ಚುನಾವಣಾ ಆಯುಕ್ತರ ಕರಾಮತ್ತು ಸಂವಿಧಾನಕ್ಕೆ ಕುತ್ತು

“..ಈ SIR ಸಂಚಿನ ರೂಪರೇಷೆ ಸಿದ್ದವಾಗಿ ಜಾರಿಗೆ ಬಂದಿದ್ದು 2023 ಡಿಸೆಂಬರ್ 12 ರಂದು. ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಮಾನದಂಡವನ್ನೇ ಯಾವಾಗ ಮೋಶಾ ಜೋಡಿ ಬದಲಾಯಿಸಿತೋ ಆಗಲೇ ಈ ಶಡ್ಯಂತ್ರದ ಬಗ್ಗೆ ಮುನ್ನುಡಿ ಬರೆದಾಗಿತ್ತು..” ಚಿಂತಕರಾದ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ

ಹೌದು ಚುನಾವಣಾ ಆಯೋಗ ಅದರಲ್ಲೂ ಅದರ ಮುಖ್ಯ ಆಯುಕ್ತರಾದ ಜ್ಞಾನೇಶ್ ಕುಮಾರ್ ರವರು ಬಿಜೆಪಿ ಎಜೆಂಟನಂತೆ ಮೋದಿ ಶಾ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿರುವ ಸಂಗತಿ. ಎಸ್ ಐ ಆರ್ ಹೆಸರಲ್ಲಿ ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೋಟ್ಯಾಂತರ ಅರ್ಹ ಮತದಾರರ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ ಎಂಬುದೂ ಸತ್ಯ ಸಂಗತಿ. ಹೀಗೆ ಓಟ್ ಚೋರಿ ಮೂಲಕ ದೆಹಲಿ, ಹರಿಯಾಣ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬಿಜೆಪಿ ಸರಕಾರವನ್ಜು ಚುನಾವಣೆಯಲ್ಲಿ ಗೆಲ್ಲಿಸಿದ್ದೂ ಇದೇ SIR ಶಡ್ಯಂತ್ರ ಮತ್ತು ಚುನಾವಣಾ ಮುಖ್ಯ ಆಯುಕ್ತರ ಕರಾಮತ್ತು ಎಂಬುದೂ ಜನಜನಿತ ಸುದ್ದಿ.

ದೇಶಾದ್ಯಂತ ನಡೆಯುವ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನು ಯಾರೂ ಕಟ್ಟಿ ಹಾಕದಂತೆ ನೋಡಿಕೊಳ್ಳುವ ಮಹಾ ಸಂಚು ರೂಪಿಸಿ ಅದಕ್ಕೊಬ್ಬ ಮುಖ್ಯ ನಿರ್ವಹಣಾ ಆಯುಕ್ತರನ್ನು ಮೋದಿ ಶಾ ಜೋಡಿ ನಿಯುಕ್ತಿ ಮಾಡಿದ್ದೇ ಚುನಾವಣಾ ದಿಗ್ವಿಜಯಕ್ಕಾಗಿ.

ಈ SIR ಸಂಚಿನ ರೂಪರೇಷೆ ಸಿದ್ದವಾಗಿ ಜಾರಿಗೆ ಬಂದಿದ್ದು 2023 ಡಿಸೆಂಬರ್ 12 ರಂದು. ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಮಾನದಂಡವನ್ನೇ ಯಾವಾಗ ಮೋಶಾ ಜೋಡಿ ಬದಲಾಯಿಸಿತೋ ಆಗಲೇ ಈ ಶಡ್ಯಂತ್ರದ ಬಗ್ಗೆ ಮುನ್ನುಡಿ ಬರೆದಾಗಿತ್ತು. ಮೊದಲು ಮೂರು ಜನ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಪ್ರಧಾನ ಮಂತ್ರಿ, ಪ್ರತಿ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾದೀಶರು ಇರುತ್ತಿದ್ದರು. 10 ಆಗಸ್ಟ್ 2023 ರಂದು ಕೇಂದ್ರ ಸರ್ಕಾರವು ಹೊಸ Chief Election Commissioner and Other Election Commissioners (Appointment, Conditions of Service and Term of Office) Bill, 2023 ಅನ್ನು ರಾಜ್ಯಸಭೆಯಲ್ಲಿ ಮಂಡಿಸಿತು. 2023ರ ನಂತರ ಜಾರಿಗೆ ಬಂದ ಕಾನೂನಿನಲ್ಲಿ ಆಯ್ಕೆ ಸಮಿತಿಯಿಂದ CJI ಅವರನ್ನು ತೆಗೆದು, ಅವರ ಸ್ಥಾನದಲ್ಲಿ ಕೇಂದ್ರ ಸಚಿವರೊಬ್ಬರನ್ನು ಸೇರಿಸಲಾಯಿತು.

