ವಾರಕ್ಕೆ 5 ದಿನಗಳ ಕೆಲಸಕ್ಕೆ ಆಗ್ರಹಿಸಿ ಇಂದಿನಿಂದ 3 ದಿನ ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ವಾರಕ್ಕೆ ಐದು ದಿನಗಳ ಕೆಲಸದ ದಿನಗಳನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿ ಬ್ಯಾಂಕ್ ಒಕ್ಕೂಟಗಳು ನೀಡಿದ ಕರೆಯ ಮೇರೆಗೆ ಬ್ಯಾಂಕ್ ನೌಕರರು ಸೋಮವಾರದಿಂದ ದೇಶವ್ಯಾಪಿ ಮೂರು ದಿನಗಳ ಮುಷ್ಕರ ಆರಂಭಿಸುತ್ತಿದ್ದಾರೆ.

ಈ ಮುಷ್ಕರದ ಹಿನ್ನೆಲೆಯಲ್ಲಿ ಚೆಕ್ ಕ್ಲಿಯರೆನ್ಸ್, ನಗದು ಠೇವಣಿ ಮತ್ತು ಡ್ರಾ ಸೇರಿದಂತೆ ಪ್ರಮುಖ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು (PSB), ಹಳೆಯ ಖಾಸಗಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRB) ಗ್ರಾಹಕರು ಈ ವ್ಯತ್ಯಯದಿಂದ ತೊಂದರೆ ಎದುರಿಸಬೇಕಾಗಬಹುದು. ಆದರೆ ಡಿಜಿಟಲ್ ಹಾಗೂ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.

ಖಾಸಗಿ ರಂಗದ ಪ್ರಮುಖ ಬ್ಯಾಂಕುಗಳಾದ ಐಸಿಐಸಿಐ, ಎಚ್‌ಡಿಎಫ್‌ಸಿ ಮತ್ತು ಆಕ್ಸಿಸ್ ಬ್ಯಾಂಕುಗಳು ಈ ಮೂರು ದಿನಗಳಲ್ಲೂ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಗ್ರಾಹಕರಿಗೆ ಉಂಟಾಗಬಹುದಾದ ಅನಾನುಕೂಲಕ್ಕೆ ಸಾರ್ವಜನಿಕ ವಲಯದ ಬ್ಯಾಂಕುಗಳು ವಿಷಾದ ವ್ಯಕ್ತಪಡಿಸಿದ್ದು, ತುರ್ತು ನಗದು ಅಗತ್ಯಗಳಿಗಾಗಿ ಎಟಿಎಂ (ATM) ಅಥವಾ ಕ್ಯಾಶ್ ಡೆಪಾಸಿಟ್ ಮಷಿನ್‌ಗಳನ್ನು (ADWM) ಬಳಸುವಂತೆ ಸಲಹೆ ನೀಡಿವೆ. ಜತೆಗೆ ಯುಪಿಐ, ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಂತಹ ಡಿಜಿಟಲ್ ಸೇವೆಗಳನ್ನು ಬಳಸಿಕೊಳ್ಳಲು ಕೋರಿವೆ.

ಈ ಮೂರು ದಿನಗಳ ಮುಷ್ಕರದ ನಂತರವೂ ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಎಚ್ಚರಿಸಿದೆ. ವಾರಕ್ಕೆ ಐದು ದಿನಗಳ ಕೆಲಸದ ದಿನ ನಿಗದಿಪಡಿಸುವಂತೆ ತಾವು ಹಲವು ವರ್ಷಗಳಿಂದ ನಿರಂತರವಾಗಿ ಬೇಡಿಕೆ ಇಡುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಒಕ್ಕೂಟ ಆಪಾದಿಸಿದೆ. ಸರ್ಕಾರದ ಮೊಂಡು ಧೋರಣೆಯಿಂದಾಗಿಯೇ ಅನಿವಾರ್ಯವಾಗಿ ಮುಷ್ಕರದ ಹಾದಿ ಹಿಡಿಯಬೇಕಾಯಿತು ಎಂದು ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫೆಡರೇಶನ್ (AIBOC) ಪ್ರಧಾನ ಕಾರ್ಯದರ್ಶಿ ರೂಪಮ್ ರಾಯ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು