Home ಬ್ರೇಕಿಂಗ್ ಸುದ್ದಿ ಮುಸ್ಲಿಂ ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಎಂಎಲ್‌ಸಿ ರವಿಕುಮಾರ್‌ಗೆ ದಂಡ ಸಹಿತ ಜಾಮೀನು ಮಂಜೂರು

ಮುಸ್ಲಿಂ ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಎಂಎಲ್‌ಸಿ ರವಿಕುಮಾರ್‌ಗೆ ದಂಡ ಸಹಿತ ಜಾಮೀನು ಮಂಜೂರು

0

ಬೆಂಗಳೂರು: ಕಲಬುರಗಿ ಮಾಜಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ಅವರ ವಿರುದ್ಧ ಅವಹೇಳನಕಾರಿ ಹಾಗೂ ಕೋಮು ಪ್ರಚೋದಕ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ವಿಚಾರಣೆಗೆ ನಿರಂತರವಾಗಿ ಗೈರಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಇತ್ತೀಚೆಗೆ ರವಿಕುಮಾರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ (ಎನ್‌ಬಿಡಬ್ಲ್ಯು) ಜಾರಿಗೊಳಿಸಿತ್ತು. ಇದರ ಬೆನ್ನಲ್ಲೇ ಬುಧವಾರ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 42ನೇ ಎಸಿಜೆಎಂ ನ್ಯಾಯಾಲಯವು ವಿಚಾರಣೆಗೆ ಗೈರಾಗಿದ್ದಕ್ಕಾಗಿ ರವಿಕುಮಾರ್ ಅವರಿಗೆ ₹5,000 ದಂಡ ವಿಧಿಸಿತು. ಬಳಿಕ ಅವರ ವಿರುದ್ಧ ಜಾರಿಯಾಗಿದ್ದ ಎನ್‌ಬಿಡಬ್ಲ್ಯು ಹಿಂಪಡೆದು, ಷರತ್ತುಬದ್ಧ ಜಾಮೀನು ನೀಡಿತು.

ಕಳೆದ ವರ್ಷ ಕಲಬುರಗಿಯಲ್ಲಿ ನಡೆದ ಪ್ರತಿಭಟನೆ ವೇಳೆ ಆಗಿನ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ವಿರುದ್ಧ ರವಿಕುಮಾರ್ ಅವಹೇಳನಕಾರಿ ಹಾಗೂ ಕೋಮು ಪ್ರಚೋದಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ರದ್ದುಗೊಳಿಸುವಂತೆ ರವಿಕುಮಾರ್ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿತ್ತು. ಇದೀಗ ನ್ಯಾಯಾಲಯಕ್ಕೆ ಹಾಜರಾಗಿ ದಂಡ ಪಾವತಿಸಿರುವ ರವಿಕುಮಾರ್, ಮುಂದಿನ ಕಾನೂನು ಪ್ರಕ್ರಿಯೆಗೆ ಸಹಕರಿಸುವುದಾಗಿ ಭರವಸೆ ನೀಡಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

You cannot copy content of this page

Exit mobile version