Home ಇನ್ನಷ್ಟು ಕೋರ್ಟು - ಕಾನೂನು ಸುಪ್ರೀಂ ಕೋರ್ಟ್ | ಗರ್ಭಧಾರಣೆಯನ್ನು ಮುಂದುವರಿಸುವಂತೆ ಒತ್ತಾಯಿಸುವಂತಿಲ್ಲ; ಮಗುವನ್ನು ಪಡೆಯಬೇಕೋ, ಬೇಡವೋ ಎಂದು ನಿರ್ಧರಿಸುವ ಹಕ್ಕು...

ಸುಪ್ರೀಂ ಕೋರ್ಟ್ | ಗರ್ಭಧಾರಣೆಯನ್ನು ಮುಂದುವರಿಸುವಂತೆ ಒತ್ತಾಯಿಸುವಂತಿಲ್ಲ; ಮಗುವನ್ನು ಪಡೆಯಬೇಕೋ, ಬೇಡವೋ ಎಂದು ನಿರ್ಧರಿಸುವ ಹಕ್ಕು ಮಹಿಳೆಯದು

0

ದೆಹಲಿ: ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆಯನ್ನು ಮುಂದುವರಿಸುವಂತೆ ಆಕೆಯನ್ನು ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

30 ವಾರಗಳ ಗರ್ಭವನ್ನು ಅಂತ್ಯಗೊಳಿಸಲು ಬಾಲಕಿಯೊಬ್ಬರಿಗೆ ಕೋರ್ಟ್ ಅನುಮತಿ ನೀಡಿದೆ. ಆಕೆಯ ಗರ್ಭಪಾತಕ್ಕೆ (Medical Termination of Pregnancy – MTP) ಅನುಮತಿ ನಿರಾಕರಿಸಿ, ಆಕೆ ಗರ್ಭಧಾರಣೆಯನ್ನು ಮುಂದುವರಿಸಬೇಕು ಮತ್ತು ಹೆರಿಗೆಯ ನಂತರ ಮಗುವನ್ನು ದತ್ತು ನೀಡಬಹುದು ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ರದ್ದುಗೊಳಿಸಿದೆ. ಮಹಿಳೆಯ ಇಷ್ಟಕ್ಕೆ ವಿರುದ್ಧವಾಗಿ ಗರ್ಭಧಾರಣೆಯನ್ನು ಪೂರ್ಣಗೊಳಿಸುವಂತೆ ಯಾವುದೇ ನ್ಯಾಯಾಲಯ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಮಗುವನ್ನು ಪಡೆಯಬೇಕೋ, ಬೇಡವೋ ಎಂದು ನಿರ್ಧರಿಸುವ ಹಕ್ಕು ಮಹಿಳೆಯರಿಗೆ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಆಕೆಯ ಇಚ್ಛೆಯಂತೆಯೇ..

ಅರ್ಜಿದಾರರಾದ ಬಾಲಕಿ 17ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದರು. ಈಗ ಅವರ ವಯಸ್ಸು 18 ವರ್ಷ 4 ತಿಂಗಳು. ಗರ್ಭಧಾರಣೆ 30 ವಾರಗಳನ್ನು ದಾಟಿದೆ. ಸ್ನೇಹಿತನೊಂದಿಗಿನ ಸಂಬಂಧದಿಂದ ಗರ್ಭಧಾರಣೆಯಾಗಿದ್ದು, ಅದನ್ನು ಮುಂದುವರಿಸುವುದು ಬಾಲಕಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ನೋವಿನ ಸಂಗತಿಯಾಗಿದೆ ಎಂದು ಕೋರ್ಟ್ ಹೇಳಿದೆ. ಗರ್ಭಪಾತಕ್ಕೆ ಅನುಮತಿ ನೀಡಿದರೆ ಬಾಲಕಿಯ ಪ್ರಾಣಕ್ಕೆ ಅಪಾಯವಿದೆ ಎಂದು ವೈದ್ಯಕೀಯ ಮಂಡಳಿಯ ವರದಿಯಲ್ಲಿ ಎಲ್ಲಿಯೂ ಸೂಚಿಸಿಲ್ಲ ಎಂದು ಕೋರ್ಟ್ ತಿಳಿಸಿದೆ.

