Tuesday, March 3, 2026

ಸತ್ಯ | ನ್ಯಾಯ |ಧರ್ಮ

4 ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರಾಜ್ಯದಲ್ಲಿ ತಿರಸ್ಕರಿಸಿ – ಸಿಐಟಿಯು ಆಗ್ರಹ

ಹಾಸನ : ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಪ್ರಕಟಿಸುವಂತೆ ಹಾಗೂ ಕಾರ್ಮಿಕ ವಿರೋಧಿಯಾಗಿರುವ ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಹಾಸನದ ಉಪ ಕಾರ್ಮಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಸಾಮೂಹಿಕವಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಅವರು ‘ಏಳು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸಬೇಕು ಹಾಗೂ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ತಿರಸ್ಕರಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಿಐಟಿಯು ಹಾಸನ ಜಿಲ್ಲಾ ಸಮಿತಿಯು ಮಾನ್ಯ ಉಪ ಕಾರ್ಮಿಕ ಆಯುಕ್ತರ ಮುಖಾಂತರ ಮುಖ್ಯಮಂತ್ರಿಗಳಿಗೆ ಸುದೀರ್ಘ ಮನವಿ ಸಲ್ಲಿಸಿದೆ. ರಾಜ್ಯ ಸರ್ಕಾತ ಕನಿಷ್ಠ ವೇತನ ಪ್ರಕಟಣೆಯಲ್ಲಿ ವಿಳಂಬ ಮಾಡುತ್ತಿದೆ. ರಾಜ್ಯದಲ್ಲಿನ ಅನುಸೂಚಿತ ಉದ್ದಿಮೆಗಳ ಕಾರ್ಮಿಕರಿಗಾಗಿ ಏಪ್ರಿಲ್ 2025ರಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಕನಿಷ್ಠ ವೇತನ ಸಲಹಾ ಮಂಡಳಿಯು ಆಗಸ್ಟ್ 2025ರಲ್ಲಿಯೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ, ಈವರೆಗೂ ಅಂತಿಮ ಪ್ರಕಟಣೆ ಹೊರಬಿದ್ದಿಲ್ಲ. ಕನಿಷ್ಠ ವೇತನ ಪರಿಷ್ಕರಣೆಯಾಗಿ ಏಳು ವರ್ಷಗಳೇ ಕಳೆದಿವೆ. ಫೆಬ್ರವರಿ 18, 2026ರ ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 3784/2026ರ ತೀರ್ಪಿನ ಪ್ರಕಾರ, ನೂತನ ಪ್ರಾಧಿಕಾರಗಳು ರಚನೆಯಾಗುವವರೆಗೆ ಹಳೆಯ ಕಾರ್ಮಿಕ ಇಲಾಖೆಯ ಪ್ರಾಧಿಕಾರಗಳೇ ಮುಂದುವರೆಯಲಿವೆ. ಹೀಗಾಗಿ ಕನಿಷ್ಠ ವೇತನ ಘೋಷಣೆಗೆ ಯಾವುದೇ ಕಾನೂನಿನ ತೊಡಕಿಲ್ಲದಿರುವುದರಿಂದ, ಲಕ್ಷಾಂತರ ದುರ್ಬಲ ಕಾರ್ಮಿಕರ ಆರ್ಥಿಕ ಸ್ವಾವಲಂಬನೆಗಾಗಿ ಕೂಡಲೇ ಕನಿಷ್ಠ ವೇತನ ಪ್ರಕಟಿಸಬೇಕು ಎಂದು ಆಗ್ರಹಿಸಿಸಿದರು.

ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಮೇಲೆ ಬೀಕರ ಪರಿಣಾಮಗಳನ್ನು ಬೀರುತ್ತವೆ
ಬಿ.ಜೆ.ಪಿ. ನೇತೃತ್ವದ ಕೇಂದ್ರ ಸರ್ಕಾರ ಅಂಗೀಕರಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರು ಒಂದು ಶತಮಾನದ ಹೋರಾಟದಿಂದ ಪಡೆದ ಹಕ್ಕುಗಳನ್ನು ಕಿತ್ತುಕೊಳ್ಳಲಿವೆ. ಇದರಿಂದ ರಾಜ್ಯದ 1.8 ಕೋಟಿ ಅಸಂಘಟಿತ ಕಾರ್ಮಿಕರ ಬದುಕು ನಾಶವಾಗಲಿದೆ. ಕೈಗಾರಿಕಾ ಸಂಬಂಧಗಳ ಸಂಹಿತೆ ಮುಖಾಂತರ ಮುಷ್ಕರ ಅಥವಾ ಒಕ್ಕೂಟ ರಚಿಸಲು ಶೇ. 75ರಷ್ಟು ಕಾರ್ಮಿಕರ ಬೆಂಬಲ ಕಡ್ಡಾಯಗೊಳಿಸುವ ಮೂಲಕ ಕಾರ್ಮಿಕರ ಸಾಂಸ್ಥಿಕವಾಗಿ ಹೋರಾಡುವ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಅಲ್ಲದೆ, 300 ಕಾರ್ಮಿಕರಿರುವ ಉದ್ದಿಮೆಗಳು ಸರ್ಕಾರದ ಅನುಮತಿಯಿಲ್ಲದೆ ಕಾರ್ಮಿಕರನ್ನು ವಜಾಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕರ್ನಾಟಕದ ಶೇ. 88.5ರಷ್ಟು ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿನ 10-12 ಲಕ್ಷ ಸಂಘಟಿತ ಕಾರ್ಮಿಕರ ಉದ್ಯೋಗ ಭದ್ರತೆ ಅಪಾಯದಲ್ಲಿದೆ. ವೇತನ ಸಂಹಿತೆ ಜಾರಿ ಮಾಡಿರುವ ಪರಿಣಾಮ ‘ಕನಿಷ್ಠ ವೇತನ’ದ ವ್ಯಾಖ್ಯಾನದಲ್ಲಿ ತುಟ್ಟಿ ಭತ್ಯೆ, ಬೋನಸ್ ಮುಂತಾದ ಭತ್ಯೆಗಳನ್ನು ಮೂಲ ವೇತನದ ಭಾಗವಾಗಿಸಿರುವುದರಿಂದ ಕಾರ್ಮಿಕರ ನಿವ್ವಳ ಆದಾಯ ಶೇ. 30 ರಿಂದ 50ರಷ್ಟು ಕುಸಿಯಲಿದೆ. ವೃತ್ತಿಪರ ಸುರಕ್ಷತಾ ಸಂಹಿತೆಯು ದಿನಕ್ಕೆ 12 ಗಂಟೆಗಳ ಕಾಲ ದುಡಿಸಿಕೊಳ್ಳಲು ಈ ಸಂಹಿತೆ ಅವಕಾಶ ನೀಡಿದ್ದು, ಇದು ಅತ್ಯಂತ ಅಮಾನವೀಯವಾಗಿದೆ. ರಾಜ್ಯದಲ್ಲಿ 2020-23ರ ಅವಧಿಯಲ್ಲಿ ಕೈಗಾರಿಕಾ ಅಪಘಾತಗಳು ಶೇ. 12ರಷ್ಟು ಹೆಚ್ಚಾಗಿರುವಾಗ ಸುರಕ್ಷತಾ ಮಾನದಂಡಗಳ ಸಡಿಲಿಕೆ ಮತ್ತಷ್ಟು ಅಪಾಯ ತಂದೊಡ್ಡಲಿದೆ. ಸಾಮಾಜಿಕ ಭದ್ರತಾ ಸಂಹಿತೆಯಿಂದ ಶೇ. 90ರಷ್ಟು ಕಾರ್ಮಿಕರಿಗೆ ಸಾರ್ವತ್ರಿಕ ಪಿಂಚಣಿ, ಆರೋಗ್ಯ ವಿಮೆ ಮತ್ತು ನಿರುದ್ಯೋಗ ವೇತನದ ಹಕ್ಕನ್ನು ನಿರಾಕರಿಸಲಾಗಿದೆ.
