ತುಳುನಾಡು ಎಂದು ಕರೆಯಲ್ಪಡುವ ಅವಿಭಜಿತ ದಕ್ಷಿಣ ಕನ್ನಡವನ್ನು ಬಹು ಸಮುದಾಯಗಳು ಕಟ್ಟಿವೆ. ಇಲ್ಲಿನ ದೈವಗಳು ಎಲ್ಲರನ್ನೂ ಒಳಗೊಳ್ಳುವ ಶಕ್ತಿಯನ್ನು ಹೊಂದಿವೆ. ಕೊರಗ, ಮೇರ, ಮಾಯಿಲ, ಮಲೆಕುಡಿಯ, ಬಂಟ, ಬಿಲ್ಲವ, ಪಂಬದ, ಮೊಗವೀರ, ಮುಸಲ್ಮಾನರ, ಕ್ರೈಸ್ತ ಮೊದಲಾದ ಸಮುದಾಯಗಳು ಈ ನೆಲದ ಸಂಸ್ಕೃತಿಯನ್ನು ರೂಪಿಸಿವೆ. ತುಳುನಾಡು ಬೌದ್ಧರ, ಜೈನರ, ಅಜೀವಕರ, ನಾಥರ, ಗಾಣಪತ್ಯರ, ಸೌರಮತದವರ, ಕಾಲಮುಖಾದಿ ತಾಂತ್ರಿಕ ಪಂಥಗಳ, ಮೊದಲಾದ ಮತ- ಪಂಥಗಳ ಆಡುಂಬಲವಾಗಿದೆ. ತುಳುನಾಡಿನ ಬಹುರೂಪಿ ಸಂಸ್ಕೃತಿಯ ಭಿನ್ನ ನೆಲೆಗಳ ಬಗ್ಗೆ ಚರಣ್ ಐವರ್ನಾಡು ʼತುಳುವ ಕಥನʼ ಸರಣಿ ಲೇಖನ ಬರೆಯಲಿದ್ದಾರೆ. ಇದರ ಮೊದಲ ಲೇಖನ ಇಲ್ಲಿದೆ…..
“ಬಡಗು ಅಂಕೋಲೆಯಿಂದ, ತೆಂಕರಾಮೇಶ್ವರ, ಮೂಡಗಟ್ಟ ಪಡು ಸಮುದ್ರ” ನಡುವಿನ ತುಳುನಾಡಿನ ಸಂಸ್ಕೃತಿ ಬಹು ಸಮದಾಯಗಳಿಂದ ರೂಪಿಸಲ್ಪಟ್ಟಿದೆ. ತುಳು ಪ್ರಧಾನ ಭಾಷೆಯಾಗಿದ್ದರೂ ತುಳುನಾಡು ಬಹುಭಾಷಿಕ ಪ್ರದೇಶ. ಹೀಗಾಗಿ ಆ ನೆಲದ ಮಣ್ಣಿಗೆ ಎಲ್ಲರನ್ನೂ ಒಳಗೊಳ್ಳುವ ಗುಣವಿರಿವುದರಿಂದ ಅದಕ್ಕೊಂದು ಸೌಹಾರ್ದತೆಯ ಪರಂಪರೆಯಿದೆ. ತುಳುನಾಡಿನ ದೈವಗಳು “ಕೂಡಿಂಚಿ ಕಳೊಟ್ಟು ಮುತ್ತುಂಡು ಪನ್ಪಿ ಕಟ್ಟ್!” ಎಂದು ತನ್ನನ್ನು ನಂಬಿದ ಭಕ್ತರಿಗೆ ಹೇಳುತ್ತವೆ. ಜನ ಒಗ್ಗಟ್ಟಾಗಿರುವ ಸ್ಥಳದಲ್ಲಿ ಮುತ್ತಿದೆ ಎಂಬುದು ಅದರರ್ಥ. ದೈವಗಳ ನೇಮ ನಡಾವಳಿ ನಡೆಯುವಾಗ ಕುಟುಂಬದ ಓರ್ವ ಸದಸ್ಯನೋ ಅಥವಾ ಒಂದು ಸಮುದಾಯದ ಮುಖಂಡನೋ ಭಾಗವಹಿಸದೇ ಇದ್ದಲ್ಲಿ ದೈವ ಅವರೆಲ್ಲಿ….? ಎಂದು ಕೇಳುತ್ತದೆ.
