ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ಗಜಿನಿ, ಲಗಾನ್, ಸರ್ಫರೋಶ್ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ತಮ್ಮ ಪ್ರಭಾವಿ ಅಭಿನಯದ ಮೂಲಕ ಜನಮನ ಗೆದ್ದಿದ್ದ ನಟ ಪ್ರದೀಪ್ ರಾವತ್ ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು 74ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಾಹಿತಿಯ ಪ್ರಕಾರ, ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದ ಪ್ರದೀಪ್ ರಾವತ್ ಅವರಿಗೆ ಸುಮಾರು ಒಂದೂವರೆ ತಿಂಗಳ ಹಿಂದೆ ಮತ್ತೆ ಕಾಯಿಲೆ ಮರುಕಳಿಸಿತ್ತು. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಏಕಾಏಕಿ ಹದಗೆಟ್ಟಿದ್ದು, ಮಂಗಳವಾರ ಸಂಜೆ ಸುಮಾರು 6ರಿಂದ 6.30ರ ನಡುವೆ ಅವರು ನಿಧನರಾದರು.
ಪ್ರದೀಪ್ ರಾವತ್ ಅವರು ಬಿ.ಆರ್. ಚೋಪ್ರಾ ಅವರ ಜನಪ್ರಿಯ ಮಹಾಭಾರತ ಧಾರಾವಾಹಿಯಲ್ಲಿ ಅಶ್ವತ್ಥಾಮ ಪಾತ್ರದ ಮೂಲಕ ಮೊದಲ ಬಾರಿಗೆ ಮನೆಮಾತಾಗಿದ್ದರು. ನಂತರ ಲಗಾನ್ ಚಿತ್ರದಲ್ಲಿ ‘ದೇವ್’ ಪಾತ್ರ ಹಾಗೂ ಗಜಿನಿ ಸಿನಿಮಾದಲ್ಲಿ ಕ್ರೂರ ಖಳನಾಯಕನಾಗಿ ಅಭಿನಯಿಸಿ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದರು. ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರರಂಗದಲ್ಲೂ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು.
ಲಗಾನ್ ಚಿತ್ರದ ಸಹನಟ ಯಶ್‌ಪಾಲ್ ಶರ್ಮಾ ಅವರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿ, “ನಮ್ಮ ‘ದೇವ್’ ಪ್ರದೀಪ್ ರಾವತ್ ಅವರು ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಭಾವನಾತ್ಮಕವಾಗಿ ನಮನ ಸಲ್ಲಿಸಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ, ಪ್ರದೀಪ್ ರಾವತ್ ಅವರ ಅಂತ್ಯಕ್ರಿಯೆ ಗುರುವಾರ ನೆರವೇರಲಿದೆ.
