ಚೆನ್ನೈ: ಹದಿನಾರೂ ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು (Social Media) ಬಳಸದಂತೆ ನಿರ್ಬಂಧ ಹೇರಿ ಆಸ್ಟ್ರೇಲಿಯಾ ಸರ್ಕಾರ ಜಾರಿಗೆ ತಂದಿರುವ ಮಾದರಿಯಲ್ಲೇ ಭಾರತದಲ್ಲೂ ಕಠಿಣ ಕಾನೂನು ತರುವ ಬಗ್ಗೆ ಯೋಚಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ವಿಷಯಗಳು (Pornographic Content) ಸುಲಭವಾಗಿ ಲಭ್ಯವಾಗುತ್ತಿದ್ದು, ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ವೇಳೆ ಹೈಕೋರ್ಟ್‌ನ ಮಧುರೈ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆಸ್ಟ್ರೇಲಿಯಾ ಸರ್ಕಾರವು ಡಿಸೆಂಬರ್ 10 ರಂದು ಇಂತಹ ಕ್ರಾಂತಿಕಾರಿ ಕಾನೂನನ್ನು ತಂದಿರುವುದನ್ನು ಉಲ್ಲೇಖಿಸಿದ ನ್ಯಾಯಾಲಯ, ನಮ್ಮ ದೇಶದಲ್ಲೂ ಅಂತಹ ವ್ಯವಸ್ಥೆ ಜಾರಿಗೆ ಬರುವವರೆಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ವಿಶೇಷ ಅಭಿಯಾನಗಳನ್ನು ನಡೆಸಬೇಕು ಎಂದು ಆದೇಶಿಸಿದೆ.
ಮೊಬೈಲ್ ಫೋನ್‌ಗಳಲ್ಲಿ ‘ಪೇರೆಂಟಲ್ ವಿಂಡೋಸ್’ (Parental Windows) ನಂತಹ ಫಿಲ್ಟರ್‌ಗಳನ್ನು ಅಳವಡಿಸುವ ಮೂಲಕ ಮಕ್ಕಳಿಗೆ ಅನುಚಿತ ವಿಷಯಗಳು ತಲುಪದಂತೆ ನಿಯಂತ್ರಿಸಬಹುದು ಎಂದು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಿದ್ದಾರೆ.
