Home ಬೆಂಗಳೂರು ಅಕ್ರಮ ವಲಸಿಗರ ವಿರುದ್ಧದ ಕ್ರಮದ ವರದಿ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಅಕ್ರಮ ವಲಸಿಗರ ವಿರುದ್ಧದ ಕ್ರಮದ ವರದಿ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

0

ಬೆಂಗಳೂರು: ಬೆಂಗಳೂರು ನಗರದಲ್ಲಿರುವ ಅಕ್ರಮ ವಲಸಿಗರನ್ನು ತೆರವುಗೊಳಿಸಲು ಕೈಗೊಂಡಿರುವ ಕ್ರಮಗಳ ವಿವರಗಳನ್ನು ಒದಗಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸೋಲದೇವನಹಳ್ಳಿ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎರಡು ಪ್ರಕರಣಗಳನ್ನು ಪ್ರಶ್ನಿಸಿ ಹೋರಾಟಗಾರ ಪುನೀತ್ ಕೆರೆಹಳ್ಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ನಿರ್ದೇಶನ ನೀಡಿದರು.

ರಾಜ್ಯ ಡಿಜಿ ಮತ್ತು ಐಜಿಪಿ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಪುನೀತ್ ಮತ್ತು ಅವರ ಸಹಚರರು ಉತ್ತರ ಬೆಂಗಳೂರಿನ ಸೋಲದೇವನಹಳ್ಳಿ ಸಮೀಪದ ಕೆಂಪಾಪುರದಲ್ಲಿರುವ ವಸತಿಯೊಂದಕ್ಕೆ ಭೇಟಿ ನೀಡಿದ್ದರು ಮತ್ತು ಅಲ್ಲಿ ಬಾಂಗ್ಲಾದೇಶದ ಪ್ರಜೆಗಳು ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸಿದ್ದರು.

ವಿಚಾರಣೆ ವೇಳೆ, ಹೆಚ್ಚುವರಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ವಾದ ಮಂಡಿಸಿ, ಪುನೀತ್ ಕೆರೆಹಳ್ಳಿ ಅವರ ಕೃತ್ಯಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಮುಂದಿನ ವಿಚಾರಣೆ ದಿನದಂದು ಅದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ತಿಳಿಸಿದರು.

ಮುಂದಿನ ವಿಚಾರಣೆ ದಿನಾಂಕದವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು (coercive steps) ಜರುಗಿಸದಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿತು.

“ನಗರದಲ್ಲಿರುವ ಅಕ್ರಮ ವಲಸಿಗರನ್ನು ತೆರವುಗೊಳಿಸಲು ತೆಗೆದುಕೊಂಡ ಕ್ರಮಗಳೇನು ಎಂಬುದನ್ನು ಹೆಚ್ಚುವರಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ದಾಖಲೆಯ ಮೂಲಕ ಸಲ್ಲಿಸಬೇಕು. ಸರ್ಕಾರದ ಪ್ರಕಾರವೇ ಇವರ ಸಂಖ್ಯೆ 20 ಲಕ್ಷದಷ್ಟಿದೆ,” ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು.

You cannot copy content of this page

Exit mobile version