ಮಂಗಳೂರಿನ ಮಲ್ಲೂರು ಜುಮಾದಿ ದೈವದ ದೈವಸ್ಥಾನದಲ್ಲಿ ಮಾಜಿ ಶಾಸಕ ಮೊಯಿದ್ದೀನ್ ಬಾವ ಬೇಟಿ ನೀಡಿದಾಗ ದೈವ ಅವರಿಗೆ ಹೂವಿನ ಹಾರವನ್ನು ಹಾಕಿ ಪ್ರಸಾದ ನೀಡಿ ಗೌರವಿಸುತ್ತದೆ. ಇದಕ್ಕೆ ಕೆಲವು ಯುವಕರು ಆಕ್ಷೇಪ ಎತ್ತಿದಾಗ ದೈವಕ್ಕೆ ಕೋಪ ಬಂತು. ದೈವ ತನ್ನ ಕಣ್ಣಲ್ಲಿ ಎಲ್ಲಾ ಧರ್ಮ, ಜಾತಿಯವರೂ ಸಮಾನರು ಎನ್ನುತ್ತಾ ತನ್ನ ಕೈಯಲ್ಲಿದ್ದ ಆಯುಧ ಕಡ್ಸಲೆಯನ್ನು ನೆಲಕ್ಕೆ ಮೂರು ಬಾರಿ ಊರಿ ಆಕ್ರೋಶ ವ್ಯಕ್ತ ಪಡಿಸುತ್ತದೆ. ಜಾನಪದ ದೇವತೆಗಳಿಗಿರುವ ವಿಶೇಷವಾದ ಶಕ್ತಿ ಎಂದರೆ ಎಲ್ಲರನ್ನೂ ಒಳಗೊಳ್ಳುವ ಗುಣ.
ತುಳುವ ಸಮುದಾಯಗಳು ಕಟ್ಟಿದ ಸಂಸ್ಕೃತಿ, ಅದು ಬೆಳದು ಬಂದ ಚರಿತ್ರೆಗೆ ಒಂದು ಸುದೀರ್ಘವಾದ ಪರಂಪರೆಯಿದೆ. ತುಳುನಾಡಿನ ಮೂಲ ನಿವಾಸಿಗಳು ಯಾರು ಎಂಬ ಸ್ಪಷ್ಟತೆ ನಮ್ಮಲ್ಲಿ ಇಲ್ಲ. ತುಳುನಾಡಿನ ಪೂರ್ವ ಇತಿಹಾಸವನ್ನು ತಿಳಿಯಲು ನಾವು ಸ್ಥಳನಾಮೆಗಳ ಅಧ್ಯಯನ ಮಾಡಬೇಕು. ತುಳುನಾಡಿನಲ್ಲಿ ಮುಂಡರು, ಕನ್ನರು, ಕೋಳಿಗಳು ಮೊದಲಾದ ಜನಾಂಗಗಳು ನೆಲೆಸಿದ್ದವು. ಮುಂಡಾಜೆ, ಮುಂಡ್ಕೂರು, ಪೆರುಮುಂಡ ಮೊದಲಾದ ಊರುಗಳಲ್ಲಿ ಮುಂಡ ಜನಾಂಗ ನೆಲೆಸಿದ್ದರು. ಕಂದ್ರಪ್ಪಾಡಿ, ಕನ್ಯಾಡಿ, ಕನ್ಯಾರು, ಕಣಿಯೂರು ಮೊದಲಾದ ಊರುಗಳಿಗೆ ಅಲ್ಲಿ ನೆಲೆಸಿದ್ದ ಕನ್ನ ಎಂಬ ಜನಾಂಗ ಕಾರಣ. ಕೋಳಿ ಜನಾಂಗದವರು ಕೋಳ್ಯೂರು, ಕೊಲ್ಲೂರು, ಕೊಳ್ನಾಡು ಮೊದಲಾದ ಕಡೆ ನೆಲೆಸಿದ್ದರು. ಇಂದು ಈ ಪಂಗಡಗಳಲ್ಲಿ ಕೆಲವು ಭಾರತದ ಇತರ ಕಡೆಗಳಲ್ಲಿ ನೆಲೆಸಿದ್ದರೂ ತುಳುನಾಡಿನಲ್ಲಿ ಮುಂಡಾಲರನ್ನು ಬಿಟ್ಟು ಕೋಳಿಗಳು, ಕನ್ನರ ಪಂಗಡದವರು ಕಂಡುಬರುವುದಿಲ್ಲ.
ಇಂದು ಅನೇಕ ಸ್ಥಳನಾಮೆಗಳು ಇಂದು ಮರುನಾಮಕರಣಗೊಳ್ಳುತ್ತಿವೆ. ಶಿವಾಜಿ ನಗರ, ವಿಜಯನಗರ….ಇಂತ ಹೆಸರುಗಳನ್ನು ಇಡಲಾಗುತ್ತದೆ. ಇದು ಇಂದಿನ ಬೆಳವಣಿಗೆ ಮಾತ್ರವಲ್ಲ. ಉದಾಹರಣೆಗೆ ಕಡುಮ ಧರ್ಮಸ್ಥಳವಾಯಿತು,ಪುರಾಲ್ ಅಥವಾ ಪೊಳಲಿ ಪುಳಿನಾಪುರವಾಗಿದೆ, ಬೆದ್ರ ಅಥವಾ ಮೂಡುಬಿದ್ರೆ ವೇಣುಪುರವಾಗಿದೆ, ಪೀಪಳ್ಳ ಅಶ್ವತ್ಥಪುರವಾಗಿದೆ, ಮಾಪ್ಳಡ್ಕ ಮಹಾಬಲಡ್ಕವಾಗಿದೆ. ಹೀಗಾಗಿ ಸ್ಥಳನಾಮೆಗಳ ಹಿಂದೆ ಅಡಗಿರುವ ತುಳುನಾಡಿನ ಜನರ ಚರಿತ್ರೆ ನಿಧಾನವಾಗಿ ನಾಶವಾಗುತ್ತಾ ಹೋಗುತ್ತಿದೆ.
