ಹೊರ ರಾಷ್ಟ್ರಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸಿದ ಅಮೇರಿಕಾ ಮೇಲೆ ಸೇಡು ತೀರಿಸಿಕೊಳ್ಳಲು ಅನೇಕ ರಾಷ್ಟ್ರಗಳು ಮುಂದಾಗಿದ್ದು, ಅದರ ಮೊದಲ ಹಂತವಾಗಿ ಚೀನಾ ಈಗ ಅಮೇರಿಕಾ ದೇಶದ ಉತ್ಪನ್ನಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸಲು ಮುಂದಾಗಿದೆ. ಆ ಮೂಲಕ ಅಮೆರಿಕದೊಂದಿಗೆ ನೇರ ತೆರಿಗೆ ಯುದ್ಧಕ್ಕೆ ಚೀನಾ ಇಳಿದಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಸುಂಕಗಳಿಗೆ ಪ್ರತೀಕಾರದ ಕ್ರಮಗಳ ಒಂದು ಭಾಗವಾಗಿ, ಮುಂದಿನ ವಾರ ಅಮೆರಿಕದ ಎಲ್ಲಾ ಆಮದುಗಳ ಮೇಲೆ ಶೇ. 34 ರಷ್ಟು ತೆರಿಗೆ ವಿಧಿಸುವುದಾಗಿ ಚೀನಾ ಶುಕ್ರವಾರ ಘೋಷಿಸಿದೆ. ಮುಂದಿನ ದಿನಗಳಲ್ಲಿ ಜಗತ್ತಿನ ದೊಡ್ಡಣ್ಣ ಎಂದೇ ಕರೆಸಿಕೊಳ್ಳುತ್ತಿದ್ದ ಅಮೇರಿಕಾ ಈಗ ಹಲವು ದೇಶಗಳ ತೆರಿಗೆ ಸುಂಕದ ಹೊಡೆತವನ್ನು ಎದುರಿಸಬೇಕಾಗಿದೆ.
ಚೀನಾದ ತೆರಿಗೆ ಸುಂಕದ ನಿರ್ಧಾರದ ನಂತರ ಅಮೇರಿಕಾ ಷೇರು ಮಾರುಕಟ್ಟೆ ಶುಕ್ರವಾರ ಕುಸಿದಿದೆ. ಚೀನಾ ಆರು ಅಮೇರಿಕನ್ ಕಂಪನಿಗಳಿಂದ ಸೋರ್ಗಮ್, ಕೋಳಿ ಮತ್ತು ಮಾಂಸದ ಆಮದನ್ನು ಸ್ಥಗಿತಗೊಳಿಸಿದೆ. ವ್ಯಾಪಾರ ನಿರ್ಬಂಧಗಳನ್ನು ಎದುರಿಸುತ್ತಿರುವ ಕಂಪನಿಗಳ ಪಟ್ಟಿಗೆ 27 ಸಂಸ್ಥೆಗಳನ್ನು ಸೇರಿಸಿದೆ ಮತ್ತು ಬಹುರಾಷ್ಟ್ರೀಯ ರಾಸಾಯನಿಕ ದೈತ್ಯ ಅಂಗಸಂಸ್ಥೆಯಾದ ಡುಪಾಂಟ್ ಚೀನಾ ಗ್ರೂಪ್ ಕಂಪನಿಯ ಮೇಲೆ ಏಕಸ್ವಾಮ್ಯ ವಿರೋಧಿ ತನಿಖೆಯನ್ನು ಪ್ರಾರಂಭಿಸಿತು.
ಅಷ್ಟೇ ಅಲ್ಲದೆ ಚೀನಾ ಅಮೇರಿಕಾದ ಹಲವು ಪ್ರಬಲ ಕಂಪನಿಗಳ ವಿರುದ್ಧವೂ ನೇರ ಸಮರ ಸಾರಿದೆ. ಚೀನಾ ಸರ್ಕಾರವು 16 ಯುಎಸ್ ಕಂಪನಿಗಳನ್ನು ರಫ್ತು ನಿಯಂತ್ರಣ ಪಟ್ಟಿಗೆ ಸೇರಿಸಿದೆ, ಅವುಗಳನ್ನು ದ್ವಿ-ಬಳಕೆಯ ಉತ್ಪನ್ನಗಳ ರಫ್ತು ನಿಷೇಧಕ್ಕೆ ಒಳಪಡಿಸಲಾಗಿದೆ ಎಂದು ಚೀನಾ ಸರ್ಕಾರ ಹೇಳಿದೆ. ಅವುಗಳಲ್ಲಿ ಹೈ ಪಾಯಿಂಟ್ ಏರೋಟೆಕ್ನಾಲಜೀಸ್, ರಕ್ಷಣಾ ತಂತ್ರಜ್ಞಾನ ಕಂಪನಿ ಮತ್ತು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕಂಪನಿಯಾದ ಯೂನಿವರ್ಸಲ್ ಲಾಜಿಸ್ಟಿಕ್ಸ್ ಹೋಲ್ಡಿಂಗ್ ಕೂಡ ಸೇರಿವೆ.
ಅಮೆರಿಕನ್ ಡ್ರೋನ್ ತಯಾರಕರಾದ ಸ್ಕೈಡಿಯೊ ಮತ್ತು ಬ್ರಿಂಕ್ ಡ್ರೋನ್ಸ್ ಸೇರಿದಂತೆ 11 ಯುಎಸ್ ಕಂಪನಿಗಳನ್ನು ವಿಶ್ವಾಸಾರ್ಹವಲ್ಲದ ಘಟಕದ ಪಟ್ಟಿಗೆ ಚೀನಾ ಸೇರಿಸಲಾಗಿದೆ. ಆಮದು ಮತ್ತು ರಫ್ತು ಚಟುವಟಿಕೆಗಳಿಂದ ಮತ್ತು ಚೀನಾದಲ್ಲಿ ಹೊಸ ಹೂಡಿಕೆಗಳಿಂದ ಅವುಗಳನ್ನು ನಿಷೇಧಿಸಲಾಗಿದೆ ಎಂದು ಚೀನಾ ಸರ್ಕಾರ ಹೇಳಿಕೊಂಡಿದೆ.
ಚೀನಾ ಸರ್ಕಾರದ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೈನಾ ನಿರ್ಧಾರವನ್ನು ಆತುರ ಮತ್ತು ಆತಂಕಕ್ಕೆ ಒಳಗಾಗಿ ಕೈಗೊಂಡ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.