ಹಾಸನ : ಸಾಲದ ಒತ್ತಡ ಮತ್ತು ಸಾಲಗಾರರ ಕಿರುಕುಳ ಆರೋಪದ ನಡುವೆ ವ್ಯಕ್ತಿಯೊಬ್ಬರು ಸೆಲ್ಫಿ ವೀಡಿಯೋ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿ ಜೀವನವನ್ನೇ ಅಂತ್ಯಗೊಳಿಸಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ಹೃದಯ ವಿದ್ರಾವಕವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ನೆಲಮಂಗಲ ಮೂಲದ ಕೃಷ್ಣಪ್ಪ (47) ಕಳೆದ ಕೆಲವು ವರ್ಷಗಳಿಂದ ಪತ್ನಿ ಹಾಗೂ ಮಕ್ಕಳೊಂದಿಗೆ ಹಾಸನ ನಗರದಲ್ಲಿ ನೆಲೆಸಿದ್ದರು. ಸಾಲದ ವಿಚಾರವಾಗಿ ನಿರಂತರ ಕಿರುಕುಳ ಅನುಭವಿಸುತ್ತಿದ್ದೇನೆ ಎಂಬ ಆರೋಪದೊಂದಿಗೆ ಅವರು ಮೊಬೈಲ್‌ನಲ್ಲಿ ಸೆಲ್ಫಿ ವೀಡಿಯೋ ದಾಖಲಿಸಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ವೀಡಿಯೋದಲ್ಲಿ ಕೃಷ್ಣಪ್ಪ, ನೆಲಮಂಗಲದ ರಮೇಶ್ ಮತ್ತು ಮಂಜು ಎಂಬವರಿಂದ ತಾನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. “ನಾನು ಪಡೆದಿದ್ದು ಕೇವಲ 1 ಲಕ್ಷ ರೂ. ಸಾಲ. ಆದರೆ ನನ್ನ ಮೇಲೆ 40 ಲಕ್ಷ ರೂ. ಮೊತ್ತದ ಚೆಕ್ ಕೇಸ್ ಹಾಕಲಾಗಿದೆ. ಜಾಮೀನು ಪಡೆಯಲು ಬೇಕಾದ ಹಣ ನನ್ನಿಂದ ಸಾಧ್ಯವಿಲ್ಲ. ಈ ಕಿರುಕುಳವನ್ನು ಇನ್ನೆಷ್ಟು ದಿನ ಸಹಿಸಬೇಕು?” ಎಂದು ಅವರು ವೀಡಿಯೋದಲ್ಲಿ ನೋವಿನಿಂದ ಪ್ರಶ್ನಿಸುತ್ತಾರೆ.
ಪತ್ನಿಯನ್ನು ಉದ್ದೇಶಿಸಿ ಮಾತನಾಡಿರುವ ಕೃಷ್ಣಪ್ಪ, “ಕಾಂಚನ, ನನ್ನನ್ನು ಕ್ಷಮಿಸಿ. ನಾನು ಸೋತಿದ್ದೇನೆ” ಎಂದು ಹೇಳುತ್ತಾ, ತಮ್ಮ ಸಾವಿಗೆ ನೇರ ಕಾರಣ ಸಾಲದ ವಿಚಾರದಲ್ಲಿ ಕಿರುಕುಳ ನೀಡಿದವರೇ ಎಂದು ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಸಾವಿಗೆ ನ್ಯಾಯ ಸಿಗಬೇಕು ಹಾಗೂ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಮನವಿಯನ್ನೂ ವೀಡಿಯೋದಲ್ಲಿ ದಾಖಲಿಸಿದ್ದಾರೆ. ವೀಡಿಯೋ ಮಾಡುತ್ತಲೇ ವಿಷ ಸೇವಿಸಿದ ಕೃಷ್ಣಪ್ಪ, ಹಾಸನ ಹೊರವಲಯದ ದೊಡ್ಡಪುರ ಬಳಿ ಅಸ್ವಸ್ಥಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ವೀಡಿಯೋ ಹೇಳಿಕೆ, ಕುಟುಂಬದ ಮಾಹಿತಿ ಹಾಗೂ ಇತರ ದಾಖಲೆಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.