ತುಳುನಾಡಿನ ಮೂಲ ನಿವಾಸಿಗಳ ಕುರಿತು ಗೋವಿಂದ ಪೈಯವರ ಬರಹಗಳನ್ನು ನಾವು ಗಮನಿಸಬೇಕು. ಹರಿವಂಶದ ವಿಷ್ಣುಪರ್ವದಲ್ಲಿ ಬರುವ ʼಮುದ್ಗರʼ ಜನಾಂಗವೇ ತುಳುನಾಡಿನ ಮುಗೇರ ಜನಾಂಗ ಎಂದು ಗೋವಿಂದ ಪೈ ಹೇಳುತ್ತಾರೆ. ಬೆಸ್ತರಾಗಿರುವ ಇವರು ನೆಲೆಸಿದ್ದ ಪ್ರದೇಶಗಳೇ ಇಂದಿನ ಮೊಗ್ರ, ಕೊಲ್ಲಮೊಗ್ರ, ಮುಗೇರಡ್ಕ ಮೊದಲಾದವು. ಮಾರ್ಕಂಡೇಯ ಪುರಾಣ ಹಾಗೂ ವರಹಮಿಹಿರನ ಬೃಹತ್ಸಂಹಿತೆಯಲ್ಲಿ ಉಲ್ಲೇಖಿಸಿರುವ ಶಾಂತಿಕವು ತುಳುನಾಡೇ ಆಗಿದೆ ಎಂದು ಗೋವಿಂದ ಪೈಗಳು ಹೇಳುತ್ತಾರೆ. ಎಂಟನೇ ಶತಮಾನದ ರಾಷ್ಟ್ರಕೂಟ ದೊರೆ ಮೂರನೇ ಗೋವಿಂದನ ಶಾಸನಗಳಲ್ಲಿ ಬರುವ ಆಳ್ವಖೇಡ, ಕ್ರಿ.ಶ ೬೦೨ರ ಮಹಾ ಕೂಟಸ್ತಂಭ ಲೇಖದಲ್ಲಿ ವೈಜಯಂತಿ (ಬನಾವಾಸಿ) ಜೊತೆಯಲ್ಲಿ ಉಲ್ಲೇಖವಾಗಿರುವ ಆಳುಕ- ಇವು ತುಳುನಾಡಿನ ಹೆಸರುಗಳೇ ಎಂದು ಗೋವಿಂದ ಪೈ ಹೇಳುತ್ತಾರೆ.
ತುಳುವ ಸಂಸ್ಕೃತಿಯನ್ನು ಭಿನ್ನ ಮೂಲಸಮುದಾಯಗಳು ಹೇಗೆ ರೂಪಿಸಿದೆಯೋ ಆರಂಭದಲ್ಲಿ ಬೌದ್ಧ ಧರ್ಮ ಕೂಡ ತುಳುವ ಸಂಸ್ಕೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕದ್ರಿಯ ಮಂಜುನಾಥ ದೇವಾಲಯ, ಉಡುಪಿಯ ಕಾಪು ಸಮೀಪದ ಮಾಲೂರಿನ ಬಾರ್ಯ ಮುಂತಾದವು ಒಂದು ಕಾಲದ ಬೌದ್ಧ ಕೇಂದ್ರಗಳು. ಇಲ್ಲಿ ನಾವು ಬುದ್ದನ ವಿಗ್ರಹಗಳನ್ನು ಕಾಣಬಹುದು. ತುಳುವರು ಹೆಣವನ್ನು ಸುಟ್ಟ ನಂತರ ಕಟ್ಟುವ ʼದೂಪೆʼ ಕೂಡ ಬೌದ್ಧರ ಸ್ತೂಪದ ಕಲ್ಪನೆ. ಒಂದು ಕಾಲದಲ್ಲಿ ಉಚ್ಚ್ರಾಯವಾಗಿದ್ದ ಬೌದ್ಧ ಧರ್ಮ ಮಧ್ಯಕಾಲೀನ ತುಳುನಾಡಿನಲ್ಲಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ನಾಥ ಮೊದಲಾದ ತಾಂತ್ರಿಕ ಪಂಥಗಳೂ, ವೈದಿಕ ಧರ್ಮವೂ ಪ್ರವರ್ಧಮಾನಕ್ಕೆ ಬಂತು.