ಇದಕ್ಕೆ ನೇಮಕಾತಿ ಸೇವಾ ನಿಯಮಗಳ ಪ್ರಕಾರ ಕಾಯ್ದೆಯಾಗಿ ಅನುಮೋದನೆಯನ್ನು ಪಡೆದುಕೊಳ್ಳಲಾಯ್ತು. ಈಗ ಸಮಿತಿಯಲ್ಲಿದ್ದ ವಿರೋಧ ಪಕ್ಷದ ನಾಯಕ ಅದೆಷ್ಟೇ ವಿರೋಧಿಸಿದರೂ ಬಹುಮತದ ಆಧಾರದಲ್ಲಿ ಆಡಳಿತ ಪಕ್ಷದ ಇನ್ನಿಬ್ಬರು ಸದಸ್ಯರ ನಿರ್ಣಯವೇ ಅಂತಿಮವಾಗುವಂತಾಯ್ತು. ಬಿಜೆಪಿ ಪರವಾಗಿ ಚುನಾವಣಾ ವ್ಯವಸ್ಥೆಯನ್ನೇ ಹಾಳು ಮಾಡುತ್ತಿರುವ ಜ್ಞಾನೇಶ ಕುಮಾರ್ ಮುಖ್ಯ ಚುನಾವಣಾ ಆಯುಕ್ತರಾಗಿ ಆಯ್ಕೆ ಯಾಗಿದ್ದು ಹೀಗೆ.

ಮೋದಿ ಪರವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣಾ ಬುನಾದಿಯನ್ನೇ ಬದಲಾಯಿಸುವ ಪ್ರಯತ್ನದಲ್ಲಿ ಒಂದಿಲ್ಲಾ ಒಂದು ದಿನ ಚುನಾವಣಾ ಆಯುಕ್ತರ ಕರಾಮತ್ತು ಬಯಲಾಗುತ್ತದೆ ಎಂಬುದು ಗೊತ್ತಿದ್ದೇ ಚುನಾವಣಾ ಆಯುಕ್ತರಿಗೆ ಕಾನೂನಾತ್ಮಕ ರಕ್ಷಣೆಯನ್ನು ಕಾನೂನಾತ್ಮಕವಾಗಿಯೇ ಕೊಡಲಾಗಿತ್ತು. ಟರ್ಮ್ ಆಫ್ ಆಫೀಸ್ 2023 ರ ಸೆಕ್ಷನ್ 16 ರ ಪ್ರಕಾರ ” ಭಾರತದ ಯಾವುದೇ ನ್ಯಾಯಾಲಯವು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಆಯುಕ್ತರ ವಿರುದ್ದ ಸಿವಿಲ್ ಅಥವಾ ಕ್ರಿಮಿನಲ್ ಕಾನೂನು ಕ್ರಮ ತೆಗೆದುಕೊಳ್ಳುವಂತಿಲ್ಲ”. ಅಂದರೆ ಚುನಾವಣಾ ಆಯುಕ್ತರಾದವರು ಏನೇ ಮೋಸ ವಂಚನೆ ಸಂಚು ಮಾಡಿದರೂ ಅವರನ್ನು ಯಾವುದೇ ಕಾರಣಕ್ಕೂ ಬಂದಿಸುವಂತಿಲ್ಲ ಎಂದು ಕಾನೂನಾತ್ಮಕ ರಕ್ಷಣೆಯನ್ನು ಮೊದಲೇ ವದಗಿಸಲಾಗಿತ್ತು. ಇದರಿಂದಾಗಿ ಜ್ಞಾನೇಶ ಕುಮಾರರಿಗೆ ಯಾವ ಕಾನೂನು ಶಿಕ್ಷೆಯ ಕನಿಷ್ಟ ಭಯವೂ ಇಲ್ಲದೇ SIR ಮೂಲಕ ಬಿಜೆಪಿ ಪರವಾಗಿ ದೇಶಾದ್ಯಂತ ಮತದಾರರ ಪರಿಷ್ಕರಣೆ ಹೆಸರಲ್ಲಿ ಬೇಕಾದ ಓಟರ್ಸ್ ಗಳನ್ನು ಸೇರಿಸುವುದು ಹಾಗೂ ಬೇಡವಾದವರ ಹೆಸರುಗಳನ್ಜ ತೆಗೆದು ಹಾಕುವುದನ್ನು ಅವ್ಯಾಹತವಾಗಿ ಆಯುಕ್ತರು ಮಾಡಿ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತರಲಾಯಿತು.

ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯುಕ್ತರಾಗಿ ಮೊದಲು 15 ಮಾರ್ಚ್ 2024ರಂದು ಅಧಿಕಾರ ಸ್ವೀಕರಿಸಿದ್ದರು; ನಂತರ 19 ಫೆಬ್ರವರಿ 2025ರಂದು ಮುಖ್ಯ ಚುನಾವಣಾ ಆಯುಕ್ತರಾಗಿ ಮೋದಿಯವರ ಆಯ್ಕೆಯಂತೆ ಅಧಿಕಾರ ವಹಿಸಿಕೊಂಡ ನಂತರ 2025 ರ ಬಿಹಾರ ಚುನಾವಣೆಗೂ ಮುನ್ನ ವಿಶೇಷ ಪುನರ್ ಪರಿಶೀಲನೆ (SIR) ಎನ್ನುವ ತಂತ್ರಗಾರಿಕೆ ಪ್ರಾಯೋಗಿಕವಾಗಿ ಅನುಷ್ಟಾನಗೊಳಿಸಲಾಯ್ತು. ಇದರ ಹಿಂದಿರುವ ಮಾಸ್ಟರ್ ಮೈಂಡ್ ಮೋಶಾ ಎಂದೂ, ಅವರ ಹಿಂದಿರುವ ಸೂಪರ್ ಮಾಸ್ಟರ್ ಮೈಂಡ್ ಆರೆಸ್ಸೆಸ್ ಎಂದೂ ಚರ್ಚೆ ಶುರುವಾಯ್ತು.

ಈ ಚುನಾವಣಾ ಆಯೋಗದ ಮತಗಳ್ಳತನ ಸಂಚಿನ ಕುರಿತು ವಿರೋಧ ಪಕ್ಷಗಳು ದ್ವನಿ ಎತ್ತಿದವು. ರಾಹುಲ್ ಗಾಂಧಿಯವರು ವಂಚನೆಯ ವಿವರಗಳನ್ನು ಬಯಲು ಮಾಡುತ್ತಲೇ ಬಂದರು. ಪ್ರಜ್ಞಾವಂತ ವ್ಯಕ್ತಿಗಳು ಹಾಗೂ ಸಂಘಟನೆಗಳು ಈ ವಂಚನೆಯ SIR ಕುತಂತ್ರವನ್ನು ಪ್ರಶ್ನಿಸಿದರು. ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಹತ್ತಿ ಸಂವಿಧಾನದ ಉಳಿವಿಗಾಗಿ, ಮತದಾರರ ಹಕ್ಕುಗಾಗಿ ಆಗ್ರಹಿಸಿದರು.

