Home ಅಪರಾಧ ಪ್ರಾಂಶುಪಾಲರ ಭೀಕರ ಹತ್ಯೆ; ಇಬ್ಬರು ವಿದ್ಯಾರ್ಥಿಗಳು ಸೆರೆ

ಪ್ರಾಂಶುಪಾಲರ ಭೀಕರ ಹತ್ಯೆ; ಇಬ್ಬರು ವಿದ್ಯಾರ್ಥಿಗಳು ಸೆರೆ

0

ನಲ್ಗೊಂಡ: ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಶಾಲಾ ಪ್ರಾಂಶುಪಾಲೆಯೊಬ್ಬರನ್ನು ಭೀಕರವಾಗಿ ಹತ್ಯೆಗೈದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಅದೇ ಶಾಲೆಯ 10ನೇ ತರಗತಿಯ ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ.

ನಲ್ಗೊಂಡ ಜಿಲ್ಲೆಯ ಕೊಂಡ ಮಲ್ಲೆಪಲ್ಲಿಯ ಜೆಬಿ ಕಾಲೋನಿಯ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ರೂಪಾ ರೆಡ್ಡಿ ಹತ್ಯೆಗೀಡಾದವರು. ಅವರು ತಮ್ಮ ಪತಿ ರಾಜೇಂದರ್ ರೆಡ್ಡಿ ಅವರೊಂದಿಗೆ ಜೆಬಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಅವರ ಪುತ್ರ ಅಭಿನವ್ ಹೈದರಾಬಾದ್‌ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.

ಸತತ ಮೂರು ದಿನಗಳ ರಜೆ ಹಿನ್ನೆಲೆಯಲ್ಲಿ ರೂಪಾ ಅವರು ಪತಿಯೊಂದಿಗೆ ಹೈದರಾಬಾದ್‌ಗೆ ತೆರಳಿದ್ದರು. ಆಗಸ್ಟ್ 11ರಂದು ಬೆಳಗ್ಗೆ ಅವರು ಒಬ್ಬರೇ ಕೊಂಡ ಮಲ್ಲೆಪಲ್ಲಿಗೆ ವಾಪಸ್ ಆಗಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಆರೋಪಿಗಳು ಅವರ ಮನೆಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಪೊಲೀಸರ ಪ್ರಕಾರ, ಆರೋಪಿಗಳು ಕೃತ್ಯಕ್ಕೂ ಐದು ದಿನಗಳ ಮುನ್ನವೇ ರೂಪಾ ಅವರ ಮನೆ ಹಾಗೂ ಅವರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಮನೆಗೆ ನುಗ್ಗಿದಾಗ ರೂಪಾ ಅವರು ಆರೋಪಿಗಳನ್ನು ಗುರುತಿಸಿದ್ದಾರೆ. ಇದರಿಂದ ಭಯಗೊಂಡ ಬಾಲಾಪರಾಧಿಗಳು ಅವರ ಮೇಲೆ ದಾಳಿ ನಡೆಸಿ 27 ಬಾರಿ ಇರಿದು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮನೆಯಲ್ಲಿದ್ದ ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು.

ಘಟನೆ ನಲ್ಗೊಂಡದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಪ್ರಕರಣದ ತನಿಖೆಗಾಗಿ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದರು. ಸುಮಾರು 70 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುವುದರ ಜತೆಗೆ, ಒಟ್ಟು 80ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೊಳಪಡಿಸಿದ ಬಳಿಕ ಆರೋಪಿಗಳ ಸುಳಿವು ಪತ್ತೆಯಾಗಿದೆ ಎಂದು ನಲ್ಗೊಂಡ ಪೊಲೀಸ್ ವರಿಷ್ಠಾಧಿಕಾರಿ ಶರತ್ ಚಂದ್ರ ಪವಾರ್ ತಿಳಿಸಿದ್ದಾರೆ.

ಬಂಧಿತ ಇಬ್ಬರೂ ಬಾಲಾಪರಾಧಿಗಳು ಮೃತ ರೂಪಾ ರೆಡ್ಡಿ ಪ್ರಾಂಶುಪಾಲೆಯಾಗಿದ್ದ ನಾಗಾರ್ಜುನ ಪಬ್ಲಿಕ್ ಶಾಲೆಯಲ್ಲೇ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ನಾಗಾರ್ಜುನ ಪಬ್ಲಿಕ್ ಶಾಲೆಯನ್ನು ನಾಲ್ಕು ದಿನಗಳ ಕಾಲ ಮುಚ್ಚಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

You cannot copy content of this page

Exit mobile version