ಕದ್ರಿಯ ಮಂಜುನಾಥ ದೇವಾಲಯ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರ. ಅದೊಂದು ಲಿಂಗಾರಾಧನೆಯ ಶೈವಕ್ಷೇತ್ರವಾದರೂ ಶಿವನಿಗೆ ಮಂಜುನಾಥ ಎಂಬ ಹೆಸರು ಯಾವುದೇ ಪ್ರಾಚೀನ ದಾಖಲೆಗಳಲ್ಲಿ ಇಲ್ಲ. ಗೋವಿಂದ ಪೈಗಳು ಪ್ರಾಚೀನ ಶಿವಸಹಸ್ರನಾಮದಲ್ಲೂ ಇಲ್ಲವೆನ್ನುತ್ತಾರೆ. ಕದಿರೆಯ ಮಂಜುನಾಥನೊಬ್ಬನೇ ಅಖಿಲಭಾರತದಾದ್ಯಂತ ಇರುವ ಏಕೈಕ ಮಂಜುನಾಥನ ಲಿಂಗ. ಧರ್ಮಸ್ಥಳಕ್ಕೆ ದೇವರನ್ನು ಇಲ್ಲಿಂದಲೇ ಕೊಂಡುಹೋದದ್ದು ಎಂಬ ಐತಿಹ್ಯ ಇದೆ. ಕದ್ರಿ ಮಂಜುನಾಥೇಶ್ವರ ದೇವಾಲಯ ಭಾರತದ ಪ್ರಮುಖ ನಾಥ ಪೀಠ. ಕದ್ರಿ ಸೇರಿದಂತೆ ಕ್ರಿ.ಶ ಎಂಟನೇ ಶತಮಾನದ ವರೆಗೆ ವಜ್ರಾಯಾನದ ನೆಲೆಗಳು ಸುಮಾರು ಹತ್ತನೇ ಶತಮಾನದ ಕಾಲಕ್ಕೆ ನಾಥಪಂಥದ ನೆಲೆಗಳಾಗಿ ಬದಲಾದವು.
ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ನಾಸಿಕ್ ನ ತ್ರಯಂಬಕೇಶ್ವರದಿಂದ ಹೊರಡುವ ನಾಥ ಪಂಥದ ಯೋಗಿಗಳ ಝುಂಡಿ ಯಾತ್ರೆ ಸುಮಾರು 1750 ಕಿ. ಮೀ ಕ್ರಮಿಸಿ ಮಂಗಳೂರಿನ ಕದ್ರಿಯ ಕಾಲಭೈರವ ಯೋಗೇಶ್ವರ ಮಠಕ್ಕೆ ಬರುತ್ತದೆ. ಕುಂಭಮೇಳದ ಸಂದರ್ಭದಲ್ಲಿ ಹೊರಡುವ ಈ ಯಾತ್ರೆ ತ್ರಯಂಬಕೇಶ್ವರದಿಂದ ಹೊರಟು ಕದ್ರಿ ತಲುಪುವ ತನಕ 93 ಸ್ಥಳಗಳಲ್ಲಿ ಮೊಕ್ಕಾಂ ಹೂಡುತ್ತದೆ. ಅಲ್ಲಿರುವ ಎಲ್ಲಾ ನಾಥ ಪೀಠಗಳಿಗೆ ಹೊಸ ಪೀಠಾಧಿಪತಿಯನ್ನು ನೇಮಿಸುತ್ತಾರೆ. ಕರ್ನಾಟದಲ್ಲಿ ಚಂದ್ರಗುತ್ತಿ ಮಠಕ್ಕೆ ಪೀಠಾಧಿಪತಿಯನ್ನು ನೇಮಿಸಿ ಕದ್ರಿಯಲ್ಲಿ ಕೊನೆಯಾಗುತ್ತದೆ. ಕದ್ರಿಯಲ್ಲಿಯೇ ವಿಟ್ಲದ ನಾಥ ಮಠದ ಪೀಠಾಧಿಪತಿಯನ್ನು ನೇಮಿಸುತ್ತಾರೆ. ಕದ್ರಿಯ ಪೀಠಾಧಿಪತಿಯನ್ನು ರಾಜಾ ಅಥವಾ ಅರಸು (ಮಹಾರಾಜ್) ಎಂದು ಕರೆಯುತ್ತಾರೆ. ಹೀಗೆ ಇಡೀ ಭಾರತದ ಪ್ರಮುಖ ಶೈವ ಪಂಥದ ಐತಿಹಾಸಿಕ ಸಂಗತಿಯೊಂದು ತುಳುನಾಡಿನಲ್ಲಿ ಸಮಾಪನೆಗೊಳ್ಳುತ್ತದೆ.