25 ಲಕ್ಷ ನಿರ್ಮಾಣ ಕಾರ್ಮಿಕರು ವೇತನ ಕಡಿತ ಹಾಗೂ ತಾತ್ಕಾಲಿಕ ಯೋಜನೆಗಳಿಗೆ ಮಾತ್ರ ಸೀಮಿತವಾಗಲಿದ್ದಾರೆ. 15 ಲಕ್ಷ ಬೀದಿ ಬದಿ ವ್ಯಾಪಾರಿಗಳ ಆದಾಯವನ್ನು ‘ವೇತನ’ವೆಂದು ಗುರುತಿಸುವುದಿಲ್ಲ. 12 ಲಕ್ಷ ಗೃಹ ಕಾರ್ಮಿಕರು ಸುರಕ್ಷಿತ ಕೆಲಸದ ಪರಿಸರ ಹಾಗೂ ವಿಶ್ರಾಂತಿಯ ಹಕ್ಕಿನಿಂದ ವಂಚಿತರಾಗಲಿದ್ದಾರೆ. 8 ಲಕ್ಷ ಆಟೋ ಚಾಲಕರನ್ನು ಗಿಗ್ ವರ್ಕರ್ಸ್ ಎಂದು ವರ್ಗೀಕರಿಸಿ ಸಾಂಪ್ರದಾಯಿಕ ಕಾರ್ಮಿಕ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. 5 ಲಕ್ಷ ಹಮಾಲರು ದಿನಕ್ಕೆ 12 ಗಂಟೆಗಳ ದುಡಿಮೆಯಿಂದ ದೈಹಿಕ ದುರ್ಬಲತೆಗೆ ಗುರಿಯಾಗಲಿದ್ದಾರೆ. 3 ಲಕ್ಷ ಬೀಡಿ ಕಾರ್ಮಿಕರು ಕಾರ್ಖಾನೆ ಶಾಸನದ ರಕ್ಷಣೆಯಿಲ್ಲದೆ ಗಂಭೀರ ಆರೋಗ್ಯದ ಅಪಾಯ ಎದುರಿಸಲಿದ್ದಾರೆ ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ ಅವರು ಈ ಕಾರ್ಮಿಕ ಸಂಹಿತೆಗಳ ಜಾರಿಯಿಂದ ರಾಜ್ಯದ ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರು ಉದ್ಯೋಗ ಭದ್ರತೆ ಹಾಗೂ ಪಿಂಚಣಿ ಸೌಲಭ್ಯವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕೇಂದ್ರ ಸರ್ಕಾರವು ಪಿ.ಎಫ್, ಇ.ಎಸ್.ಐ ಕುರಿತು ಹಸಿ ಸುಳ್ಳುಗಳನ್ನು ಹರಿಬಿಡುತ್ತಿದೆ. ದೇಶದ ಶೇ. 93ರಷ್ಟು ಕಾರ್ಮಿಕರಿಗೆ ಈ ನೂತನ ಸಂಹಿತೆಗಳಿಂದ ಯಾವುದೇ ಲಾಭವಿಲ್ಲ, ಬದಲಾಗಿ ಇದು ನವ ಜೀತ ಪದ್ಧತಿಯನ್ನು ಜಾರಿಗೊಳಿಸಲಿದೆ. ಹಾಗಾಗಿ ಮಾರ್ಚ್ 6ರಿಂದ ಆರಂಭವಾಗಲಿರುವ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ, ಸಂವಿಧಾನದ ಅನುಚ್ಛೇದ 242ರ ಅನ್ವಯ ರಾಜ್ಯ ಸರ್ಕಾರವು ಈ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುವುದಿಲ್ಲ ಎಂದು ಘೋಷಿಸುವ ಶಾಸನಸಭಾ ನಿರ್ಣಯವನ್ನು ಕಡ್ಡಾಯವಾಗಿ ಅಂಗೀಕರಿಸಬೇಕು ಎಂದು ಸಿಐಟಿಯು ಒತ್ತಾಯಿಸುತ್ತದೆ ಎಂದರು

ಮನವಿ ಸಲ್ಲಿಕೆ ವೇಳೆ ಸಿಐಟಿಯು ಜಿಲ್ಲಾ ಖಜಾಂಚಿ ಅರವಿಂದ ಹಾಗೂ ಕಾರ್ಮಿಕ ಮುಖಂಡರಾದ ಕೆ.ಟಿ. ಹೊನ್ನೇಗೌಡ, ಮಂಜುಳ, ಪ್ರಕಾಶ, ರಮೇಶ, ಕುಮಾರಸ್ವಾಮಿ, ಚಂದ್ರೇಗೌಡ, ಜಯಂತಿ, ಮೀನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page