Home ವಿದೇಶ ಉತ್ತರ ನೇಪಾಳದಲ್ಲಿ ಭೀಕರ ಪ್ರವಾಹ; 8 ಮಂದಿ ಸಾವು

ಉತ್ತರ ನೇಪಾಳದಲ್ಲಿ ಭೀಕರ ಪ್ರವಾಹ; 8 ಮಂದಿ ಸಾವು

0

ಕಠ್ಮಂಡು: ಉತ್ತರ ನೇಪಾಳದ ರಸುವಾ ಜಿಲ್ಲೆಯಲ್ಲಿ ಭೋಟೆ ಕೋಸಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿ ಭೀಕರ ಪ್ರವಾಹ ಸಂಭವಿಸಿದೆ. ಪ್ರವಾಹದ ರಭಸಕ್ಕೆ ಹಲವು ಮನೆಗಳು ಹಾಗೂ ಗ್ರಾಮಗಳು ಕೊಚ್ಚಿಹೋಗಿದ್ದು, ಪ್ರಾಥಮಿಕ ವರದಿಗಳ ಪ್ರಕಾರ 8 ಮಂದಿ ಮೃತಪಟ್ಟಿದ್ದಾರೆ.

ಸ್ಥಳೀಯ ಕಾಲಮಾನ ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಭೋಟೆ ಕೋಸಿ ನದಿಯಲ್ಲಿ ದಿಢೀರ್ ನೀರಿನ ಪ್ರಮಾಣ ಹೆಚ್ಚಾಗಿದೆ. ಟಿಬೆಟ್ ಭಾಗದಿಂದ ಅಪಾರ ಪ್ರಮಾಣದ ನೀರು ಹರಿದುಬಂದ ಪರಿಣಾಮ ನದಿಯಲ್ಲಿ ಪ್ರವಾಹ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ.

ನೀರಿನ ರಭಸಕ್ಕೆ ರಸುವಾ ಜಿಲ್ಲೆಯ ಗಡಿ ಪ್ರದೇಶಗಳಾದ ಟಿಮುರೆ ಮತ್ತು ಸ್ಯಾಫುಬೇಸಿ ಸುತ್ತಮುತ್ತಲಿನ ಹಲವು ಗ್ರಾಮಗಳು ತೀವ್ರವಾಗಿ ಹಾನಿಗೊಳಗಾಗಿವೆ. ಹಲವು ಮನೆಗಳು ಹಾಗೂ ಯೋಜನಾ ಪ್ರದೇಶಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ. ರಸ್ತೆಗಳು, ಸೇತುವೆಗಳು ಮತ್ತು ಜಲವಿದ್ಯುತ್ ಯೋಜನೆಗಳ ಮೂಲಸೌಕರ್ಯಕ್ಕೂ ಭಾರಿ ಹಾನಿಯಾಗಿರುವುದಾಗಿ ನೇಪಾಳ ಸೇನೆ ತಿಳಿಸಿದೆ.

ಪ್ರವಾಹದ ಹಿನ್ನೆಲೆಯಲ್ಲಿ ರಸುವಾ ಸೇರಿದಂತೆ ನುವಾಕೋಟ್, ಚಿತ್ವಾನ್ ಹಾಗೂ ಗೋರ್ಕಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನದಿ ತೀರದ ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರುವಂತೆ ಹಾಗೂ ಮುಂದಿನ ಆದೇಶದವರೆಗೆ ಸುರಕ್ಷಿತ ಸ್ಥಳಗಳಲ್ಲೇ ಇರುವಂತೆ ನೇಪಾಳದ ವಿಪತ್ತು ನಿರ್ವಹಣಾ ಘಟಕ ಸೂಚಿಸಿದೆ.

ಟಿಬೆಟ್ ಗಡಿಯಿಂದ ಸುಮಾರು 125 ಕಿ.ಮೀ ದೂರದಲ್ಲಿರುವ ರಸುವಾ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಸಂಪರ್ಕ ವ್ಯವಸ್ಥೆಗೂ ಧಕ್ಕೆಯಾಗಿದೆ. ಸದ್ಯ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಅಧಿಕಾರಿಗಳು ಮುಂದಾಗಿದ್ದು, ಪ್ರವಾಹದಿಂದ ಉಂಟಾಗಿರುವ ಹಾನಿ ಹಾಗೂ ಸಾವಿನ ಸಂಖ್ಯೆ ಕುರಿತು ನಿಖರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

You cannot copy content of this page

Exit mobile version