Home ರಾಜಕೀಯ ಎಲ್ಲದರ ಬಗ್ಗೆಯೂ ಮಾತನಾಡುವ ಆರ್‌ಎಸ್‌ಎಸ್ ಮತಗಳ್ಳತನದ ಬಗ್ಗೆ ಏಕೆ ಸುಮ್ಮನಿದೆ?: ಪ್ರಿಯಾಂಕ್ ಖರ್ಗೆ

ಎಲ್ಲದರ ಬಗ್ಗೆಯೂ ಮಾತನಾಡುವ ಆರ್‌ಎಸ್‌ಎಸ್ ಮತಗಳ್ಳತನದ ಬಗ್ಗೆ ಏಕೆ ಸುಮ್ಮನಿದೆ?: ಪ್ರಿಯಾಂಕ್ ಖರ್ಗೆ

0

ದೇಶದ ಆರ್ಥಿಕತೆಯಿಂದ ಹಿಡಿದು ಕುಟುಂಬ ಕಲ್ಯಾಣದವರೆಗೂ ಎಲ್ಲ ವಿಷಯಗಳಲ್ಲೂ ಮೂಗು ತೂರಿಸಿ ಉಪದೇಶ ನೀಡುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ಮತಗಳ್ಳತನ (Vote Chori) ಹಾಗೂ ಚುನಾವಣಾ ವ್ಯವಸ್ಥೆಯ ಪಾವಿತ್ರ್ಯತೆಯ ಪ್ರಶ್ನೆ ಎದುರಾದಾಗ ನಿಗೂಢ ಮೌನಕ್ಕೆ ಶರಣಾಗಿದೆ ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ (ಟ್ವಿಟರ್) ಪೋಸ್ಟ್ ಹಂಚಿಕೊಂಡಿರುವ ಅವರು, ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದು, “ಮೋಹನ್ ಭಾಗವತ್ ‘ಜೀ’ ಈಗ ಎಲ್ಲಿದ್ದಾರೆ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

“ಆರ್‌ಎಸ್‌ಎಸ್‌ಗೆ ಜಗತ್ತಿನ ಪ್ರತಿಯೊಂದು ವಿಷಯದ ಮೇಲೂ ತನ್ನದೇ ಆದ ಅಭಿಪ್ರಾಯವಿರುತ್ತದೆ: ಭಾರತದ ಆರ್ಥಿಕತೆ, ವಿದೇಶಾಂಗ ನೀತಿ, ಧರ್ಮ, ಸಾಮಾಜಿಕ ಮೌಲ್ಯಗಳು, ಯಾವುದು ವಿಜ್ಞಾನ ಎಂಬ ವ್ಯಾಖ್ಯಾನ ಮತ್ತು ಭಾರತೀಯರು ಎಷ್ಟು ಮಕ್ಕಳನ್ನು ಹೊಂದಿರಬೇಕು ಎಂಬುದರ ಬಗ್ಗೆಯೂ ಅವರಿಗೆ ಸಲಹೆ ನೀಡುವ ಹಪಾಹಪಿಯಿದೆ. ಗೋಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂಬ ವಾದಗಳನ್ನು ಹರಡುವುದರಿಂದ ಹಿಡಿದು, ಪುರಾಣ ಕತೆಗಳನ್ನೇ ವೈಜ್ಞಾನಿಕ ಸತ್ಯವೆಂದು ಬಿಂಬಿಸುವವರೆಗೆ ಸಂಘದ ಪಾಲಿಗೆ ಅವರ ಪರಿಣತಿಯನ್ನು ಮೀರಿದ ಯಾವುದೇ ವಿಷಯವೇ ಇಲ್ಲದಂತಿದೆ,” ಎಂದು ಖರ್ಗೆ ಲೇವಡಿ ಮಾಡಿದ್ದಾರೆ.

“ಆದರೆ, ಅದೇ ಸಂಘ ಪರಿವಾರಕ್ಕೆ ಅನ್ನದಾತ ರೈತರ ಸಂಕಷ್ಟಗಳು, ವಿದ್ಯಾರ್ಥಿಗಳ ಭವಿಷ್ಯದ ಆತಂಕಗಳು ಅಥವಾ ಪ್ರಜಾಪ್ರಭುತ್ವದ ಬುಡಕ್ಕೇ ಕೊಳ್ಳಿ ಇಡುತ್ತಿರುವ ‘ಮತಗಳ್ಳತನ’ದ (Vote Chori) ಗಂಭೀರ ಆರೋಪಗಳ ವಿಚಾರ ಬಂದಾಗ ಇವರ ಜ್ಞಾನೋಪದೇಶಗಳು ದಿಢೀರನೆ ಸ್ಥಗಿತಗೊಳ್ಳುತ್ತವೆ. ಚುನಾವಣಾ ಸಮಗ್ರತೆ, ಮತದಾರರ ಪಟ್ಟಿಯ ಪಾವಿತ್ರ್ಯತೆ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯ ಬಗ್ಗೆ ಪ್ರಶ್ನೆಗಳು ಎದ್ದಿರುವಾಗ ಈ ಕಿವಿಗಡಚಿಕ್ಕುವ ಮೌನವೇಕೆ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

You cannot copy content of this page

Exit mobile version