ಆದರೆ, ಮಗುವಿಗೆ ಜನ್ಮ ನೀಡಿ ದತ್ತು ನೀಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿತ್ತು. ಈ ಬಗ್ಗೆ ವಾದಿಸಿದ ಬಾಲಕಿಯ ಪರ ವಕೀಲರು, ವಿವಾಹಪೂರ್ವ ಗರ್ಭಧಾರಣೆಯಿಂದ ಉಂಟಾಗುವ ಸಾಮಾಜಿಕ ಕಳಂಕದ ಕಾರಣದಿಂದ ಗರ್ಭಧಾರಣೆಯನ್ನು ಮುಂದುವರಿಸುವಂತೆ ಒತ್ತಾಯಿಸುವುದು ತೀವ್ರ ಮಾನಸಿಕ ಆಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ಉಭಯ ಪಕ್ಷಗಳ ವಾದಗಳನ್ನು ಆಲಿಸಿದ ಪೀಠವು, ಅನೈತಿಕ ಸಂಬಂಧದಿಂದ ಉಂಟಾದ ಗರ್ಭಧಾರಣೆಯನ್ನು ಮುಂದುವರಿಸುವುದು ಬಾಲಕಿಯ ಇಷ್ಟಾನಿಷ್ಟಗಳಿಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿತು. ನ್ಯಾಯಮೂರ್ತಿ ನಾಗರತ್ನ ಅವರು ತೀರ್ಪು ನೀಡುತ್ತಾ, “ನಾವು ಯಾರ ಹಿತಾಸಕ್ತಿಗಳನ್ನು ಪರಿಗಣಿಸಬೇಕು? ಗರ್ಭದಲ್ಲಿರುವ ಶಿಶುವಿನ ಹಿತಾಸಕ್ತಿಯೇ? ಅಥವಾ ಆ ಶಿಶುವಿಗೆ ಜನ್ಮ ನೀಡುತ್ತಿರುವ ತಾಯಿಯ ಹಿತಾಸಕ್ತಿಯೇ?” ಎಂದು ಪ್ರಶ್ನಿಸಿದರು.

ಏಳು ವರ್ಷದೊಳಗಿನ ಜೈಲು ಶಿಕ್ಷೆಯಿರುವ ಅಪರಾಧಗಳಿಗೆ ಮುನ್ಸೂಚನೆ (ನೋಟಿಸ್) ಕಡ್ಡಾಯ

ಏಳು ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಮುನ್ಸೂಚನೆ (Notice) ನೀಡುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

ಬಂಧಿಸುವ ಮೊದಲು ಆರೋಪಿಗಳಿಗೆ ಬಿಎನ್‌ಎಸ್‌ಎಸ್ (BNSS) ನ ಸೆಕ್ಷನ್ 35(3) ರ ಅಡಿಯಲ್ಲಿ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ನೋಟಿಸ್ ಜಾರಿ ಮಾಡಬೇಕು ಎಂದು ಸ್ಪಷ್ಟಪಡಿಸಿದೆ. ಬಂಧಿಸುವ ಅಧಿಕಾರವು ತನಿಖೆಗೆ ಸಹಾಯ ಮಾಡಲು ಪೊಲೀಸರಿಗೆ ನೀಡಲಾದ ಶಾಸನಬದ್ಧ ವಿವೇಚನಾ ಅಧಿಕಾರವಾಗಿದೆಯೇ ಹೊರತು, ಅದನ್ನು ಕಡ್ಡಾಯ ಎಂದು ಪರಿಗಣಿಸಬಾರದು ಎಂದು ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಸ್ಪಷ್ಟಪಡಿಸಿದೆ.

ಬಿಎನ್‌ಎಸ್‌ಎಸ್‌ನ ಸೆಕ್ಷನ್ 35(1)(ಬಿ) ಅಡಿಯಲ್ಲಿ ಉಲ್ಲೇಖಿಸಲಾದ ಷರತ್ತುಗಳ ಪ್ರಕಾರ ವ್ಯಕ್ತಿಯನ್ನು ಬಂಧಿಸಲು ಅವಕಾಶವಿದ್ದರೂ, ಅದು ಸಂಪೂರ್ಣವಾಗಿ ಅನಿವಾರ್ಯವಾಗಿದ್ದರೆ ಹೊರತು ಬಂಧಿಸಬಾರದು ಎಂದು ಪೀಠ ತಿಳಿಸಿದೆ. ವಿಶೇಷವಾಗಿ ಏಳು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ, ಬಿಎನ್‌ಎಸ್‌ಎಸ್ ಸೆಕ್ಷನ್ 35(3) ರ ಅಡಿಯಲ್ಲಿ ನೋಟಿಸ್ ನೀಡುವುದು ಎಲ್ಲಾ ಪ್ರಕರಣಗಳಲ್ಲಿ ಬಂಧನಕ್ಕೆ ಮುಂಚಿತವಾಗಿ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಿದ ನಂತರ ಕೋರ್ಟ್ ಈ ತೀರ್ಪು ನೀಡಿದೆ.

You cannot copy content of this page

Exit mobile version