ಆದರೆ ಮೋಶಾ ಮಂಡಳಿಗೆ ಹಾಗೂ ಅದರ ಹಿಂದಿರುವ ಆರೆಸ್ಸೆಸ್ ಎನ್ನುವ ಮನುವಾದಿ ಸಂಘಟನೆಗೆ ದೇಶದ ಅಧಿಕಾರವನ್ನು ಏನಕೇನಪ್ರಕಾರೇಣ ದಕ್ಕಿಸಿಕೊಳ್ಳುವುದೇ ಮುಖ್ಯವಾಗಿತ್ತು. ಈಗಿರುವ ಬಹುತ್ವ ಪರ ಸಂವಿಧಾನವನ್ಜು ದುರ್ಬಲಗೊಳಿಸಿ ಹಿಂದುತ್ವವಾದಿ ಸರ್ವಾಧಿಕಾರದ ಆಡಳಿತವನ್ನು ಜಾರಿಗೆ ತರುವುದೇ ಅವರ ಗುರಿಯಾಗಿತ್ತು. ಅದಕ್ಕಾಗಿ ಈಡಿ, ಐಟಿ, ಸಿಬಿಐ ನಂತಹ ತನಿಖಾ ಸಂಸ್ಥೆಗಳನ್ನೆಲ್ಲಾ ತಮಗೆ ಬೇಕಾದಂತೆ ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ಪ್ರಮುಖ ನಾಯಕರುಗಳನ್ನೇ ಆಪೋಷಣ ಪಡೆಯಲಾಯ್ತು, ಪ್ರತಿಪಕ್ಷಗಳನ್ನೇ ಒಡೆಯಲಾಯ್ತು. ಚುನಾವಣೆ ಗೆಲ್ಲಲು ಇದಿಷ್ಟೇ ಸಾಲದು ಎಂದರಿತ ಮೋಶಾ ಪಡೆ ಚುನಾವಣಾ ಆಯೋಗವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಮತದಾರರ ಪಟ್ಟಿಯನ್ನೇ ಮ್ಯಾನುಪಲೇಟ್ ಮಾಡಲು ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯನ್ನೇ ಬದಲಾಯಿಸಿ, ಹೇಳಿದಂತೆ ಕೇಳುವ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಿ, ಎಂದೂ ಇಲ್ಲದ SIR ನ್ನು ಆರಂಭಿಸುವ ಮೂಲಕ ಚುನಾವಣಾ ವ್ಯವಸ್ಥೆಯನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯ್ತು. ಇದಕ್ಕೆಲ್ಲಾ ತಡೆ ಒಡ್ಡಬಹುದಾಗಿದ್ದ ಸುಪ್ರೀಂ ಕೋರ್ಟ್ ಸಹ ಮೋಶಾ ಸಂಚಿಗೆ ಬೆಂಬಲಿಸಿದ್ದು ವಿಪರ್ಯಾಸ.

ಅದೆಷ್ಟು ಕಾಲ ಇಂತಹ ವಂಚನೆಯನ್ನು ಮುಂದುವರೆಸಲು ಸಾಧ್ಯ? ಈಗ ಸಹಆಯುಕ್ತರಾದ ಡಾ.ಸುಖ್ಬೀರ್ ಸಿಂಗ್ ಮತ್ತು ಡಾ.ವಿವೇಕ ಜ್ಯೋಶಿಯವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರನ ಏಕಾಧಿಪತ್ಯವನ್ನು ಪ್ರಶ್ನಿಸಿದ್ದಾರೆ. ಆ ಕುರಿತು ಸ್ಪೋಟಕ ವರದಿಯನ್ನು ಇಂಡಿಯನ್ ಎಕ್ಸ್‌ಪ್ರೆಸ್ ದಿನ ಪತ್ರಿಕೆ ಪ್ರಕಟಿಸಿದೆ.

ಇಬ್ಬರೂ ಆಯುಕ್ತರು ಮುಖ್ಯ ಆಯುಕ್ತರ ಏಕಪಕ್ಷೀಯ ನಿರ್ಧಾರಗಳನ್ನು ಪ್ರಶ್ನಿಸಿ ಕಳೆದ 10 ತಿಂಗಳಲ್ಲಿ 14 ಬಾರಿ ತಮ್ಮ ಆಕ್ಷೇಪಗಳನ್ನು ಅನಧಿಕೃತವಾಗಿ ಸಲ್ಲಿಸಿದ್ದರು. ಅವುಗಳು ಯಾವವೆಂದರೆ..

