ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಷಯವನ್ನು ಸೇರಿಸಿರುವುದನ್ನು ಸುಪ್ರೀಂ ಕೋರ್ಟ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ನ್ಯಾಯಾಂಗದ ಸಮಗ್ರತೆಗೆ ಕಳಂಕ ತರಲು ಅಥವಾ ಅಪಕೀರ್ತಿ ಎಸಗಲು ಯಾರನ್ನೂ ಬಿಡುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಜಸ್ಟಿಸ್ ಸೂರ್ಯಕಾಂತ್ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಂಗವನ್ನು ಕೀಳಾಗಿ ಬಿಂಬಿಸುವ ಈ ಅಧ್ಯಾಯದ ಬಗ್ಗೆ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ ಮತ್ತಿತರರು ಪ್ರಸ್ತಾಪಿಸಿ, ಈ ವಿಷಯವನ್ನು ತುರ್ತಾಗಿ ಪರಿಶೀಲಿಸಬೇಕು ಎಂದು ಮಾಡಿದ ಮನವಿಯ ಮೇರೆಗೆ, ಸಿಜೆಐ ಜೊತೆಗೆ ನ್ಯಾಯಮೂರ್ತಿಗಳಾದ ಜೋಯ್‌ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ಸ್ವಯಂಪ್ರೇರಿತವಾಗಿ (ಸುಮೋಟೋ) ವಿಚಾರಣೆಗೆ ಸ್ವೀಕರಿಸಿದೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ನ್ಯಾಯಾಂಗದ ಬಗ್ಗೆ ಇರುವ ಆಕ್ಷೇಪಾರ್ಹ ಹೇಳಿಕೆಗಳನ್ನು ವಕೀಲರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಎನ್‌ಸಿಇಆರ್‌ಟಿ 8ನೇ ತರಗತಿಯ ಸಮಾಜ ವಿಜ್ಞಾನದ ಹೊಸ ಪಠ್ಯಪುಸ್ತಕಗಳಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಹೆಸರಿನಲ್ಲಿ ಒಂದು ಅಧ್ಯಾಯವನ್ನು ಸೇರಿಸಲಾಗಿದೆ. ನ್ಯಾಯಮೂರ್ತಿಗಳು ಕೇವಲ ನ್ಯಾಯಾಲಯದಲ್ಲಿನ ತಮ್ಮ ನಡವಳಿಕೆಗೆ ಮಾತ್ರವಲ್ಲದೆ, ನ್ಯಾಯಾಲಯದ ಹೊರಗೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನೂ ನಿಯಂತ್ರಿಸುವ ನಡವಳಿಕಾ ಸಂಹಿತೆಗೆ ಬದ್ಧರಾಗಿರುತ್ತಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. “ಈ ವ್ಯವಸ್ಥೆಯ ಸದಸ್ಯರಾಗಿರುವ ನಮಗೆ, 8ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ರೀತಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಹೇಳುವುದು ಬಹಳ ಮುಜುಗರ ಉಂಟುಮಾಡಿದೆ. ಈ ಅಧ್ಯಾಯವು ನಮ್ಮ ವ್ಯವಸ್ಥೆಗೆ ಸಂಪೂರ್ಣವಾಗಿ ಅಪಕೀರ್ತಿ ತರುವಂತಿದೆ” ಎಂದು ಕಪಿಲ್ ಸಿಬಲ್ ತಿಳಿಸಿದರು.
ಈ ಸಂದರ್ಭದಲ್ಲಿ ಎನ್‌ಸಿಇಆರ್‌ಟಿ ವಿಷಯ ಆಯ್ಕೆ ಮಾಡಿಕೊಂಡ ವಿಧಾನವನ್ನು ಸಿಂಘ್ವಿ ಟೀಕಿಸಿದರು. “ಅವರು ದೇಶದಲ್ಲಿ ಬೇರೆಲ್ಲೂ ಭ್ರಷ್ಟಾಚಾರವೇ ಇಲ್ಲ ಎಂದು ಭಾವಿಸಿದಂತಿದೆ. ಅಧಿಕಾರಶಾಹಿ, ರಾಜಕೀಯ, ಸಾರ್ವಜನಿಕ ಜೀವನ ಅಥವಾ ಇತರ ಸಂಸ್ಥೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಒಂದು ಮಾತೂ ಇಲ್ಲ” ಎಂದು ಅವರು ಹೇಳಿದರು.
