Home ಇನ್ನಷ್ಟು ಕೋರ್ಟು - ಕಾನೂನು ಉದಯನಿಧಿ ಸ್ಟಾಲಿನ್ ಬಿಡುಗಡೆ: ಮದ್ರಾಸ್ ಹೈಕೋರ್ಟ್ ಆದೇಶದ ನಂತರ ರಿಲೀಸ್ ಮಾಡಿದ ಪೊಲೀಸರು

ಉದಯನಿಧಿ ಸ್ಟಾಲಿನ್ ಬಿಡುಗಡೆ: ಮದ್ರಾಸ್ ಹೈಕೋರ್ಟ್ ಆದೇಶದ ನಂತರ ರಿಲೀಸ್ ಮಾಡಿದ ಪೊಲೀಸರು

0

ನಟಿ ತ್ರಿಷಾ ವಿರುದ್ಧ ಅಭ್ಯಂತರಕರ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ ವಿಪಕ್ಷ ನಾಯಕ, ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್ ಮಂಗಳವಾರ ಸಂಜೆ ಬಿಡುಗಡೆಯಾಗಿದ್ದಾರೆ.

ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ಸೆಂಗಿಪಟ್ಟಿ ಪೊಲೀಸರು ಉದಯನಿಧಿ ಅವರನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯ ಎದುರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ತ್ರಿಷಾ ವಿರುದ್ಧದ ಹೇಳಿಕೆಗಳ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ನೀಲಾಂಕರೈನಲ್ಲಿರುವ ಅವರ ನಿವಾಸದಿಂದ ಪೊಲೀಸರು ಉದಯನಿಧಿ ಅವರನ್ನು ಬಂಧಿಸಿದ್ದರು. ಅವರು ತಂಜಾವೂರಿನಲ್ಲಿ ಈ ಹೇಳಿಕೆ ನೀಡಿದ್ದರಿಂದ ಅವರನ್ನು ಅಲ್ಲಿಗೇ ಕರೆದೊಯ್ಯಲಾಗಿತ್ತು. ಈ ಹಿನ್ನೆಲೆಯಲ್ಲಿ ಉದಯನಿಧಿ ಪರ ವಕೀಲರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಕ್ಷಣವೇ ಅವರನ್ನು ಬಿಡುಗಡೆ ಮಾಡಲು ಆದೇಶಿಸುವಂತೆ ನ್ಯಾಯಾಲಯಕ್ಕೆ ಕೋರಿದ್ದರು. ಈ ಕುರಿತು ನ್ಯಾಯಾಲಯವು ಸರ್ಕಾರವನ್ನು ಪ್ರಶ್ನಿಸಿತು. ತಾವು ಉದಯನಿಧಿ ಅವರನ್ನು ಬಂಧಿಸಿದ್ದರೂ, ಪೊಲೀಸ್ ಕಸ್ಟಡಿಗೆ ಕೋರುತ್ತಿಲ್ಲ ಎಂದು ಸರ್ಕಾರ ತಿಳಿಸಿತು. ಕೇವಲ ವಿಚಾರಣೆಗಾಗಿ ಮಾತ್ರ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿತು. ವಿಚಾರಣೆ ಮುಗಿದ ನಂತರ ಅವರನ್ನು ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶಿಸಿತು.

ನ್ಯಾಯಾಲಯದ ಆದೇಶದಂತೆ ಸೆಂಗಿಪಟ್ಟಿ ಪೊಲೀಸರು ಉದಯನಿಧಿ ಅವರನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದರು. ವಿಚಾರಣೆ ಪೂರ್ಣಗೊಂಡ ಬಳಿಕ ಸಂಜೆ ಅವರನ್ನು ಬಿಡುಗಡೆಗೊಳಿಸಲಾಯಿತು. ಉದಯನಿಧಿ ಅವರ ವಿಚಾರಣೆ ನಡೆಯುತ್ತಿದ್ದಷ್ಟು ಸಮಯ ಪೊಲೀಸ್ ಠಾಣೆಯ ಬಳಿ ಅವರ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ವಿಚಾರಣೆ ಮುಗಿದು ಹೊರಬಂದ ಉದಯನಿಧಿ ಅವರು ಅವರಿಗೆ ಹಸ್ತಲಾಘವ ಮಾಡಿ ತೆರಳಿದರು.

ಸೋಮವಾರ ತಂಜಾವೂರಿನಲ್ಲಿ ಡಿಎಂಕೆ ನೇತೃತ್ವದಲ್ಲಿ ರ್‍ಯಾಲಿ ಮತ್ತು ಸಭೆ ನಡೆದಿತ್ತು. ಕಾವೇರಿ ನೀರು ಹಂಚಿಕೆ ವಿವಾದದ ಕುರಿತು ಈ ಸಭೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಟಿ ತ್ರಿಷಾ ವಿರುದ್ಧ ಉದಯನಿಧಿ ಅನುಚಿತ ಹೇಳಿಕೆ ನೀಡಿದ್ದರು. ಇದರಿಂದಾಗಿ ಅವರ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ವಿಜಯ್ ನೇತೃತ್ವದ ಸರ್ಕಾರ ಅವರನ್ನು ಬಂಧಿಸಿತ್ತು.

ಈ ಬಂಧನವನ್ನು ತಮಿಳುನಾಡಿನ ಮಾಜಿ ಸಿಎಂ ಹಾಗೂ ಉದಯನಿಧಿ ಸ್ಟಾಲಿನ್ ತಂದೆ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ದಾರೆ. ಅಹಂಕಾರವು ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಟಿವಿ ಕೆ, ವಿಜಯ್ ಮತ್ತು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ವಿಜಯ್ ಅವರನ್ನು ‘ರೀಲ್ಸ್ ಸಿಎಂ’ ಎಂದು ಬಣ್ಣಿಸಿದ್ದಾರೆ.

You cannot copy content of this page

Exit mobile version