ಆಯುಕ್ತರ ಆಕ್ಷೇಪಗಳು:

  • ತಮ್ಮನ್ನು ಮಾಹಿತಿ/ನಿರ್ಧಾರ ಪ್ರಕ್ರಿಯೆಯಿಂದ ದೂರ ಇಡಲಾಗಿದೆ.
  • ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ಅಳಿಸುವಿಕೆಗೆ ಸಂಬಂಧಿಸಿದ ಕೆಲವು ಕ್ರಮಗಳು “ಅನಧಿಕೃತ ಹಾಗು ಕಾನೂನುಬಾಹಿರವಾಗಿವೆ.
  • SIR ಪ್ರಕ್ರಿಯೆಗೆ ಸಂಬಂಧಿಸಿದ ಕೆಲವು ನಿರ್ಧಾರಗಳು ತಮ್ಮ ತಿಳುವಳಿಕೆ ಅಥವಾ ಒಪ್ಪಿಗೆಯಿಲ್ಲದೆ ನಡೆದಿವೆ.
  • ಚುನಾವಣಾ ಆಯೋಗದ ಮತದಾರರ ಸಾಫ್ಟ್‌ವೇರ್/ಡೇಟಾ ನಿರ್ವಹಣೆಯ ಸಮಗ್ರತೆ ಕುರಿತು ತಮಗೆ ತಿಳಿಯದಾಗಿದೆ.
  • ಮುಖ್ಯ ಆಯುಕ್ತರ ನಿರ್ಧಾರಗಳನ್ನು ನಾವು ಮಾಧ್ಯಮಗಳ ಮೂಲಕ ತಿಳಿದುಕೊಳ್ಳುವಂತಾಗಿದೆ.

