ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿರುವ ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ, ತಾನು ಈ ಸಮಾವೇಶವನ್ನು ಬೆಂಬಲಿಸುವುದಿಲ್ಲ ಮತ್ತು ಇಂತಹ ವಿಭಜಕ ಚಳವಳಿಗಳನ್ನು ಬಲವಾಗಿ ವಿರೋಧಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ನಮ್ಮ ನಗರದ ಇತಿಹಾಸದಲ್ಲೇ ಮೊದಲ ಭಾರತೀಯ-ಅಮೆರಿಕನ್ ಮೇಯರ್ ಆಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ನನ್ನ ತಾಯಿಯ ಕುಟುಂಬ ಇಂದಿಗೂ ಭಾರತದಲ್ಲೇ ನೆಲೆಸಿದೆ. ನನ್ನ ಕುಟುಂಬವು ನನಗೆ ಕಲಿಸಿದ ಮತ್ತು ನಾನು ತಿಳಿದುಕೊಂಡು ಬೆಳೆದ ಭಾರತದ ಪರಿಕಲ್ಪನೆ ಎಂದರೆ ಅದು ಬಹುತ್ವದ ಸಮಾಜ ಹಾಗೂ ಎಲ್ಲರನ್ನೂ ಒಳಗೊಳ್ಳುವ ಜಾತ್ಯತೀತ ಗಣರಾಜ್ಯವಾಗಿದೆ.
ಆದರೆ, ಯಾವುದೇ ದೇಶವನ್ನು ಹೊರಗಿಡುವ (ವಿಭಜನೆಯ) ದೃಷ್ಟಿಕೋನದ ಮೇಲೆ ನಿಂತಿರುವ ಚಳವಳಿಯೊಂದರ ಬೆಳವಣಿಗೆಯನ್ನು ನೋಡುವುದು ಅತ್ಯಂತ ಕಳವಳಕಾರಿಯಾಗಿದೆ. ಒಬ್ಬ ಭಾರತೀಯ-ಅಮೆರಿಕನ್ ಆಗಿ ಮಾತ್ರವಲ್ಲದೆ, ಬಣ್ಣ, ಪಂಥ, ಧರ್ಮ ಅಥವಾ ಹಿನ್ನೆಲೆ ಏನೇ ಇರಲಿ, ಪ್ರತಿಯೊಬ್ಬ ವ್ಯಕ್ತಿಯೂ ಸಮಾನ ಎಂದು ಬಲವಾಗಿ ನಂಬುವ ನಗರದ ಮೇಯರ್ ಆಗಿಯೂ ನಾನು ಇದನ್ನು ಬಲವಾಗಿ ವಿರೋಧಿಸುತ್ತೇನೆ” ಎಂದು ಹೇಳಿದ್ದಾರೆ.
ಇದೇ ವೇಳೆ, “ನಾನು ಈ ಸಮಾವೇಶವನ್ನು ಬೆಂಬಲಿಸುವುದಿಲ್ಲ; ಆದರೆ ಖಾಸಗಿ ಕಾರ್ಯಕ್ರಮವೊಂದನ್ನು ರದ್ದುಗೊಳಿಸುವ ವ್ಯಾಪ್ತಿ ಅಥವಾ ಅಧಿಕಾರ ನಗರ ಆಡಳಿತಕ್ಕಿದೆಯೇ ಎಂಬುದು ನನಗೆ ತಿಳಿದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
