ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನಲ್ಲಿ ಸಂಭವಿಸಿದ ಭೀಕರ ಖಾಸಗಿ ಬಸ್ ಅಪೌಘಾತದ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಬಸ್ಸಿನ ಲಗೇಜ್ ಬಾಕ್ಸ್‌ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ತೈಲ ಡಬ್ಬಿಗಳು (Oil Boxes) ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿ ಆರು ಮಂದಿ ಪ್ರಯಾಣಿಕರು ಸಜೀವ ದಹನವಾಗಲು ಕಾರಣವಾಗಿವೆ ಎಂದು ಶಂಕಿಸಲಾಗಿದೆ.
ಗೋಕರ್ಣಕ್ಕೆ ತೆರಳುತ್ತಿದ್ದ ಈ ಬಸ್ಸಿಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಹತ್ತು ನಿಮಿಷಗಳ ನಂತರ ಬೆಂಕಿ ಕಾಣಿಸಿಕೊಂಡಿತ್ತಾದರೂ, ಬಸ್ಸಿನಲ್ಲಿದ್ದ ದಹನಕಾರಿ ತೈಲ ಪದಾರ್ಥಗಳಿಂದಾಗಿ ಜ್ವಾಲೆಯು ಕ್ಷಣಾರ್ಧದಲ್ಲಿ ಇಡೀ ಬಸ್ಸನ್ನು ಆವರಿಸಿಕೊಂಡಿತು, ಇದು ಅಗ್ನಿಶಾಮಕ ದಳದವರಿಗೂ ಬೆಂಕಿ ನಂದಿಸಲು ಹರಸಾಹಸ ಪಡುವಂತೆ ಮಾಡಿತು.
ಈ ಮಧ್ಯೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾವೇರಿ ಮೂಲದ ಬಸ್ ಚಾಲಕ ಮೊಹಮ್ಮದ್ ರಫೀಕ್ ಅವರು ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದರಿಂದ ಒಟ್ಟು ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, ಸಜೀವವಾಗಿ ದಹನಗೊಂಡ ಐವರ ಗುರುತು ಪತ್ತೆ ಹಚ್ಚಲು ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ.
ಸದ್ಯ ಲಗೇಜ್ ಬಾಕ್ಸ್‌ನಲ್ಲಿ ಇಂತಹ ಅಪಾಯಕಾರಿ ವಸ್ತುಗಳನ್ನು ಸಾಗಿಸಲು ಸೀಬರ್ಡ್ ಟ್ರಾವೆಲ್ಸ್‌ಗೆ ಅನುಮತಿ ಇತ್ತೇ ಎಂಬ ಬಗ್ಗೆ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದಾರೆ.
