ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ‘ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ’ (PARI) ಸಂಸ್ಥೆಯ ಸಹ-ಸಂಸ್ಥಾಪಕಿ ಹಾಗೂ ಟ್ರಸ್ಟಿ ಸೋನ್ಯಾ ಗಿಲ್ (70) ಅವರು ಆಗಸ್ಟ್ 25 ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ (AIDWA) ಹಿರಿಯ ನಾಯಕಿಯಾಗಿದ್ದ ಸೋನ್ಯಾ ಅವರು, ದಶಕಗಳ ಕಾಲ ಮಹಿಳಾ ಹಕ್ಕುಗಳಿಗಾಗಿ ನಿರಂತರವಾಗಿ ಶ್ರಮಿಸಿದ್ದರು. ಅವರು ಮಹಾರಾಷ್ಟ್ರ ರಾಜ್ಯ ಐದ್ವಾ ಘಟಕದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಮಹಿಳಾ ಕಾರ್ಯಕರ್ತೆಯರ ಸೈದ್ಧಾಂತಿಕ ಹಾಗೂ ಸಾಂಸ್ಥಿಕ ತರಬೇತಿಗೆ ಅವರು ಸದಾ ಹೆಚ್ಚಿನ ಆದ್ಯತೆ ನೀಡುತ್ತಿದ್ದರು.
ತಮ್ಮ ಬದ್ಧತೆ, ಧೈರ್ಯ ಮತ್ತು ಹೋರಾಟದ ಮೂಲಕ ‘ಪಾರಿ’ ತಂಡದ ಎಲ್ಲ ಸದಸ್ಯರಿಗೂ ಸ್ಫೂರ್ತಿಯಾಗಿದ್ದ ಅವರು, ಖ್ಯಾತ ಪತ್ರಕರ್ತ ಹಾಗೂ ‘ಪಾರಿ’ ಸಂಸ್ಥಾಪಕ ಪಿ. ಸಾಯಿನಾಥ್ ಅವರ ಪತ್ನಿಯಾಗಿದ್ದಾರೆ.
