Home ರಾಜಕೀಯ ದೇಶದಲ್ಲಿ ಪ್ರತಿ ಸಮುದಾಯಕ್ಕೂ ಅದರದೇ ಆದ ನಾಯಕತ್ವವಿರುವಾಗ, ಮುಸ್ಲಿಮರಿಗೆ ಏಕೆ ಸ್ವತಂತ್ರ ರಾಜಕೀಯ ನಾಯಕತ್ವ ಇರಬಾರದು?:...

ದೇಶದಲ್ಲಿ ಪ್ರತಿ ಸಮುದಾಯಕ್ಕೂ ಅದರದೇ ಆದ ನಾಯಕತ್ವವಿರುವಾಗ, ಮುಸ್ಲಿಮರಿಗೆ ಏಕೆ ಸ್ವತಂತ್ರ ರಾಜಕೀಯ ನಾಯಕತ್ವ ಇರಬಾರದು?: ಅಸಾದುದ್ದೀನ್ ಓವೈಸಿ

0

ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಎಐಎಂಐಎಂ (AIMIM) ರಾಷ್ಟ್ರೀಯ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, “ಬಿಹಾರದಲ್ಲಿ ನಮ್ಮ ಪಕ್ಷದ ಐವರು ಶಾಸಕರು ಗೆದ್ದು ಬಂದಿದ್ದಾರೆ. ಅದೇ ರೀತಿ ಉತ್ತರ ಪ್ರದೇಶದಲ್ಲೂ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಭ್ಯರ್ಥಿಗಳು ಗೆದ್ದು ಅಸೆಂಬ್ಲಿ ಪ್ರವೇಶಿಸಲಿದ್ದಾರೆ. ನಮ್ಮ ಮೇಲೆ ಎಷ್ಟೇ ಆಪಾದನೆಗಳನ್ನು ಹೊರಿಸಿದರೂ ನಾವು ಹೆದರುವುದಿಲ್ಲ; ಪ್ರಜಾಪ್ರಭುತ್ವವನ್ನು ಹಾಳುಮಾಡುತ್ತಿದ್ದೀರಿ ಎಂದು ಕೆಲವರು ನನ್ನನ್ನು ದೂರುತ್ತಾರೆ. ಆದರೆ ನಮ್ಮ ಹಕ್ಕುಗಳಿಗಾಗಿ ಹೋರಾಡುವ ನಮಗೆ ದೇವರು ಮತ್ತು ಆತನ ಸಂದೇಶವಾಹಕರ ಕೃಪೆಯಿಂದ ನ್ಯಾಯ ಸಿಗಲಿದೆ ಎಂಬ ಸಂಪೂರ್ಣ ನಂಬಿಕೆಯಿದೆ” ಎಂದು ಹೇಳಿದರು.

ದೇಶದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಅದರದೇ ಆದ ನಾಯಕತ್ವವಿರುವಾಗ, ಮುಸ್ಲಿಮರಿಗೆ ಏಕೆ ಸ್ವತಂತ್ರ ರಾಜಕೀಯ ನಾಯಕತ್ವ ಇರಬಾರದು ಎಂದು ಪ್ರಶ್ನಿಸಿದ ಅವರು, “ಸಮುದಾಯಗಳು ಸಂಘಟಿತರಾಗಿ ತಮ್ಮ ನಾಯಕತ್ವವನ್ನು ಬೆಳೆಸಿಕೊಂಡಾಗ ಮಾತ್ರ ದೇಶ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ದೇಶದಲ್ಲಿ 18 ಕೋಟಿಗೂ ಅಧಿಕ ಮುಸ್ಲಿಂ ಜನಸಂಖ್ಯೆ ಇದ್ದರೂ ಸಂಸತ್ತಿನಲ್ಲಿ ಕೇವಲ 24 ಮುಸ್ಲಿಂ ಸಂಸದರಿದ್ದಾರೆ. ಸಂಸತ್ತಿನಲ್ಲಿ ಅವರ ಪರವಾಗಿ ಮಾತನಾಡುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವಂದೇ ಮಾತರಂ ಅಥವಾ ಇತರ ವಿಷಯಗಳ ಚರ್ಚೆ ಬಂದಾಗ ಸಮುದಾಯದ ಪರವಾಗಿ ಗಟ್ಟಿಯಾಗಿ ನಿಲ್ಲಲು ನಮಗೆ ಜನಪ್ರತಿನಿಧಿಗಳ ಅಗತ್ಯವಿದೆ” ಎಂದರು.

ತಮ್ಮ ವಿರುದ್ಧ ಮಾಧ್ಯಮಗಳು ಅಥವಾ ವಿರೋಧಿಗಳು ಎಷ್ಟೇ ಅಪಪ್ರಚಾರ ನಡೆಸಿದರೂ ಸತ್ಯಕ್ಕೆ ಕೊನೆಗೂ ಜಯ ಸಿಗಲಿದೆ ಎಂದು ತಿಳಿಸಿದ ಓವೈಸಿ, ಯುವಕರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಎಚ್ಚೆತ್ತುಕೊಳ್ಳಬೇಕು ಮತ್ತು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

You cannot copy content of this page

Exit mobile version