ಶಿವನಿಗೆ ಮಂಜುನಾಥನೆಂಬ ಹೆಸರು ಬರಲು ಕಾರಣವನ್ನು ಗೋವಿಂದ ಪೈಗಳು ವಿಸ್ತೃತವಾಗಿ ಹೀಗೆ ರ‍್ಚಿಸುತ್ತರೆ. ಮಂಜುಶ್ರೀ ಅಥವಾ ಮಂಜುಘೋಷನೆಂಬ ಬೋಧಿಸತ್ವನಿಗೆ ಮಂಜುನಾಥ ಎಂಬ ಹೆಸರು ಇದ್ದದ್ದು ಮಹಾಯನದ ಕೃತಿಗಳಿಂದ ತಿಳಿದು ಬರುತ್ತದೆ. ನೇಪಾಳದ ಬೌದ್ಧಕವಿ ಅಮೃತಾನಂದನ ಕಲ್ಯಾಣಪಂಚವಿಂಶತಿಕಾ ಸ್ತೋತ್ರದ ಸ್ರಗ್ಧರೆಯೊಂದರಲ್ಲಿ…….ಸ್ವಸ್ತೀಭೂತಾಬ್ಜಸಂಸ್ಥಂ ಸಕಲ ಜಿನವರಂ ಪ್ರಾಭಜನ್ ಮಂಜುನಾಥಃ……ಎಂದಿದೆ. ಮಂಜುನಾಥವೆಂಬುದು ಕದ್ರಿಯ ಗುರು ಮಚ್ಚೇಂದ್ರನಾಥನಿಂದಲೂ ಬಂದಿರಬಹುದು. ಮಚ್ಚಿನಾಥವೇ ಮಂಜುನಾಥವಾಗಿರಹುದೆಂಬ ರ‍್ಚೆಯೂ ಇದೆ.
ದೇವಾಲಯದ ಗರ್ಭಗೃಹದ ಹೊರ ಅಂತಃಪ್ರಾಕಾರದಲ್ಲಿ ಅತ್ಯಂತ ಸುಂದರವಾದ ಲೋಕೇಶ್ವರನ ಕಂಚಿನ ವಿಗ್ರಹವಿದೆ. ಇದನ್ನು ರ‍್ಚಕರು ತ್ರಿಲೋಕೇಶ್ವರನೆಂದು ಕರೆಯುತ್ತಾರೆ. ಅಡಿಯಿಂದ ಮುಡಿಯವರೆಗೆ ೧೫೦ ಸೆಂ.ಮೀ. ಇರುವ ಈ ಪ್ರತಿಮೆ ಮೂರು ಮುಖಗಳನ್ನೂ ಆರು ಕೈಗಳನ್ನೂ ಹೊಂದಿದೆ. ಕೈಗಳಲ್ಲಿ ಮಣಿ, ಪದ್ಮಾದಿಗಳಿವೆ. ಪ್ರಭಾವಳಿಯ ನಡುವೆ ಮತ್ತು ಶಿರೋಭಾಗದಲ್ಲಿ ಧ್ಯಾನ ಮಾಡುತ್ತಿರುವ ಬುದ್ಧನಿದ್ದಾನೆ. ಕಣ್ಣುಗಳು ಬಹಳ ಹೊಳಪಿನವು. ಇದರ ಪೀಠದ ಮೇಲೆ ಗ್ರಂಥಲಿಪಿಯಲ್ಲಿರುವ ಒಂಬತ್ತು ಸಾಲುಗಳ ಸಂಸ್ಕೃತ ಶಾಸನವಿದೆ. ಮಂಗಳೂರನ್ನು ಆಳುತ್ತಿದ್ದ ಶ್ರೀಕುಂದರ‍್ಮಾ ಗುಣವಾನಾಳುಪೇಂದ್ರನು ಈ ಸುಮನೋಹರವಾದ ಕದರಿಕಾ ವಿಹಾರದಲ್ಲಿ ಕ್ರಿ.ಶ.೯೬೮ರಲ್ಲಿ ಲೋಕೇಶ್ವರನ ಪ್ರತಿಮೆಯನ್ನು ಸ್ಥಾಪಿಸಿದ.
ಲೋಕೇಶ್ವರಸ್ಯ ದೇವಸ್ಯ ಪ್ರತಿಷ್ಠಾಮಕರೋತ್ಪ್ರಭುಃ
ಶ್ರೀಮತ್ ಕದರಿಕಾ ನಾಮ್ನಿ ವಿಹಾರೇ ಸುಮನೋಹರೇ…..
ಆಲೂಪ ಅರಸ ಕುಂದವರ್ಮ ಶೈವಮತದವನು ಎಂಬುದು ಸ್ಪಷ್ಟ. ಇದೇ ಶಾಸನದಲ್ಲಿ”ಪಾದಾರವಿಂದ ಭ್ರಮರೋ ಬಾಲಚಂದ್ರ ಶೀಖಾಮಣೇಃ” ಎಂಬುದು ಶಿವನನ್ನು ಉದ್ದೇಶಿಸಿಯೇ ಹೇಳಲಾಗಿದೆ. ವಿಹಾರ ಎಂಬುದು ಶೈವ ದೇವಾಲಯಕ್ಕೆ ಹೆಸರಲ್ಲ, ಅದು ಬೌದ್ಧಕೇಂದ್ರವೇ. ಶ್ರೀಲಂಕಾದಲ್ಲಿ ಅವಲೋಕಿತೇಶ್ವರನನ್ನು ಲೋಕೇಶ್ವರನಾಥನೆಂದೇ ಕರೆಯುತ್ತಾರೆ. ಲೋಕೇಶ್ವರನ ಪ್ರತಿಮೆಯಲ್ಲಿ ಶಿವ ಸಂಬಂಧದ ಲಕ್ಷಣಗಳಾದ ಸರ್ಪ, ಅರ್ಧಚಂದ್ರ ಇತ್ಯಾದಿಗಳಿಲ್ಲ. ಅದು ಅವಲೋಕಿತೇಶ್ವರನ ಪ್ರತಿಮೆಯೇ.
