ಬುಧವಾರ ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ನಿಧನರಾಗಿದ್ದಾರೆ.
ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ಬಾಡಿಗೆ ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಪ್ರಯತ್ನದ ವೇಳೆ ರನ್‌ವೇ ಬದಿಗೆ ಜಾರಿಕೊಂಡು ಅಪಘಾತಕ್ಕೀಡಾಗಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ ವಿಮಾನದಲ್ಲಿ ಅಜಿತ್ ಪವಾರ್ ಸೇರಿದಂತೆ ಅವರ ಭದ್ರತಾ ಸಿಬ್ಬಂದಿ ಸೇರಿ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು. ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆರು ಮಂದಿಯನ್ನೂ ಮೃತರೆಂದು ಘೋಷಿಸಿದ್ದಾರೆ.
ಜಿಲ್ಲಾ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ನಾಲ್ಕು ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲು ಅಜಿತ್ ಪವಾರ್ ಅವರು ತಮ್ಮ ಹುಟ್ಟೂರು ಬಾರಾಮತಿಗೆ ಮುಂಜಾನೆ ಮುಂಬೈನಿಂದ ಪ್ರಯಾಣ ಬೆಳೆಸಿದ್ದರು ಎಂದು ತಿಳಿದು ಬಂದಿದೆ.
ಅಜಿತ್ ಪವಾರ್ ಅವರ ಆಪ್ತ ಸಹಾಯಕ ಕಿರಣ್ ಗುರ್ಜರ್ ಅವರು, “ಅಜಿತ್ ಪವಾರ್ ಸೇರಿದಂತೆ ಆರು ಮಂದಿಯನ್ನು ಆಸ್ಪತ್ರೆಗೆ ಸತ್ತ ಸ್ಥಿತಿಯಲ್ಲೇ ತರಲಾಯಿತು” ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಬಾರಾಮತಿ ವಿಮಾನ ನಿಲ್ದಾಣದ ವ್ಯವಸ್ಥಾಪಕ ಶಿವಾಜಿ ತಾವರೆ ಮಾತನಾಡಿ, “VT-SSK ನೋಂದಣಿ ಹೊಂದಿರುವ ಲಿಯರ್ ಜೆಟ್ 45 ವಿಮಾನವು ಇಳಿಯಲು ಪ್ರಯತ್ನಿಸುತ್ತಿದ್ದ ವೇಳೆ ರನ್‌ವೇ ಪಕ್ಕಕ್ಕೆ ಸರಿದು ಅಪಘಾತಕ್ಕೀಡಾಗಿದೆ. ವಿಮಾನವನ್ನು ಮುಂಬೈನಿಂದ ಬಾಡಿಗೆಗೆ ಪಡೆಯಲಾಗಿತ್ತು” ಎಂದು ತಿಳಿಸಿದ್ದಾರೆ.
ಅಪಘಾತದ ಕಾರಣಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ತಾಂತ್ರಿಕ ದೋಷ ಅಥವಾ ಹವಾಮಾನ ವೈಪರಿತ್ಯ ಕಾರಣವಾಗಿರಬಹುದೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