ಹೀಗೆ ಇಬ್ಬರೂ ಆಯುಕ್ತರ ಆಕ್ಷೇಪಣೆಗಳನ್ನು ಯಾವಾಗ ಇಂಡಿಯನ್ ಎಕ್ಸಪ್ರೆಸ್ ತನ್ನ ತನಿಖಾ ವರದಿಯಲ್ಲಿ ಬಹಿರಂಗಪಡಿಸಿತೋ ಆಗ ದೇಶಾದ್ಯಂತ ರಾಜಕೀಯ ಸಂಚಲನ ಆರಂಭವಾಗಿದೆ. ಜ್ಞಾನೇಶ ಕುಮಾರರ ರಾಜೀನಾಮೆ ಹಾಗೂ ಬಂಧನವನ್ನು ಆಗ್ರಹಿಸಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪ್ರತಿಭಟನೆ ಆರಂಭಿಸಿದೆ. ಕಕ್ರೋಚ್ ಜನತಾ ಪಾರ್ಟಿಯು ಜ್ಞಾನೇಶ್ ಕುಮಾರರಿಗೆ 48 ಗಂಟೆ ಸಮಯ ಕೊಟ್ಟು ರಾಜೀನಾಮೆ ಕೊಡದಿದ್ದರೆ ದೇಶಾದ್ಯಂತ ಜೆನ್ ಜೀ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದೆ. ಈ ಹೋರಾಟ ದೇಶಾದ್ಯಂತ ತೀವ್ರವಾಗುವ ಸಾದ್ಯತೆಗಳು ಹೆಚ್ಚಾಗಿವೆ. ಮುಖ್ಯ ಚುಣಾವಣಾ ಅಧಿಕಾರಿಯನ್ನು ಬಂಧಿಸುವುದಷ್ಟೇ ಅಲ್ಲಾ SIR ಪರಿಷ್ಕರಣೆ ನಂತರ ನಡೆದ ರಾಜ್ಯಗಳ ಚುನಾವಣೆಗಳನ್ನೇ ಅಸಿಂಧು ಎಂದು ಘೋಷಿಸಿ ಮರು ಚುನಾವಣೆ ನಡೆಸಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ. ಕರ್ನಾಟಕವೂ ಸೇರಿದಂತೆ ಐದು ರಾಜ್ಯಗಳಲ್ಲಿ ಸಧ್ಯ ನಡೆಯುತ್ತಿರುವ SIR ಪರಿಷ್ಕರಣೆಯನ್ನು ನಿಲ್ಲಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ. ಮುಖ್ಯ ಚುನಾವಣಾಧಿಕಾರಿಗೆ ಆದೇಶ ನೀಡಿದ್ದಾರೆ ಎನ್ನಲಾಗುವ ಮೋಶಾ ರಾಜಿನಾಮೆಗೂ ಒತ್ತಾಯಿಸಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ SIR ಸಂಚಿನ ಹಿಂದಿರುವ ಮುಖ್ಯ ರೂವಾರಿಗಳು ಸಧ್ಯಕ್ಕೆ ಮೌನಕ್ಕೆ ಶರಣಾಗಿದ್ದಾರೆ. ಪ್ರತಿ ಸಲ ಚುನಾವಣಾ ಆಯೋಗದ ಸಮರ್ಥನೆಗೆ ಇಳಿಯುತ್ತಿದ್ದ ಬಿಜೆಪಿ ತಣ್ಣಗಿದೆ. ಈ ಉರುಳಿನಿಂದ ಬಿಜೆಪಿಯನ್ನು ಪಾರು ಮಾಡಲು ಮುಂದೆ ಯಾವ ದಾಳ ಉರುಳಿಸಬೇಕು ಎನ್ನುವ ತಂತ್ರಗಾರಿಕೆಯಲ್ಲಿ ಆರೆಸ್ಸೆಸ್ ನಿರತವಾಗಿದೆ. SIR ನ್ನು ಶತಾಯ ಗತಾಯ ಸಮರ್ಥಿಸಿಕೊಳ್ಳುತ್ತಿದ್ದ ಅಂಧಭಕ್ತರು ಇಂಗು ತಿಂದ ಮಂಗನಂತಾಗಿದ್ದಾರೆ. ಮತ್ತೆ ಯಾವುದಾದರೂ ದೇಶಪ್ರೇಮದ ಹೆಸರಿನ ಭಾವನಾತ್ಮಕ ಸಂಗತಿಯನ್ನು ಮುನ್ನಲೆಗೆ ತಂದು ಈ ಕ್ರೈಸಿಸ್ ನಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಮೋದಿ ಶಾ ಜೋಡಿ ಪ್ಲಾನ್ ಮಾಡುತ್ತಿದೆ. ಹಾಗೂ ಪ್ರತಿಭಟನೆಗಳು ಮಿತಿ ಮೀರಿದರೆ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಸಾದರ ರಾಜೀನಾಮೆ ಪಡೆದು ಪ್ರಹ್ಲಾದ್ ಜ್ಯೋಶಿಯವರನ್ನು ಮಂತ್ರಿ ಮಾಡಿದಂತೆ ಚುನಾವಣಾ ಮುಖ್ಯ ಆಯುಕ್ತರಾದ ಜ್ಞಾನೇಶ ಕುಮಾರರ ತಲೆದಂಡ ಪಡೆದು ಬೇರೊಬ್ಬ ಹೌದಪ್ಪನನ್ನು ಅಲ್ಲಿ ಪ್ರತಿಷ್ಠಾಪಿಸುವ ಆಯ್ಕೆ ಮೋದಿಯವರ ಮುಂದಿದೆ.

