Home ರಾಜಕೀಯ ಅಗ್ನಿಶಾಮಕ ವಾಹನದಲ್ಲಿ ಬಿಜೆಪಿ ಶಾಸಕರ ಕಾರು ತೊಳೆಯಿಸಿದ ಆರೋಪ; ವಿಡಿಯೋ ವೈರಲ್

ಅಗ್ನಿಶಾಮಕ ವಾಹನದಲ್ಲಿ ಬಿಜೆಪಿ ಶಾಸಕರ ಕಾರು ತೊಳೆಯಿಸಿದ ಆರೋಪ; ವಿಡಿಯೋ ವೈರಲ್

0

ಭೋಪಾಲ್: ತುರ್ತು ಸಂದರ್ಭಗಳಲ್ಲಿ ಜನರ ಜೀವ ಮತ್ತು ಆಸ್ತಿಪಾಸ್ತಿ ರಕ್ಷಿಸಲು ಬಳಸಬೇಕಾದ ಸರ್ಕಾರಿ ಅಗ್ನಿಶಾಮಕ ದಳದ ವಾಹನವನ್ನು ಬಿಜೆಪಿ ಶಾಸಕರೊಬ್ಬರ ಕಾರು ತೊಳೆಯಲು ಬಳಸಿರುವ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಮಧ್ಯಪ್ರದೇಶದಲ್ಲಿ ರಾಜಕೀಯ ವಾಗ್ವಾದ ತೀವ್ರಗೊಂಡಿದೆ.

ಸಿಂಗ್ರೌಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್‌ನಿವಾಸ್ ಶಾ ಅವರ ಬಿಲೌಂಜಿಯಲ್ಲಿರುವ ಸರ್ಕಾರಿ ನಿವಾಸದ ಮುಂಭಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರುವ ದೃಶ್ಯಗಳಲ್ಲಿ, ಮುನ್ಸಿಪಲ್ ಕಾರ್ಪೊರೇಷನ್‌ನ ಮೂವರು ಸಿಬ್ಬಂದಿ ಅಗ್ನಿಶಾಮಕ ವಾಹನದ ಪೈಪ್ ಬಳಸಿ ಶಾಸಕರ ಇನ್ನೋವಾ ಕಾರಿಗೆ ನೀರು ಸಿಂಪಡಿಸಿ ತೊಳೆಯುತ್ತಿರುವುದು ಕಂಡುಬಂದಿದೆ.

ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ಶಾಸಕ ರಾಮ್‌ನಿವಾಸ್ ಶಾ, “ಒಬ್ಬ ಶಾಸಕ ತನ್ನ ಕಾರನ್ನು ತಾನೇ ತೊಳೆಯಲು ಸಾಧ್ಯವೇ?” ಎಂದು ಪ್ರಶ್ನಿಸುವ ಮೂಲಕ ಉಡಾಫೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಘಟನೆ ನಡೆದ ವೇಳೆ ತಾವು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದುದಾಗಿ ಹೇಳಿದ ಅವರು, ಮಹಾನಗರ ಪಾಲಿಕೆ ಕಚೇರಿಗೆ ನೀರು ಪೂರೈಸಲು ಬಂದಿದ್ದ ಅಗ್ನಿಶಾಮಕ ವಾಹನವನ್ನು ಚಾಲಕ ಕಾರು ತೊಳೆಯಲು ಬಳಸಿರಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ.

ಉಮಾಂಗ್ ಸಿಂಘರ್ ವಾಗ್ದಾಳಿ
ಘಟನೆ ಕುರಿತು ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘರ್ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾನ್ಯ ಜನರ ಮನೆಗಳಿಗೆ ಬೆಂಕಿ ಬಿದ್ದಾಗ ಸಮಯಕ್ಕೆ ಸರಿಯಾಗಿ ತಲುಪಬೇಕಾದ ಅಗ್ನಿಶಾಮಕ ವಾಹನಗಳು, ಇದೀಗ ಬಿಜೆಪಿ ಶಾಸಕರ ಕಾರು ತೊಳೆಯುವ ಖಾಸಗಿ ವಾಷಿಂಗ್ ಸೆಂಟರ್‌ಗಳಾಗಿ ಪರಿವರ್ತನೆಯಾಗಿವೆ ಎಂದು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ವಹಿಸಲಾಗುವ ಸರ್ಕಾರಿ ಸಂಪನ್ಮೂಲಗಳನ್ನು ರಾಜಕಾರಣಿಗಳ ವೈಯಕ್ತಿಕ ಬಳಕೆಗೆ ಬಳಸುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಅಗ್ನಿಶಾಮಕ ವಾಹನಗಳನ್ನು ಬೆಂಕಿ ಅವಘಡ, ಪ್ರವಾಹ ಹಾಗೂ ಇತರ ತುರ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಬೇಕಾಗಿದ್ದು, ಖಾಸಗಿ ವಾಹನ ತೊಳೆಯಲು ಬಳಸುವುದು ನಿಯಮಬಾಹಿರವಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಘಟನೆ ಬಹಿರಂಗಗೊಂಡಿದ್ದರೂ ಸ್ಥಳೀಯ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದಿಂದ ಈವರೆಗೆ ಸ್ಪಷ್ಟ ತನಿಖೆ ಅಥವಾ ಕ್ರಮದ ಮಾಹಿತಿ ಹೊರಬಂದಿಲ್ಲ. ಹೀಗಾಗಿ ಸರ್ಕಾರಿ ತುರ್ತು ಸೇವಾ ವಾಹನದ ದುರುಪಯೋಗದ ಕುರಿತು ಅಧಿಕಾರಿಗಳ ಹೊಣೆಗಾರಿಕೆ ಪ್ರಶ್ನೆಯಾಗಿದೆ.

You cannot copy content of this page

Exit mobile version