ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರನ್ನು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯದ ಮಾಹಿತಿಯಂತೆ ಬಿ.ಆರ್ ಗವಾಯಿ ಅವರು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಸಿಜೆಐ ಗವಾಯಿಯವರು ತೆಲಂಗಾಣಕ್ಕೆ ಹೋಗಿದ್ದ ಸಂದರ್ಭದಲ್ಲಿ ತೀವ್ರ ಸೋಂಕು ತಗುಲಿ ಆರೋಗ್ಯದಲ್ಲಿ ಏರುಪೇರಾಗಿತ್ತು. ದೆಹಲಿ ಆಸ್ಪತ್ರೆ ಮೂಲಗಳು ಈವರೆಗೆ ಅವರಿಗೆ ತಗುಲಿರುವ ಸೋಂಕಿನ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿಲ್ಲ. “ಸಿಜೆಐ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಒಂದು ಅಥವಾ ಎರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಿ ಕರ್ತವ್ಯಕ್ಕೆ ಮರಳುವ ನಿರೀಕ್ಷೆಯಿದೆ” ಎಂದು ಪಿಟಿಐ ಉಲ್ಲೇಖಿಸಿದೆ.
ಅನಾರೋಗ್ಯದಿಂದಾಗಿ ಸಿಜೆಐ ಬಿಆರ್ ಗವಾಯಿ ಇಂದು ನ್ಯಾಯಾಲಯದ ವಿಚಾರಣೆಯ ಅಧ್ಯಕ್ಷತೆ ವಹಿಸಿರಲಿಲ್ಲ. ಈ ವಿಷಯದ ಮಾಹಿತಿ ನೀಡಿರುವ ಅಧಿಕಾರಿಗಳು, ಮುಖ್ಯ ನ್ಯಾಯಮೂರ್ತಿಗಳು ಸ್ಥಿರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಮುಂದಿನ ಒಂದೆರಡು ದಿನಗಳಲ್ಲಿ ತಮ್ಮ ಅಧಿಕೃತ ಜವಾಬ್ದಾರಿಗಳಿಗೆ ಮರಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.