ಸಿಬಲ್ ಪ್ರಸ್ತಾಪಿಸಿದ ವಿಷಯದ ಬಗ್ಗೆ ತಮಗೆ ಪೂರ್ಣ ಅರಿವಿದೆ ಎಂದು ಹೇಳಿದ ಸಿಜೆಐ ಸೂರ್ಯಕಾಂತ್, ಈ ಬಗ್ಗೆ ಈಗಾಗಲೇ ಹಲವಾರು ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಇತರರಿಂದ ತಮಗೆ ಫೋನ್ ಕರೆಗಳು ಹಾಗೂ ಸಂದೇಶಗಳು ಬಂದಿರುವುದು ಕಳವಳಕಾರಿಯಾಗಿದೆ ಎಂದರು. ಇದನ್ನು ಸುಮೋಟೋ ಆಗಿ ಸ್ವೀಕರಿಸಬೇಕು ಎಂದು ಕಪಿಲ್ ವಿನಂತಿಸಿದಾಗ, “ಇದರ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಇದು ಇಡೀ ನ್ಯಾಯಾಂಗಕ್ಕೆ ಸಂಬಂಧಿಸಿದ ವಿಷಯ. ಇದೊಂದು ಉದ್ದೇಶಪೂರ್ವಕ ಕೃತ್ಯದಂತೆ ಕಾಣುತ್ತಿದೆ. ಎಷ್ಟೇ ಉನ್ನತ ಸ್ಥಾನದಲ್ಲಿರುವವರೇ ಆಗಿರಲಿ, ನ್ಯಾಯಾಂಗವನ್ನು ಅಪಕೀರ್ತಿಗೆ ಒಳಪಡಿಸಲು ನಾನು ಬಿಡುವುದಿಲ್ಲ. ಸ್ವತಃ ನಾನೇ ಈ ವಿಷಯವನ್ನು ಪರಿಶೀಲಿಸುತ್ತೇನೆ” ಎಂದು ಸಿಜೆಐ ತಿಳಿಸಿದರು. ಇದನ್ನು ಹೇಗೆ ನಿರ್ವಹಿಸಬೇಕು ಎಂಬುದು ತಮಗೆ ತಿಳಿದಿದೆ ಎಂದು ಅವರು ಹೇಳಿದರು. ಈ ವಿಷಯವನ್ನು ಎತ್ತಿದ ವಕೀಲರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಮಾರಾಟ ಸ್ಥಗಿತಗೊಳಿಸಿದ ಎನ್‌ಸಿಇಆರ್‌ಟಿ
ಪಠ್ಯಪುಸ್ತಕದ ಒಂದು ಅಧ್ಯಾಯದ ಬಗ್ಗೆ ವಿವಾದ ಉಂಟಾದ ಹಿನ್ನೆಲೆಯಲ್ಲಿ, ಎನ್‌ಸಿಇಆರ್‌ಟಿ ಬುಧವಾರದಿಂದ 8ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ಮಾರಾಟವನ್ನು ಸ್ಥಗಿತಗೊಳಿಸಿದೆ. “ನ್ಯಾಯಾಂಗದ ವಿವಿಧ ಹಂತಗಳಲ್ಲಿ ಜನರು ಭ್ರಷ್ಟಾಚಾರವನ್ನು ಅನುಭವಿಸುತ್ತಿದ್ದಾರೆ. ಬಡವರು ಮತ್ತು ಹಿಂದುಳಿದವರಿಗೆ ನ್ಯಾಯ ಪಡೆಯುವಲ್ಲಿ ಇದು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ವಿಶ್ವಾಸವನ್ನು ಮೂಡಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ” ಎಂದು ಆ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿತ್ತು.
