ಮಾತುಕತೆಗೆ ತೆರಳಿದ್ದ ಮೃತ ಮಕ್ಕಳ ಪೋಷಕರು ಕೆಲವೇ ಸಮಯದಲ್ಲಿ ಕಣ್ಮರೆಯಾದ ನಂತರ ಈ ಘೋರ ದುರಂತ ನಡೆದಿದೆ.

You cannot copy content of this page

Exit mobile version