Home ರಾಜ್ಯ ಚಿತ್ರದುರ್ಗ ಚಿತ್ರದುರ್ಗ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತ ಹೆಣ್ಣುಮಕ್ಕಳನ್ನು ನಿಮ್ಹಾನ್ಸ್‌ಗೆ ಕರೆದೊಯ್ಯಲು ಪ್ರಯತ್ನ?!

ಚಿತ್ರದುರ್ಗ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತ ಹೆಣ್ಣುಮಕ್ಕಳನ್ನು ನಿಮ್ಹಾನ್ಸ್‌ಗೆ ಕರೆದೊಯ್ಯಲು ಪ್ರಯತ್ನ?!

0

ಚಿತ್ರದುರ್ಗ: ಚಿತ್ರದುರ್ಗದ ಪ್ರತಿಷ್ಠಿತ ಮಠದ ಆಶ್ರಯದಲ್ಲಿ ಓದುತ್ತಿದ್ದ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣದಲ್ಲಿ ಮಠಾಧೀಶರು ಜೈಲು ಪಾಲಾಗಿದ್ದಾರೆ. ಈಗ ಕಾನೂನಿನ ಕುಣಿಕೆ ಅವರ ಮೇಲೆ ನೇತಾಡುತ್ತಿದ್ದಂತೆ ತೆರೆಮರೆಯಲ್ಲಿ ಹೊಸ ಚಾಲಾಕಿ ತಂತ್ರಗಳನ್ನು ಹೆಣೆಯಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೀಪಲ್‌ ಮೀಡಿಯಾಕ್ಕೆ ನಂಬಲರ್ಹ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮೂಲಗಳ ಪ್ರಕಾರ ಲೈಂಗಿಕ ದೌರ್ಜನ್ಯ ಒಳಗಾಗಿರುವ ಇಬ್ಬರು ನತದೃಷ್ಟ ಹೆಣ್ಣು ಮಕ್ಕಳನ್ನು ಹೇಗಾದರೂ ಮಾಡಿ “ಮಾನಸಿಕ ಅಸ್ವಸ್ಥರು” ಎಂದು ಬಿಂಬಿಸಲು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಒಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಾಕೆಯ ಸಂಬಂಧಿಕರಿಗೆ ಆಮಿಷ ಒಡ್ಡಿ ಒತ್ತಡ ಹೇರಿ ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಬಾಲಕಿಯೊಬ್ಬಳ ಚಿಕ್ಕಪ್ಪನ ಮೂಲಕ ಬಾಲಕಿಯನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆದೊಯ್ಯಲು ಪ್ರಯತ್ನ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ. ನಿಮ್ಹಾನ್ಸ್‌ ನಲ್ಲಿ ಕೌನ್ಸೆಲಿಂಗ್‌ ಕೊಡಿಸುವ ನೆಪದಲ್ಲಿ ಬೇರೆಯದೇ ತಂತ್ರವನ್ನು ಮಠದ ಮೂಲಗಳು ನಡೆಸಿರುವ ಶಂಕೆ ವ್ಯಕ್ತವಾಗಿದೆ. ಆದರೆ ಆ ಬಾಲಕಿಯು ಇದಕ್ಕೆ ಸುತಾರಾಂ ಒಪ್ಪದೇ ಇರುವಾಗ ಮತ್ತೊಬ್ಬ ಬಾಲಕಿಯ ತಂದೆಯನ್ನು ಕರೆಸಿಕೊಂಡು ʼನಿಮ್ಮ ಮಗಳನ್ನು ಕಳಿಸಿದರೆ ಅವಳೂ ಹೋಗುತ್ತಾಳೆ, ಕಳಿಸಿಕೊಡಿʼ ಎಂದು ಒತ್ತಾಯ ಹೇರುವ ಜೊತೆಗೆ ಮಾನಸಿಕವಾಗಿ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.

ಈ ಸಂಬಂಧ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲುಸಿ)ಯ ಅಧ್ಯಕ್ಷರಾದ ಪ್ರಭಾಕರ್‌ ಅವರನ್ನು ಪೀಪಲ್‌ ಮೀಡಿಯಾ ಸಂಪರ್ಕಿಸಿದರೂ ಅವರು ʼನಾನು ಜೆಜೆ ಕಾಯ್ದೆಯ ಪ್ರಕಾರ ಯಾವುದೇ ಮಾಹಿತಿಯನ್ನು ಮಾಧ್ಯಮದವರೊಂದಿಗೆ ಹಂಚಿಕೊಳ್ಳುವಂತಿಲ್ಲʼ ಎಂದಷ್ಟೇ ತಿಳಿಸಿದರು.

ಆರೋಪಿ ಶಿವಮೂರ್ತಿಯವರ ಮೇಲೆ ಪೋಕ್ಸೋ ಕಾಯ್ದೆ ಸೇರಿದಂತೆ ಬಲವಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಈಗ ಹೆಣ್ಣುಮಕ್ಕಳನ್ನೇ ತಪಿತ್ತಸ್ತರು ಎಂಬಂತೆ ಬಿಂಬಿಸಿ ಆರೋಪಿಯನ್ನು ರಕ್ಷಿಸುವ ತೆರೆಮರೆಯ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಗುಮಾನಿ ವ್ಯಕ್ತವಾಗಿದೆ.

ಇತ್ತೀಚೆಗಷ್ಟೇ ಚಿತ್ರದುರ್ಗದಲ್ಲಿ ʼಮಕ್ಕಳೊಡನೆ ನಾವುʼ ಎಂಬ ಘೋಷವಾಕ್ಯದಡಿ ಬೃಹತ್‌ ಪ್ರತಿಭಟನೆಯು ಸಂತ್ರಸ್ತ ಮಕ್ಕಳ ಪರವಾಗಿ ನಡೆದಿದೆ. ಹೀಗಿದ್ದರೂ ಆರೋಪಿಗಳನ್ನು ಕಾನೂನಿನ ಕುಣಿಕೆಯಿಂದ ಬಚಾವು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.

ಇದುವರೆಗೆ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಸಂತ್ರಸ್ತ ಹೆಣ್ಣು ಮಕ್ಕಳಿಗೆ  ಕೊಂಚ ಒತ್ತಡವಾಗಿರಬಹುದು. ಆದರೆ ಅವರಿಗೆ ನಿಮ್ಹಾನ್ಸ್‌ನಂತಹ ಕಡೆ ಕೌನ್ಸೆಲಿಂಗ್‌ ಕೊಡಿಸುವ ಬದಲು ಅವರು ಎಲ್ಲಿ ಇರಲು ಬಯಸುತ್ತಾರೋ ಅಂತಹ ಕಡೆಯಲ್ಲಿ ಇರಿಸಿದರೆ ಉತ್ತಮವಲ್ಲವೇ ಎಂಬ ಅಭಿಪ್ರಾಯವನ್ನು ಚಿತ್ರದುರ್ಗದ ಹಿರಿಯ ಮಹಿಳಾ ಮುಖಂಡರೊಬ್ಬರು ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version