ಎಸ್‌ಐಆರ್ ರದ್ದುಗೊಳಿಸಿ ಆಯೋಗದ ವಿರುದ್ಧ ಸ್ವತಂತ್ರ ತನಿಖೆಗೆ ಆಗ್ರಹ: ಸಿಜೆಐಗೆ 2,000ಕ್ಕೂ ಹೆಚ್ಚು ಗಣ್ಯ ನಾಗರಿಕರಿಂದ ಬಹಿರಂಗ ಪತ್ರ

ಕೇಂದ್ರ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಕುರಿತು ತುರ್ತಾಗಿ ತನಿಖೆ ನಡೆಸುವಂತೆ ಕೋರಿ ದೇಶದ 2,000ಕ್ಕೂ ಹೆಚ್ಚು ನಾಗರಿಕರು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಜಸ್ಟಿಸ್ ಸೂರ್ಯಕಾಂತ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಈ ‘ಎಸ್‌ಐಆರ್’ (SIR) ವಿಷಯದಲ್ಲಿ ನ್ಯಾಯಾಂಗವು ತಕ್ಷಣವೇ ಮಧ್ಯಪ್ರವೇಶಿಸಿ, ಇದನ್ನು ಸ್ವಯಂಪ್ರೇರಿತವಾಗಿ (ಸುಮೊಟೊ) ವಿಚಾರಣೆಗೆ ಸ್ವೀಕರಿಸಬೇಕು ಎಂದು ಅವರು ಕೋರಿದ್ದಾರೆ.ಅಲ್ಲದೆ, ಎಸ್‌ಐಆರ್ ಪ್ರಕ್ರಿಯೆಯ ಮೇಲೆ ತಕ್ಷಣವೇ ತಡೆ (ಸ್ಟೇ) ವಿಧಿಸಿ, ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಪತ್ರಕ್ಕೆ ಮಾಜಿ ರಾಜ್ಯಸಭಾ ಸಂಸದ ಜವಾಹರ್ ಸಿರ್ಕಾರ್, ಖ್ಯಾತ ಅರ್ಥಶಾಸ್ತ್ರಜ್ಞರಾದ ಜಯತಿ ಘೋಷ್, ಕಮಲ್ ಮಲ್ಹೋತ್ರಾ, ನಿವೃತ್ತ ಪ್ರಾಧ್ಯಾಪಕರಾದ ಆದಿತ್ಯ ಮುಖರ್ಜಿ, ಮೃದುಲಾ ಮುಖರ್ಜಿ ಮತ್ತು ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಸೇರಿದಂತೆ ಹಲವು ಪ್ರಮುಖರು ಸಹಿ ಹಾಕಿದ್ದಾರೆ.

ಶಿಕ್ಷಣ ತಜ್ಞರು, ವಕೀಲರು, ಮಾಜಿ ನಾಗರಿಕ ಸೇವಾ (ಸಿವಿಲ್ ಸರ್ವೆಂಟ್ಸ್) ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ನಿವೃತ್ತ ಸೇನಾ ಸಿಬ್ಬಂದಿ ಮುಖ್ಯ ನ್ಯಾಯಮೂರ್ತಿಗಳಿಗೆ ಈ ಬಹಿರಂಗ ಪತ್ರವನ್ನು ಬರೆದಿದ್ದು, ಚುನಾವಣಾ ಆಯೋಗದ (ECI) ಕಾರ್ಯವೈಖರಿ ಹಾಗೂ ಅದರ ಕೇಂದ್ರೀಕೃತ ‘ಈಸಿಐನೆಟ್’ (ECINet) ತಂತ್ರಜ್ಞಾನ ವ್ಯವಸ್ಥೆಯ ಕುರಿತು ಸ್ವತಂತ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಸ್ಥಳೀಯ ಮಟ್ಟದ ಚುನಾವಣಾ ನೋಂದಣಿ ಅಧಿಕಾರಿಗಳ (ERO) ಶಾಸನಬದ್ಧ ಅಧಿಕಾರವನ್ನು ಬದಿಗೊತ್ತಿ, ಈ ಸಾಫ್ಟ್‌ವೇರ್ ತಂತ್ರಜ್ಞಾನದ ಮೂಲಕ ಮತದಾರರ ಪಟ್ಟಿಯಲ್ಲಿ ಅನಿಯಂತ್ರಿತ ಬದಲಾವಣೆಗಳು ಮತ್ತು ಸೇರ್ಪಡೆ-ಕಡಿತಗಳನ್ನು ಮಾಡುತ್ತಿರುವುದು ಜನಪ್ರತಿನಿಧಿ ಕಾಯ್ದೆಗೆ (RPA) ತದ್ವಿರುದ್ಧ ಎಂದು ಅವರು ಆಕ್ಷೇಪಿಸಿದ್ದಾರೆ. ಈ ನಿಯಮಬಾಹಿರ ಕ್ರಮಗಳಿಗಾಗಿ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಚುನಾವಣಾ ಆಯುಕ್ತರ ನಡುವೆಯೇ ಆಂತರಿಕ ಭಿನ್ನಾಭಿಪ್ರಾಯಗಳು ಉಂಟಾಗಿರುವುದರ ಬಗ್ಗೆಯೂ ಪತ್ರದಲ್ಲಿ ಗಂಭೀರ ಕಳವಳ ವ್ಯಕ್ತಪಡಿಸಲಾಗಿದೆ. ಹೊಸ ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್-6’ನಲ್ಲಿ ನಿಯಮಬಾಹಿರವಾಗಿ ಮಾಡಲಾಗಿರುವ ಬದಲಾವಣೆಗಳ ವಿರುದ್ಧವೂ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನಾಗರಿಕರು, ತಾಂತ್ರಿಕ ದೋಷಗಳು, ಸಾಫ್ಟ್‌ವೇರ್ ಲಾಕ್ ಅಥವಾ ಅನಧಿಕೃತ ನಿಯಮಗಳ ಬದಲಾವಣೆಯಿಂದಾಗಿ ರದ್ದಾಗಿರುವ ಎಲ್ಲಾ ಅರ್ಹ ಮತದಾರರ ಹೆಸರುಗಳನ್ನು ತಕ್ಷಣವೇ ಮರುಸ್ಥಾಪಿಸಬೇಕೆಂದು ಕೋರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು