Home ಅಪರಾಧ ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್‌‌ಗಾಗಿ ಸಿಐಡಿ ಎಸ್‌ಐಟಿ ತೀವ್ರ ಶೋಧ, ಎರಡನೇ ಬಾರಿ...

ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್‌‌ಗಾಗಿ ಸಿಐಡಿ ಎಸ್‌ಐಟಿ ತೀವ್ರ ಶೋಧ, ಎರಡನೇ ಬಾರಿ ಲುಕ್‌ಔಟ್ ನೋಟಿಸ್ ಜಾರಿ

0

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದ 5ನೇ ಆರೋಪಿಯಾಗಿರುವ ಮಾಜಿ ಸಚಿವ ಹಾಗೂ ಕೆ.ಆರ್.ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗಾಗಿ ಅಪರಾಧ ತನಿಖಾ ವಿಭಾಗದ (ಸಿಐಡಿ) ಎಸ್‌ಐಟಿ ಅಧಿಕಾರಿಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ನಡುವೆ ಬಸವರಾಜ ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ಎರಡನೇ ಬಾರಿ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೈರತಿ ಬಸವರಾಜ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಹುಡುಕಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿಯೇ ಬಸವರಾಜ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಇದರ ಪರಿಣಾಮವಾಗಿ ಅವರು ಬೆಂಗಳೂರು ನಗರದಿಂದ ಹೊರಗೆ ತೆರಳಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಪ್ರಸ್ತುತ ಬಸವರಾಜ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದರೆ, ಪೊಲೀಸರು ಅವರ ಪತ್ತೆಗೆ ಬಲೆ ಬೀಸಿದ್ದು, ಸದ್ಯದಲ್ಲಿಯೇ ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆ:
2025ರ ಜುಲೈ 15ರ ರಾತ್ರಿ ಹಲಸೂರು ಕೆರೆ ಸಮೀಪದ ಮನೆಯ ಬಳಿ ರೌಡಿಶೀಟರ್ ಬಿಕ್ಲು ಶಿವನನ್ನು ದುಷ್ಕರ್ಮಿಗಳ ಗ್ಯಾಂಗ್ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿತ್ತು. ಶಿವನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಹಲವಾರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಬೈರತಿ ಬಸವರಾಜ್ ಅವರನ್ನು 5ನೇ ಆರೋಪಿಯಾಗಿ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy content of this page

Exit mobile version