ಅಂತಃ ಪೌಳಿಯ ಎಡಭಾಗದಲ್ಲಿ ಪರ‍್ವಾಭೀಮುಖವಾಗಿರುವ ನಾಲ್ಕು ಕೈಗಳ ಮಂಜುಶ್ರೀ ಬೋಧಿಸತ್ವನ ಪ್ರತಿಮೆಯಿದೆ. ಅದಕ್ಕೆ ಎದುರಾಗಿ ಬಹಳ ಸುಂದರವಾದ ಸಾಕ್ಷಾತ್ ಬುದ್ಧನ ಪ್ರತಿಮೆಯಿದೆ. ಮಂಜುಳ ಅಥವಾ ಮಂಜು ಎಂಬ ಪದಕ್ಕೆ ಸಂಸ್ಕೃತದಲ್ಲಿ ಮನೋಹರವೆಂಬ ಅರ್ಥವಿದೆ.
ಮಂಜುಶ್ರೀ ಮೂಲಕಲ್ಪ ಮತ್ತು ಗುಹ್ಯಸಮಾಜತಂತ್ರಗಳಂತಹ ಬೌದ್ಧ ತಾಂತ್ರಿಕ ಕೃತಿಗಳಲ್ಲಿ ಮಂಜುಶ್ರೀಯ ವಿವರಣೆಗಳಿವೆ. ಎಸ್ ಶ್ರೀಕಂಠ ಶಾಸ್ತ್ರಿಗಳು ಚೀನೀ ಭಾಷೆಯ ಮಾನ್-ಚು ಎಂಬುದೇ ಮಂಜುವಾಗಿದೆ ಎನ್ನತ್ತಾರೆ. ಈ ಮಂಜುಘೋಷನ ಪ್ರತಿಮೆಯನ್ನು ಬ್ರಹ್ಮನೆಂದು ಮರುನಾಮಕರಣ ಮಾಡಿದರೂ ಇದು ನಿಖರವಾಗಿ ಬ್ರಹ್ಮನಲ್ಲ. ಬುದ್ಧನನ್ನು ವ್ಯಾಸನೆಂದು ಕರೆಯಲಾಗುತ್ತದೆ.
ಈ ದೇವಾಲಯದ ಒಳಪೌಳಿಯ ಹೊರಗೆ ಆಯಕವನ್ನು ಹೋಲುವ ಶಿಲಾಸ್ಥಂಭವಿದೆ.ಅದರ ನಾಲ್ಕು ಬದಿಗಳಲ್ಲಿ ಧ್ಯಾನಸ್ಥ ಬುದ್ಧನ ವಿಗ್ರಹಗಳಿವೆ. ಶೈವ ದೇಗುಲಗಲಲ್ಲಿ ಬುದ್ಧನ ಕೆತ್ತನೆಗಳಿರುವ ಸಂಪ್ರದಾಯವಿಲ್ಲ. ಕದ್ರಿಯ ಗುಡ್ಡದಲ್ಲಿರುವ ಪಾಂಡವರ ಗುಹೆಗಳು ಬೌದ್ಧ ಅವಶೇಷಗಳೇ. ಈ ಗುಡ್ಡೆಯಲ್ಲಿ ಬೋಧಿಸತ್ವನ ಪಟ್ಟಿಕೆಯೊಂದು ದೊರೆತಿದೆ.(ಡಾ,ಗುರುರಾಜ ಭಟ್ಟ:೧೯೭೫,೨೯೮) ಕದ್ರಿಯ ಕೆರೆಯಲ್ಲಿ ಮತ್ತು ಮೇಲ್ಬಾಗದ ಶಿವಲಿಂಗದ ಹಿಂದಿನ ಕಸದ ರಾಶಿಯಲ್ಲಿ ರುಂಡವಿಲ್ಲದ ಬುದ್ಧನ ಕೆತ್ತನೆಗಳಿವೆ.
