ಭಾರತದಲ್ಲಿ ಶೇಕಡಾ 56 ರಷ್ಟು ವಾಹನಗಳಿಗೆ ವಿಮೆ ಇಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ವಿಮೆ ಇಲ್ಲದ ವಾಹನಗಳಿಗೆ ಇಂಧನ ನಿರಾಕರಿಸುವಂತಹ ಪೈಲಟ್ ಪ್ರಾಜೆಕ್ಟ್ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಭಾರತದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಲ್ಲಿ ಅರ್ಧಕ್ಕಿಂತ ಹೆಚ್ಚು ವಾಹನಗಳಿಗೆ ವಿಮೆಯೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಥರ್ಡ್ ಪಾರ್ಟಿ ಇನ್ಶೂರೆನ್ಸ್ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ತುಂಬಿಸುವುದನ್ನು ತಡೆಯುವಂತಹ ಪೈಲಟ್ ಪ್ರಾಜೆಕ್ಟ್ ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಪ್ರಮುಖ ಆದೇಶ ಹೊರಡಿಸಿದೆ.
ಹಣಕಾಸು ಸಚಿವಾಲಯದ ಸ್ಟ್ಯಾಂಡಿಂಗ್ ಕಮಿಟಿ ವರದಿಯ ಪ್ರಕಾರ ದೇಶದಲ್ಲಿರುವ 30.48 ಕೋಟಿ ವಾಹನಗಳಲ್ಲಿ 16.54 ಕೋಟಿ ವಾಹನಗಳಿಗೆ (ಶೇ. 56) ವಿಮೆ ಇಲ್ಲದಿರುವುದನ್ನು ಕೋರ್ಟ್ ಗಮನಿಸಿದೆ. ಇಂಧನ ನಿರಾಕರಿಸುವ ಈ ಪ್ರಸ್ತಾವನೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ತತ್ತ್ವಶಃ ಒಪ್ಪಿಗೆ ನೀಡಿದೆ ಎಂದು ನ್ಯಾಯಾಲಯ ತಿಳಿಸಿದೆ. ಇನ್ಶೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ (ಐಆರ್‌ಡಿಎ) ಮತ್ತು ಕೇಂದ್ರ ಸಾರಿಗೆ ಸಚಿವಾಲಯದ ಸಮನ್ವಯದೊಂದಿಗೆ ಈ ಪೈಲಟ್ ಪ್ರಾಜೆಕ್ಟ್ ಕೈಗೊಳ್ಳಲು ಸೂಚಿಸಲಾಗಿದೆ.
ಇದಕ್ಕಾಗಿ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿಆರ್) ಕ್ಯಾಮೆರಾಗಳ ನೆರವಿನಿಂದ ಇಂಧನ ಮಾರಾಟ ಕೇಂದ್ರಗಳಲ್ಲಿ ವಾಹನಗಳ ವಿಮೆ ಸ್ಥಿತಿಯನ್ನು ಪರಿಶೀಲಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವಂತೆ ಕೋರಿದೆ. ಇದರಿಂದಾಗಿ ವಾಹನ ಸವಾರರು ಕಡ್ಡಾಯವಾಗಿ ವಿಮೆ ಮಾಡಿಸುತ್ತಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಟೋಲ್ ಪ್ಲಾಜಾಗಳ ಸಮಸ್ಯೆಗೂ ಸೂಚನೆ
ಟೋಲ್ ಪ್ಲಾಜಾಗಳಲ್ಲಿ ಭಾರಿ ಕ್ಯೂ ಸಮಸ್ಯೆಯನ್ನು ಪರಿಹರಿಸಲು ಸಹ ಕೋರ್ಟ್ ಪ್ರಮುಖ ಸೂಚನೆಗಳನ್ನು ನೀಡಿದೆ. ಕೆಲವು ನಿರ್ದಿಷ್ಟ ಕಾರಿಡಾರ್‌ಗಳಲ್ಲಿ ವಾಹನಗಳನ್ನು ತಡೆಯದೆಯೇ, ಆಟೋಮ್ಯಾಟಿಕ್ ಪದ್ಧತಿಯಲ್ಲಿ ಟೋಲ್ ಸಂಗ್ರಹಿಸುವ ಪೈಲಟ್ ಪ್ರಾಜೆಕ್ಟ್‌ಗಳನ್ನು ಜಾರಿಗೊಳಿಸುವಂತೆ ಕೇಂದ್ರಕ್ಕೆ ಆದೇಶಿಸಿದೆ.
ಹಾಗೆಯೇ ತಪಾಸಣೆ ನಡೆಸುವ ಪೊಲೀಸರಿಗೆ ‘ವಾಹನ್ ಪೋರ್ಟಲ್’ ಮತ್ತು ‘ಇನ್ಶೂರೆನ್ಸ್ ಇನ್‌ಫರ್ಮೇಷನ್ ಬ್ಯೂರೋ’ ಡೇಟಾದೊಂದಿಗೆ ಸಂಪರ್ಕ ಹೊಂದಿರುವ ಸಾಧನಗಳು ಅಥವಾ ಆ್ಯಪ್‌ಗಳನ್ನು ಒದಗಿಸಬೇಕು ಎಂದು ತಿಳಿಸಿದೆ.
ರಸ್ತೆ ಅಪಘಾತಗಳಿಂದ ಪ್ರಾಣ ಕಳೆದುಕೊಂಡ ಮತ್ತು ಅಂಗವಿಕಲರಾದ ಕುಟುಂಬಗಳಿಗೆ ಸಮಯಕ್ಕೆ ಸರಿಯಾಗಿ ಆರ್ಥಿಕ ನೆರವು ಸಿಗಬೇಕು ಎಂಬುದೇ ಈ ನಿಯಮಗಳ ಹಿಂದಿನ ಮುಖ್ಯ ಉದ್ದೇಶ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
