ದೆಹಲಿ: ಸುಪ್ರೀಂ ಕೋರ್ಟ್ ಆವರಣದಲ್ಲಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದು ಹಲ್ಲೆ ಮಾಡಲು ಯತ್ನಿಸಿದ ಘಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಕೃತ್ಯದಿಂದ ಇಡೀ ಭಾರತೀಯ ಸಮುದಾಯದಲ್ಲಿ ಆಕ್ರೋಶ ಉಂಟಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ಮೋದಿ, “ಸಿಜೆಐ ಬಿ.ಆರ್. ಗವಾಯಿ ಅವರೊಂದಿಗೆ ನಾನು ಮಾತನಾಡಿದ್ದೇನೆ. ಅವರ ಮೇಲೆ ನಡೆದ ಈ ದಾಳಿಯಿಂದ ಎಲ್ಲಾ ಭಾರತೀಯರು ಕೋಪಗೊಂಡಿದ್ದಾರೆ. ಇಂತಹ ಹೀನ ಕೃತ್ಯಕ್ಕೆ ನಮ್ಮ ಸಮಾಜದಲ್ಲಿ ಯಾವುದೇ ಅವಕಾಶವಿಲ್ಲ. ಇದು ಅತ್ಯಂತ ಖಂಡನಾರ್ಹವಾದ ಘಟನೆಯಾಗಿದೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ, “ಇಂತಹ ಸವಾಲಿನ ಪರಿಸ್ಥಿತಿಯಲ್ಲಿಯೂ ತಾಳ್ಮೆ ಮತ್ತು ಸಂಯಮ ಪ್ರದರ್ಶಿಸಿದ ಸಿಜೆಐ ಗವಾಯಿ ಅವರ ನಡೆ ಶ್ಲಾಘನೀಯ. ಇದು ಸಿಜೆಐ ಅವರ ಉನ್ನತ ಬದ್ಧತೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುತ್ತದೆ” ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.