Home ರಾಜಕೀಯ ಕರ್ನಾಟಕದಲ್ಲಿ ಮತದಾರರ ಹೆಸರು ಕೈಬಿಡುವಂತೆ ಕೋರಿ ಸಲ್ಲಿಕೆಯಾದ ಫಾರ್ಮ್-7 ಅರ್ಜಿಗಳ ಸಂಖ್ಯೆ 1,10,654!

ಕರ್ನಾಟಕದಲ್ಲಿ ಮತದಾರರ ಹೆಸರು ಕೈಬಿಡುವಂತೆ ಕೋರಿ ಸಲ್ಲಿಕೆಯಾದ ಫಾರ್ಮ್-7 ಅರ್ಜಿಗಳ ಸಂಖ್ಯೆ 1,10,654!

0

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸುತ್ತಿರುವ ಬೆನ್ನಲ್ಲೇ, ಕರ್ನಾಟಕದಲ್ಲೂ ಮತದಾರರ ಹೆಸರುಗಳನ್ನು ಕೈಬಿಡುವಂತೆ ಕೋರಿ ಸಲ್ಲಿಕೆಯಾಗಿರುವ ‘ಫಾರ್ಮ್-7’ ಅರ್ಜಿಗಳ ಸಂಖ್ಯೆ ಲಕ್ಷದ ಗಡಿ ದಾಟಿದೆ. ರಾಜ್ಯದಲ್ಲಿ ಹೆಸರು ಸೇರ್ಪಡೆಗೆ ಆಕ್ಷೇಪಣೆ ಹಾಗೂ ಅಸ್ತಿತ್ವದಲ್ಲಿರುವ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಬರೋಬ್ಬರಿ 1,10,654 ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿವೆ.

ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಅವರ ಕಚೇರಿ ಶುಕ್ರವಾರ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಸಲ್ಲಿಕೆಯಾಗಿರುವ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಇತ್ಯರ್ಥಪಡಿಸಲು ಅಕ್ಟೋಬರ್ 22 ಕೊನೆಯ ದಿನವಾಗಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಗಡುವು ವಿಧಿಸಿದೆ.

ರಾಜ್ಯದ ಮತದಾರರ ಲೆಕ್ಕಾಚಾರ ಮತ್ತು ನೋಟಿಸ್‌ಗಳು:

ಅಕ್ಟೋಬರ್ 9ರ ವರದಿಯ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 4,51,61,393 ನೋಂದಾಯಿತ ಮತದಾರರಿದ್ದಾರೆ. ಇದರಲ್ಲಿ 2,24,03,422 ಪುರುಷರು, 2,27,55,113 ಮಹಿಳೆಯರು ಹಾಗೂ 2,858 ತೃತೀಯಲಿಂಗಿ ಮತದಾರರಿದ್ದಾರೆ. ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಆಯೋಗವು ಒಟ್ಟು 43,82,315 ನೋಟಿಸ್‌ಗಳನ್ನು ಸಿದ್ಧಪಡಿಸಿದ್ದು, ಈ ಪೈಕಿ ಶೇ. 99.80ರಷ್ಟು (43,73,745) ನೋಟಿಸ್‌ಗಳನ್ನು ಮತದಾರರಿಗೆ ತಲುಪಿಸಲಾಗಿದೆ. ವಿತರಿಸಲಾದ ನೋಟಿಸ್‌ಗಳಲ್ಲಿ ಶೇ. 93.47ರಷ್ಟು (40,88,099 ಪ್ರಕರಣಗಳು) ವಿಚಾರಣೆ ಪೂರ್ಣಗೊಂಡಿದ್ದು, ಕೇವಲ 2,85,646 ಪ್ರಕರಣಗಳು ಬಾಕಿಯಿವೆ. ಅಂತಿಮ ವಿಚಾರಣೆಯು ಅಕ್ಟೋಬರ್ 12ರಂದು ನಡೆಯಲಿದೆ.

ಜೂನ್ 16ರಿಂದ ಅಕ್ಟೋಬರ್ 8ರ ನಡುವೆ ರಾಜ್ಯದಲ್ಲಿ ನಾಲ್ಕು ಪ್ರಮುಖ ವಿಭಾಗಗಳಡಿ ಒಟ್ಟು 23,02,215 ಅರ್ಜಿಗಳು ಸಲ್ಲಿಕೆಯಾಗಿವೆ:

  • ಫಾರ್ಮ್ 6 (ಹೊಸ ಮತದಾರರ ನೋಂದಣಿ): 9,52,497 ಅರ್ಜಿಗಳು.
  • ಫಾರ್ಮ್ 6A (ಅನಿವಾಸಿ ಭಾರತೀಯರ ನೋಂದಣಿ): 4,712 ಅರ್ಜಿಗಳು.
  • ಫಾರ್ಮ್ 7 (ಹೆಸರು ತೆಗೆದುಹಾಕಲು ಆಕ್ಷೇಪಣೆ): 1,10,654 ಅರ್ಜಿಗಳು.
  • ಫಾರ್ಮ್ 8 (ವಿಳಾಸ ಬದಲಾವಣೆ, ತಿದ್ದುಪಡಿ ಹಾಗೂ ಹೊಸ ವೋಟರ್ ಐಡಿ): 12,34,352 ಅರ್ಜಿಗಳು.

