Home ದೇಶ ಐಸಿಯುನಲ್ಲಿ ಬೆಂಕಿ; ಆರು ರೋಗಿಗಳು ಸಾವು: ಜೈಪುರ ಆಸ್ಪತ್ರೆಯಲ್ಲಿ ಘಟನೆ

ಐಸಿಯುನಲ್ಲಿ ಬೆಂಕಿ; ಆರು ರೋಗಿಗಳು ಸಾವು: ಜೈಪುರ ಆಸ್ಪತ್ರೆಯಲ್ಲಿ ಘಟನೆ

0

ಜೈಪುರ: ಜೈಪುರದ ಸವಾಯ್ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದ ಅಗ್ನಿ ಆಕಸ್ಮಿಕದಲ್ಲಿ ಆರು ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಇನ್ನೂ ಹಲವು ರೋಗಿಗಳ ಸ್ಥಿತಿ ಗಂಭೀರವಾಗಿದೆ. ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ, ಘಟನೆಯ ಬಗ್ಗೆ ಉನ್ನತ ಮಟ್ಟದ ಸಮಿತಿಯಿಂದ ತನಿಖೆಗೆ ಆದೇಶಿಸಿದ್ದಾರೆ. ಆಸ್ಪತ್ರೆಯ ಪ್ರಕಟಣೆಯ ಪ್ರಕಾರ, ನ್ಯೂರೋ ಸರ್ಜರಿ ಐಸಿಯು 1 ರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು. ಆ ಸಮಯದಲ್ಲಿ ಅಲ್ಲಿ 11 ರೋಗಿಗಳು ಇದ್ದರು. ತಕ್ಷಣವೇ ಎಲ್ಲರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು, ಆದರೆ ಅವರಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ.

ಅಪಾಯ ಸಂಭವಿಸಿದ ಸಮಯದಲ್ಲಿ ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಒಟ್ಟು 46 ಹಾಸಿಗೆಗಳು ರೋಗಿಗಳಿಂದ ತುಂಬಿದ್ದವು. ಆಸ್ಪತ್ರೆಯಲ್ಲಿ ಹೊಗೆ ಬರುತ್ತಿದೆ ಎಂದು ಹೇಳಿದರೂ ಸಿಬ್ಬಂದಿ ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ರೋಗಿಗಳು ಮತ್ತು ಅವರ ಸಂಬಂಧಿಕರು ದೂರಿದ್ದಾರೆ. ಬೆಂಕಿ ಕಾಣಿಸಿಕೊಂಡ ನಂತರ ಮೊದಲು ಸಿಬ್ಬಂದಿಯೇ ಅಲ್ಲಿಂದ ಓಡಿಹೋಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಐಸಿಯುನಲ್ಲಿ ಯಾವುದೇ ಅಗ್ನಿಶಾಮಕ ವ್ಯವಸ್ಥೆ ಇರಲಿಲ್ಲ ಮತ್ತು ಬೆಂಕಿ ನಂದಿಸಲು ಕನಿಷ್ಠ ನೀರು ಕೂಡ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಖಂಡಿಸಿ ರೋಗಿಗಳು ಮತ್ತು ಅವರ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪಘಾತದಿಂದಾಗಿ ಭಾರಿ ಹೊಗೆ ಆವರಿಸಿದ್ದರಿಂದ ಅಗ್ನಿಶಾಮಕ ವಾಹನಗಳಿಗೆ ಬೆಂಕಿ ನಂದಿಸಲು ತಕ್ಷಣವೇ ಸಾಧ್ಯವಾಗಲಿಲ್ಲ. ಆದರೆ ತಾವು ಕೆಲವು ರೋಗಿಗಳನ್ನು ರಕ್ಷಿಸಿದ್ದೇವೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಫೋರೆನ್ಸಿಕ್ ತಂಡದ ತನಿಖೆಯಿಂದ ಅಪಘಾತಕ್ಕೆ ನಿಖರ ಕಾರಣ ತಿಳಿಯಲಿದೆ ಎಂದು ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ತಿಳಿಸಿದ್ದಾರೆ.

You cannot copy content of this page

Exit mobile version