ಬೌದ್ಧ ಧರ್ಮ ಕದರಿಯಲ್ಲಿ ನೆಲೆಸಿತ್ತಾದರೂ ಕ್ರಿ.ಶ.೭-೮ರಲ್ಲಿ ತುಳುನಾಡಿನಿಂದ ತೀರ ಲುಪ್ತವಾಯಿತು. ಆದ ಕಾರಣ ಕ್ರಿ.ಶ.೧೧ರಲ್ಲಿ ಪ್ರತಿಷ್ಠಿತವಾದ ಲೋಕೇಶ್ವರನ ವಿಗ್ರಹವೂ ಶಾಸನದಲ್ಲಿರುವ ಕದಿರೆಯ ವಿಹಾರವು ಖಾಸಾ ಬೌದ್ಧ ಮತದಿಂದಲ್ಲ ಉತ್ತರಭಾರತ ಹಿಂದೂ ಪಂಥದ ಪ್ರೇರಣೆಯಿಂದ ನಿರ್ಮಿಸಲ್ಪಟ್ಟಿರಬೇಕು. ಅದು ಕದಿರೆ ಗುಡ್ಡದಲ್ಲಿ ಮಠಮಾಡಿಕೊಂಡಿರುವ ಜೋಗಿಗಳೆಂಬ ಶೈವ ಧರ್ಮದ ನಾಥಪಂಥದವರು.(ಗೋವಿಂದ ಪೈ:೬೦೧) ಕದ್ರಿಯ ಮಂಜುನಾಥನ ಉಲ್ಲೇಖ ಮೊದಲಿಗೆ ಬರುವುದು ಕ್ರಿ.ಶ.೧೨೭೭-೧೨೯೨ರ ಬಲ್ಲ ಮಹಾದೇವಿಯ ಶಾಸನದಲ್ಲಿ. (ಡಾ.ಗುರುರಾಜ ಭಟ್ಟ:೧೯೭೫,೨೯೫)
ಲೋಕೇಶ್ವರನು ಕದರಿಯ ಪ್ರಧಾನ ದೇವತೆಯಾಗಿದ್ದು ೧೨-೧೩ ಶತಮಾನದಲ್ಲಿ ಸಂಪರ‍್ಣ ಶೈವಾಲಯವಾಗಿ ಬದಲಾಗಿರಬೇಕು. ನಾಥಪಂಥವೂ ಬೌದ್ಧರ‍್ಮದ ಮಹಾಯಾನ ಶಾಖೆಯ ವಜ್ರಾಯಾನದಿಂದ ಹುಟ್ಟಿಕೊಂಡ ಪಂಥ. ನಾಥಸಾಹಿತ್ಯಗಳಲ್ಲಿ ಬೌದ್ಧ ನಿಂದನೆಗಳಿದ್ದರೂ ಚೌರಾಸಿ ಬೌದ್ಧ ಸಿದ್ದರಲ್ಲಿ ಮತ್ಸ್ಯೇಂದ್ರ ಮತ್ತು ಗೋರಖರೂ ಇದ್ದಾರೆ. ಇವರ ಶಿಷ್ಯೆ ಕೇರಳದ ಪರಿಮಳೆಯು ಇವರನ್ನು ಅನುಸರಿಸಿ ಮಂಗಳೂರಿಗೆ ಬರುತ್ತಾಳೆ. ಇವಳಿಗೆ ಮಂಗಳಾ ಎಂಬ ಹೆಸರಿಟ್ಟರು. ಬೋಳಾರದಲ್ಲಿ ಮಂಗಳದೇವಿ ನೆಲೆಯಗುತ್ತಾಳೆ. ಆದರೆ ಇದೊಂದು ಸ್ತ್ರೀಯಂತೆ ಭಾಸವಾಗುವ ಕರಿಕಲ್ಲೇ ಹೊರತು ಶಿಲ್ಪವಲ್ಲ. ಮಂಗಳಾದೇವಿಯನ್ನು ತಾರಾಭಗವತಿ ಎಂದಿದ್ದಾರೆ. ಕದರಿಯಲ್ಲಿ ಲೋಕೇಶ್ವರನ ಆರಾಧನೆ ನಡೆಯುತ್ತಿದ್ದ ಸಮಯದಲ್ಲಿ ಇಲ್ಲಿ ತಾರಾದೇವಿಯ ಕ್ಷೇತ್ರ ಇದ್ದಿರಬೇಕು. ಕೇರಳದಲ್ಲಿ ಬುದ್ಧನ ವಿಗ್ರಹಗಳು ದೊರೆತಲ್ಲೆಲ್ಲಾ ಭಗವತಿ ಸಾನಿಧ್ಯಗಳಿವೆ. ಅಲ್ಲದೆ ಪೊಳಲಿಯ ರಾಜರಾಜೇಶ್ವರಿಗೆ ಹೊಳಲಭಟ್ಟಾರಕಿ ಎಂಬ ಬೌದ್ಧಮೂಲದ ಅಭಿದಾನವಿದೆ(ಸಾಲೆತ್ತೂರು:೧೯೩೬,೩೭೮&೩೮೧)
ಸನ್ನತ್ತಿಯಲ್ಲಿನ ತಾರಾಗುಡಿಯು ಈಗ ಚಂದ್ರಲಾಂಬಾ ಗುಡಿಯಾಗಿದೆ. ಈಕೆಗೆ ಹಿಂಗುಳಾದೇವಿ ಎಂಬ ಹೆಸರಿದೆ. ತಾರಾ ಟಿಬೇಟಿನಿಂದ ಬಂದ ಬೌದ್ಧದೇವತೆ. ಕಾಳಿ, ತಾಂತ್ರಿಕ ಸರಸ್ವತಿ ಕೂಡ ಮೂಲತಃ ಬೌದ್ಧದೇವತೆಗಳು ಎಂಬ ಅಭಿಪ್ರಾಯವಿದೆ.(ಡಾ.ಚಿದಾನಂದ ಮೂರ್ತಿ:೧೯೬೬,೧೩೬)
ಪಾಕಿಸ್ತಾನದ ಬಲೂಚಿಸ್ತಾನದ ಹಿಂಗ್ಲಜಾ ಒಂದು ಕಾಲದ ಪ್ರಸಿದ್ಧ ವಜ್ರಾಯಾನದ ಬೌದ್ಧ ನೆಲೆ. ಹಿಂಗ್ಲಜಾ ಒಂದು ಶಕ್ತಿಪೀಠ. ಬಾರ್ಕೂರಿನಲ್ಲೂ ಹಿಂಗಳಾ ಗುಡಿಯಿದ್ದು ಅದು ಶೈವ ದೇವತೆಯ ಆರಾಧನೆಯ ಕೇಂದ್ರವಾಗಿದೆ. ಮಂಗಳೂರಿನ ಬೋಳಾರಿನಲ್ಲಿರುವ ಮಂಗಳದೇವಿಯೂ ಹಿಂಗಳೆಯೇ ಇರಬೇಕು. ಈಕೆ ಗುರು ಗೋರಖನಾಥ ಮತ್ತು ಮಚ್ಚೇಂದ್ರನಾಥನನ್ನು ಹಿಂಬಾಲಿಸಿ ಕೇರಳದಿಂದ ಬಂದ ದೇವತೆ.