ಸುಳ್ಳು ಮಾಹಿತಿ ನೀಡಿದರೆ ಜೈಲು ಶಿಕ್ಷೆ – ಸಿಇಒ ಎಚ್ಚರಿಕೆ:

ಸಾಮೂಹಿಕವಾಗಿ ಫಾರ್ಮ್-7 ಅರ್ಜಿಗಳನ್ನು ಸುರಿದು ಮತದಾರರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಸಿಇಒ ಅನ್ಬುಕುಮಾರ್ ಅವರು ಅಕ್ಟೋಬರ್ 1ರಂದೇ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (EROs) ಕಟ್ಟುನಿಟ್ಟಿನ ಪತ್ರ ಬರೆದಿದ್ದಾರೆ. ಫಾರ್ಮ್ 6, 6A, 7 ಅಥವಾ 8ರಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಘೋಷಣೆ ಅಥವಾ ಹೇಳಿಕೆ ನೀಡಿದವರ ವಿರುದ್ಧ ‘ಜನಪ್ರತಿನಿಧಿ ಕಾಯ್ದೆ 1950’ರ ಸೆಕ್ಷನ್ 31ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಇಂತಹ ಕ್ರಮ ಕೈಗೊಳ್ಳುವ ಮುನ್ನ ನಿಯಮಾವಳಿ 20ರ ಅಡಿಯಲ್ಲಿ ಸಮಗ್ರ ತನಿಖೆ ನಡೆಸುವುದು ಕಡ್ಡಾಯವಾಗಿದೆ.

ಕಾಂಗ್ರೆಸ್ ಬೆದರಿಕೆ ತಂತ್ರಕ್ಕೆ ಬಗ್ಗಲ್ಲ – ಬಿ.ವೈ. ವಿಜಯೇಂದ್ರ ತಿರುಗೇಟು:

ಸಾಮೂಹಿಕವಾಗಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರ ಬೆದರಿಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

“ನಾವು ಚುನಾವಣಾ ಆಯೋಗವನ್ನು ಸಮರ್ಥಿಸಿಕೊಳ್ಳುತ್ತಿಲ್ಲ; ಬದಲಿಗೆ ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ನಡೆಯುತ್ತಿರುವ ‘ಎಸ್‌ಐಆರ್’ ಪ್ರಕ್ರಿಯೆಯನ್ನು ಬೆಂಬಲಿಸುತ್ತಿದ್ದೇವೆ,” ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಬೂತ್ ಮಟ್ಟದ ಅಧಿಕಾರಿಗಳು (BLO) ರಾಜ್ಯ ಸರ್ಕಾರದ ಅಡಿಯಲ್ಲೇ ಕೆಲಸ ಮಾಡುತ್ತಿರುವಾಗ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದ ಅವರು, “ಬಿಜೆಪಿ ಅಥವಾ ಯಾವುದೇ ಪಕ್ಷ ಫಾರ್ಮ್-7 ಸಲ್ಲಿಸಿದರೂ, ನಿಯಮಬದ್ಧವಾಗಿದ್ದರೆ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ, ತಪ್ಪಾಗಿದ್ದರೆ ತಿರಸ್ಕರಿಸುತ್ತಾರೆ.

ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿ ನಾವು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತರು) ಸಮುದಾಯಗಳ ಮತಗಳನ್ನು ತೆಗೆಯಲು ಯತ್ನಿಸುತ್ತಿದ್ದೇವೆ ಎಂದು ಸುಳ್ಳು ಬಿಂಬಿಸುತ್ತಿದ್ದಾರೆ. ನಾವು ಯಾವುದೇ ಸಮುದಾಯವನ್ನು ಗುರಿಯಾಗಿಸಿಲ್ಲ; ಮೃತಪಟ್ಟವರು, ನಕಲಿ ಹೆಸರುಗಳು ಮತ್ತು ಬೆಂಗಳೂರು ಸೇರಿದಂತೆ ಹಲವೆಡೆ ಸೇರಿಕೊಂಡಿರುವ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರ ಹೆಸರುಗಳ ಬಗ್ಗೆ ಮಾತ್ರ ಆಕ್ಷೇಪಣೆ ಸಲ್ಲಿಸಿದ್ದೇವೆ,” ಎಂದು ಪ್ರತಿಪಾದಿಸಿದರು. ಧಾರವಾಡ ಹೈಕೋರ್ಟ್ ಪೀಠವು ಈ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಧ್ಯಂತರ ರಿಲೀಫ್ ನೀಡಿರುವುದನ್ನು ಅವರು ಉಲ್ಲೇಖಿಸಿದರು.

You cannot copy content of this page

Exit mobile version