ಈಗ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಮುಖ್ಯ ನ್ಯಾಯಾಧೀಶರನ್ನು ಚುನಾವಣಾ ಆಯುಕ್ತರ ಆಯ್ಕೆ ಮಂಡಳಿಯಿಂದ ಹೊರಗಿಟ್ಟಿದ್ದರ ಕುರಿತು ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಿದೆ. ತ್ರೀಸದಸ್ಯ ಪೀಠದಿಂದ ಪಂಚ ಸದಸ್ಯರ ಪೀಠಕ್ಕೆ ವಿಚಾರಣೆಯನ್ಜು ವರ್ಗಾಯಿಸಲಾಗಿದೆ. ಈಗ ಇತರೇ ಆಯುಕ್ತರ ಸಹಮತ ಹಾಗೂ ಬಹುಮತ ಇಲ್ಲದೇ ಮುಖ್ಯ ಚುನಾವಣಾಧಿಕಾರಿ ಏಕಪಕ್ಷೀಯವಾಗಿ ತೆಗೆದುಕೊಂಡ ಎಲ್ಲಾ ನಿರ್ಧಾರಗಳನ್ನೂ ಸುಪ್ರೀಂ ಕೋರ್ಟ್ ನಿಷೇಧಿಸಬಹುದಾಗಿದೆ. SIR ಪ್ರಕ್ರಿಯೆಗೇ ತಡೆ ಒಡ್ಡಬಹುದಾಗಿದೆ. ಇಲ್ಲದೇ ಹೋದರೆ ಮಾಮೂಲಿನಂತೆ ಇಡೀ ಹಗರಣದ ಪರಿಶೀಲನೆಗೆ ಒಂದು SIT ರಚಿಸಿ ವಿಳಂಬ ಧೋರಣೆ ತೋರಬಹುದಾಗಿದೆ.

ಬಹುಮತ ಇಲ್ಲದೇ ನಿರ್ಧಾರಗಳನ್ನು ತೆಗೆದುಕೊಂಡ ಮುಖ್ಯ ಚುನಾವಣಾಧಿಕಾರಿ ಸಂವಿಧಾನ ವಿರೋಧಿ ಕೃತ್ಯವನ್ನು ಎಸಗಿದ್ದಾರೆ. ಅವರು ಮಾಡಬಹುದಾದ ಅಪರಾಧಗಳಿಗೆ ಮೊದಲೇ ಕಾನೂನಾತ್ಮಕ ರಕ್ಷಣೆಯನ್ನೂ ಪಡೆದಿದ್ದಾರೆ. ಆದರೆ ಜ್ಞಾನೇಶ ಕುಮಾರರು ಮಾಡಿದ್ದು ದೇಶದ್ರೋಹ, ಡೆಮಾಕ್ರಸಿಯ ಬುನಾದಿಯನ್ನೇ ಶಿಥಿಲಗೊಳಿಸುವ ಸಂಚು. ಅದಕ್ಕಾಗಿ ಅವರು ತಕ್ಷಣ ರಾಜೀನಾಮೆ ಕೊಡಲೇಬೇಕಿದೆ. ಅವರು ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರಗಳೆಲ್ಲವನ್ನೂ ಸುಪ್ರೀಂ ಕೋರ್ಟ್ ಕೂಡಲೇ ರದ್ದು ಪಡಿಸಬೇಕಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಅವರನ್ನು ಬಂಧಿಸಿ ಸುಪ್ರಿಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಹಾಗೂ ವಿಚಾರಣೆ ನಡೆಸಬೇಕಿದೆ. ಜ್ಞಾನೇಶ ಕುಮಾರ ಹಿಂದಿರುವ ಎಲ್ಲ ವ್ಯಕ್ತಿ ಮತ್ತು ಶಕ್ತಿಗಳನ್ನು ಈ ದೇಶದ ಜನತೆ ತೀವ್ರವಾಗಿ ವಿರೋಧಿಸಬೇಕಿದೆ. ಸಂವಿಧಾನದ ರಕ್ಷಣೆಗಾಗಿ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಈಗಾಗಲೇ ಹಾಳಾಗಿರುವ ಚುನಾವಣಾ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬೇಕೆಂದು ಹೋರಾಡ ಬೇಕಿದೆ.

2023ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ (Anup Baranwal v. Union of India), ಸಂಸತ್ತು ಕಾನೂನು ರೂಪಿಸುವವರೆಗೆ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಇರಬೇಕೆಂದು ಆದೇಶಿಸಿತ್ತು. ಆದರೆ, ಕೇಂದ್ರ ಸರ್ಕಾರವು 2023ರ ಕೊನೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು “ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ ಕಾಯ್ದೆ, 2023” ಅನ್ನು ಜಾರಿಗೆ ತಂದಿತು.

Related Articles

ಇತ್ತೀಚಿನ ಸುದ್ದಿಗಳು