ಮುಂದುವರಿಯುತ್ತದೆ…..
ಪರಾಮರ್ಶಿತ ಗ್ರಂಥಗಳು
- ಪ್ರೊ. ಲಕ್ಷ್ಮಣ್ ತೆಲಗಾವಿ 2004, ಮೌರ್ಯ ಮತ್ತು ಶಾತವಾಹನ ಯುಗ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
- ಡಾ. ತಾಳ್ತಾಜೆ ವಸಂತಕುಮಾರ2015, ಬೌದ್ಧಾಯನ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು
- ಡಾ. ಚಿದಾನಂದ ಮೂರ್ತಿ 1966, ಕನ್ನಡ ಶಾಸನಗಳ ಸಾಂಸ್ಕøತಿಕ ಅಧ್ಯಯನ, ಮೈಸೂರು
- ಡಾ. ಚಿದಾನಂದ ಮೂರ್ತಿ 1970, ಸಂಶೋಧನ ತರಂಗ, ಬೆಂಗಳೂರು
- ಡಾ. ಗುರುರಾಜ ಭಟ್ 1963, ತುಳುನಾಡು, ಉಡುಪಿ
- ಡಾ. ಪುರುಷೋತ್ತಮ ಬಿಳಿಮಲೆ, ಕೊರಗರು ಸಮಕಾಲೀನ ಸ್ಪಂದನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
- ರಮೇಶ್ ಕೆ ವಿ 1969, ತುಳುನಾಡಿನ ಇತಿಹಾಸ, ಮೈಸೂರು
- ಧರ್ಮಾನಂದ ಕೋಸಂಬಿ 1998, ಪ್ರಾಚೀನ ಭಾರತದ ಚರಿತ್ರೆ (ಕನ್ನಡ:ಎಚ್.ಎಸ್.ಶ್ರೀಮತಿ), ಬೆಳ್ಳಿಚುಕ್ಕಿ ಬುಕ್ ಟ್ರಸ್ಟ್, ಬೆಂಗಳೂರು
- ಗಣಪತಿ ರಾವ್ ಐಗಳ್ 1923, ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ, ಮಂಗಳೂರು
- 10 ಕಮಲಾ ಹಂಪನಾ 2011, ಮಹಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರು, ಸ್ವಪ್ನ ಬುಕ್ ಹೌಸ್, ಬೆಂಗಳೂರು
- ಗೋವಿಂದ ಪೈ ಸಂಶೋಧನಾ ಸಂಪುಟ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ
- ಪೊಲಿ: ಪ್ರ.ಸಂ. ಶ್ರೀ ಎಂ ಮುಕುಂದ ಪ್ರಭು, ಪ್ರ. ಜಿಲ್ಲಾಧಿಕಾರಿ, ದ.ಕ ಜಿಲ್ಲೆ ಮಂಗಳೂರು
- ಅಮೃತ ಸೋಮೇಶ್ವರ 1983, ಕೊರಗರು, ಬೆಂಗಳೂರು
14 ತುಳುನಾಡಿನ ಶಾಸನಗಳು, ಸಂ. ಕೆ ವಿ ರಮೇಶ್ ಮತ್ತು ಶರ್ಮ ಎಂ ಜೆ - Dr. Paduru Gururaja Bhat 2014, Studies in Tuluva History and Culture, Dr. Paduru Gururaja Bhat Memorial Trust, Udupi
16. B A Saletore 1936, History of Tuluva, Poona
17. D N Jha 2015 (3rd edition), Ancient India: An Introductory Outline, Manohar publishers & Distributors, New Delhi
18. Amara-kosha 1873, Luis Rice, Mysore Government Press, Bangalore
19. Romila Thapar 1998, Ashoka and the Mauryas, Oxford University Press, USA
20. Paduru Gururaja Bhat 1969, Antiquities of South Kanara